ಬೆಂಗಳೂರು: ದೇಶದ್ರೋಹ ಆರೋಪದಲ್ಲಿ ಬಂಧನಕ್ಕೀಡಾಗಿರುವ ಅಮೂಲ್ಯ ಲಿಯೋನಾ ಮತ್ತು ಆಕ್ಷೇಪಾರ್ಹ ಭಿತ್ತಿಪತ್ರ ಪ್ರದರ್ಶಿಸಿದ ಆದ್ರಾ ಇಬ್ಬರೂ ಜತೆಯಲ್ಲಿ ವಾಸವಿದ್ದ ಸಹಪಾಠಿಗಳು ಎಂದು ಪೊಲೀಸರ ತನಿಖೆ ವೇಳೆ ಬಹಿರಂಗವಾಗಿದೆ.
ಪಶ್ಚಿಮ ವಿಭಾಗದ ಡಿಸಿಪಿ ರಮೇಶ್ ಬಾನೋತ್ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ (ಎಸ್ಐಟಿ) ಆದ್ರಾ ಮತ್ತು ಅಮೂಲ್ಯರ ಪ್ರಕರಣ ತನಿಖೆ ನಡೆಸುತ್ತಿದ್ದು, ಬುಧವಾರ ಅಮೂಲ್ಯ ಲಿಯೋನ್ ವಾಸವಿದ್ದ ಬಸವೇಶ್ವರನಗರದ ಪಿಜಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಅಲ್ಲಿ ಕೆಲವು ದಾಖಲಾತಿಗಳು ಪತ್ತೆಯಾಗಿವೆ. ಪ್ರತಿಭಟನೆಗೆ ಸಂಬಂಧಪಟ್ಟ ಕೆಲವು ಬರವಣಿಗೆಗಳು, ಅಮೂಲ್ಯಳ ಖಾಸಗಿ ಡೈರಿ, ಕೆಲವು ಫೋಟೋಗಳು ಈ ಸಂದರ್ಭದಲ್ಲಿ ಕಂಡು ಬಂದಿದ್ದು ಅವುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಇಷ್ಟು ದಿನ ಅಮೂಲ್ಯ ಮತ್ತು ಆದ್ರಾ ಫೇಸ್ಬುಕ್ ಸ್ನೇಹಿತರು ಮಾತ್ರ ಎಂದು ಹೇಳಲಾಗಿತ್ತು. ಆದರೆ, ತನಿಖೆ ವೇಳೆ ಇವರಿಬ್ಬರು ಒಂದೇ ಕೊಠಡಿಯ ಸಹಪಾಠಿಗಳೆಂದು ಪತ್ತೆ ಹಚ್ಚಿದ್ದಾರೆ. ಆ ಹಿನ್ನೆಲೆಯಲ್ಲಿ ಕೆಲ ಗಂಟೆಗಳ ಕಾಲ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ಅಮೂಲ್ಯಳನ್ನು ವಿಚಾರಣೆ ನಡೆಸಿ, ಅದರ ಸಂಪೂರ್ಣವಾದ ವಿಡಿಯೋ ಮಾಡಿದ್ದಾರೆ.
ಅಮೂಲ್ಯಗೆ ಸಾಥ್ ನೀಡುತ್ತಿದ್ದ ಆದ್ರಾ, ಅಮೂಲ್ಯಾಗೆ ಪ್ರಚೋದನಕಾರಿ ಭಾಷಣ ಮಾಡಿ ಗುರುತಿಸಿಕೊಳ್ಳುವ ಅಭಿರುಚಿ ಹೊಂದಿದ್ದಳು. ಆದರೆ, ಅಮೂಲ್ಯ ಏನು ಮಾಡುತ್ತಾಳೆ ಅದಕ್ಕೆಲ್ಲ ಆದ್ರಾ ಕೈಜೋಡಿಸುತ್ತಿದ್ದಳು. ಹೀಗಾಗಿಯೇ ಫೆ.20 ರಂದು ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆದ ಕಾರ್ಯಕ್ರಮ ವೇಳೆ ಆದ್ರಾ ಕೂಡ ಬಂದಿದ್ದಳು. ಯಾವಾಗ ಅಮೂಲ್ಯಳನ್ನು ಬಂಧಿಸಲಾಯಿತು ಈ ವೇಳೆ ತಾನು ಜೈಲಿಗೆ ಹೋಗಲು ನಿರ್ಧರಿಸಿದ್ದಳು. ಹೀಗಾಗಿ ಪುರಭವನದ ಬಳಿ ನಡೆದಿದ್ದ ಪ್ರತಿಭಟನೆ ವೇಳೆ ಬೇಕಂತಲೇ ಬಂದು ಫ್ರೀ ಕಾಶ್ಮೀರ್ ಎಂದು ಪೊಲೀಸರಿಗೆ ತಿಳಿಯುವಂತೆ ಬೋರ್ಡ್ ಇಟ್ಟಿದ್ದಳು ಎಂಬುದು ಬೆಳಕಿಗೆ ಬಂದಿದೆ.
ಈ ವೇಳೆ, ಪೊಲೀಸರು ಆಕೆಯನ್ನು ಬಂಧಿಸಿ ಜೈಲಿಗಟ್ಟಿದ್ದು, ಈ ಮೂಲಕ ಅಮೂಲ್ಯ ಹಾಗೂ ಆದ್ರಾ ಒಂದೇ ಜೈಲಿಗೆ ಸೇರಿರುವ ವಿಚಾರ ತನಿಖೆಯಲ್ಲಿ ಬಟಾ ಬಯಲಾಗಿದೆ. ಸದ್ಯ ಪಶ್ಚಿಮ ವಿಭಾಗದ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ಅಮೂಲ್ಯ ಪೊಲೀಸರ ವಶದಲ್ಲಿದ್ದಾಳೆ. ಪೊಲೀಸರು ಅಮೂಲ್ಯಳ ಹಿನ್ನೆಲೆ ಆಕೆಯ ಚಲನವಲನದ ಕುರಿತು ಸಂಪೂರ್ಣ ತನಿಖೆ ನಡೆಸುತ್ತಿದ್ದಾರೆ. ಹಾಗೆ ಆಕೆಗೆ ಬೆಳಗಿನ ತಿಂಡಿ, ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಿಕೊಟ್ಟು ಬಸವೇಶ್ವರ ನಗರ ಠಾಣೆಯ ಸುತ್ತ ಖಾಕಿ ಕಣ್ಗಾವಲು ಹಾಕಿ ಸಂಪೂರ್ಣ ಭದ್ರತೆ ವಹಿಸಲಾಗಿದೆ.