ಕೋಲ್ಕತ: ಪಶ್ಚಿಮ ಬಂಗಾಲದಲ್ಲಿ ವಿಧಾನಸಭಾ ಚುನಾವಣೆ ಸನ್ನಿಹಿತವಾಗುತ್ತಿರುವ ಹಿನ್ನೆಲೆಯಲ್ಲಿ ಆಳುವ ಟಿಎಂಸಿಗೆ ಸೇರಿದ ದುಷ್ಕರ್ಮಿಗಳು ಕಚ್ಚಾ ಬಾಂಬ್ ಮತ್ತಿತರ ಶಸ್ತ್ರಾಸ್ತ್ರ ಸಂಗ್ರಹದಲ್ಲಿ ತೊಡಗಿದ್ದಾರೆ ಎಂಬುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿರುವಂತೆಯೇ, ರಾಜ್ಯದ ಮುರ್ಷಿದಾಬಾದ್ ಜಿಲ್ಲೆಯ ಶಂಸೇರ್ಗುಂಜ್ ಪ್ರದೇಶದಲ್ಲಿರುವ ಟಿಎಂಸಿ ಕಾರ್ಯಕರ್ತ ಹುಮಾಯೂನ್ ಕಬೀರ್ ಎಂಬಾತ ಬಾಂಬ್ ತಯಾರಿಸುತ್ತಿದ್ದಾಗ ಸೋಟಗೊಂಡು ಸಾವಿಗೀಡಾದ ಘಟನೆ ನಡೆದಿದೆ.
ಟಿಎಂಸಿಯ ಸಕ್ರಿಯ ಕಾರ್ಯಕರ್ತನಾಗಿರುವ ಹುಮಾಯೂನ್ ಕಬೀರ್(೪೦)ತನ್ನ ಮನೆಯ ಮಹಡಿಯಲ್ಲಿ ಕಚ್ಚಾ ಬಾಂಬ್ಗಳನ್ನು ತಯಾರಿಸುತ್ತಿದ್ದಾಗ ಸ್ಫೋಟಗೊಂಡು ಸಾವಿಗೀಡಾದ ಘಟನೆ ಶನಿವಾರ ರಾತ್ರಿ ನಡೆದಿತ್ತು.ಈತನ ೧೦ವರ್ಷ ಪ್ರಾಯದ ಮಗ ಗಂಭೀರ ಗಾಯಗೊಂಡಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.
ಜಂಗೀಪುರ ಉಪವಿಭಾಗೀಯ ಪೊಲೀಸ್ ಅಧಿಕಾರಿ ಪ್ರಸೇನ್ಜಿತ್ ಬ್ಯಾನರ್ಜಿ ಅವರು ಈ ಬಗ್ಗೆ ಮಾಹಿತಿ ನೀಡಿ, ಪ್ರಾಥಮಿಕ ತನಿಖೆಯಲ್ಲಿ ಕಬೀರ್ ಬಾಂಬ್ ತಯಾರಿಸುವ ವೇಳೆ ಒಂದು ಬಾಂಬ್ ಸ್ಫೋಟಗೊಂಡಿದೆ.ಈತ ಸಾವಿಗೀಡಾಗಿ ಈತನ ಮಗ ಗಾಯಗೊಂಡಿದ್ದಾನೆ . ತನಿಖೆ ಮುಂದುವರಿದಿದೆ ಎಂದು ತಿಳಿಸಿದ್ದಾರೆ.ಈ ನಡುವೆ ಈತ ಪಕ್ಷದ ಕಾರ್ಯಕರ್ತನೆಂಬುದನ್ನು ಆಳುವ ಟಿಎಂಸಿ ನಿರಾಕರಿಸಿ ಪಕ್ಷಕ್ಕೂ ಆತನಿಗೂ ಸಂಬಂಧ ಇಲ್ಲವೆಂಬುದಾಗಿ ನುಣುಚಿಕೊಳ್ಳಲೆತ್ನಿಸಿದೆ. ಹಾಗೆಯೇ ಆತನ ಕುಟುಂಬವೂ ಆತ ಬಾಂಬ್ ತಯಾರಿಯಲ್ಲಿ ತೊಡಗಿದ್ದನೆಂಬುದನ್ನು ನಿರಾಕರಿಸಿದೆ. ರಾಜ್ಯದಲ್ಲಿ ಟಿಎಂಸಿ ಬೆಂಬಲಿಗರು ವ್ಯಾಪಕ ಬಾಂಬ್ ತಯಾರಿಯಂತಹ ದುಷ್ಕೃತ್ಯದಲ್ಲಿ ತೊಡಗಿರುವುದಾಗಿ ಗಂಭೀರ ಆರೋಪಗಳು ಕೇಳಿಬಂದಿವೆ.