ಸೌದಿ ಅರೇಬಿಯಾ: ಸೌದಿ ಅರೇಬಿಯಾ ಪಾಕಿಸ್ತಾನಕ್ಕೆ ನೀಡುತ್ತಿದ್ದ ಸಾಲ ಹಾಗೂ ತೈಲ ಪೂರೈಕೆ ಕೊನೆಗೊಳಿಸುವುದರೊಂದಿಗೆ ಉಭಯ ದೇಶಗಳ ನಡುವಿನ ದಶಕಗಳ ಸ್ನೇಹವು ಅಂತಿಮವಾಗಿ ಕೊನೆಗೊಂಡಿದೆ ಎಂದು ಮಧ್ಯಪ್ರಾಚ್ಯ ಮಾನಿಟರ್ ವರದಿ ಮಾಡಿದೆ.
2018ರ ಅಂತ್ಯದಲ್ಲಿ ಸೌದಿ ಅರೇಬಿಯಾವು 6.2 ಬಿಲಿಯನ್ ಡಾಲರ್ ಪ್ಯಾಕೇಜನ್ನು ಪಾಕಿಸ್ತಾನಕ್ಕೆ ನೀಡುವುದಾಗಿ ಘೋಷಿಸಿತ್ತು. ಅದರಲ್ಲಿ 3 ಬಿಲಿಯನ್ ಹಣದ ರೂಪದ ಸಾಲ ಹಾಗೂ 3.2 ಬಿಲಿಯನ್ ಮೊತ್ತದ ತೈಲವನ್ನು ಸಾಲವನ್ನು ನೀಡುವ ಒಪ್ಪಂದವಾಗಿತ್ತು. 2019ರ ಫೆಬ್ರವರಿಯಲ್ಲಿ ರಾಜ ಮೊಹಮ್ಮದ್ ಬಿನ್ ಸಲ್ಮಾನ್ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಒಪ್ಪಂದಕ್ಕೆ ಸಹಿ ಹಾಕಿದ್ದರು.
ಕಾಶ್ಮೀರ ವಿಷಯದ ಬಗ್ಗೆ ಭಾರತದ ವಿರುದ್ಧ ನಿಲುವು ತೆಗೆದುಕೊಳ್ಳದ ಕಾರಣ ಪಾಕಿಸ್ತಾನ ವಿದೇಶಾಂಗ ಸಚಿವ ಶಾ ಮೆಹಮೂದ್ ಖುರೇಷಿ ಅವರು ಸೌದಿ ಅರೇಬಿಯಾ ನೇತೃತ್ವದ ಇಸ್ಲಾಮಿಕ್ ಸಹಕಾರ ಸಂಸ್ಥೆಗೆ (ಒಐಸಿ) ಸ್ಪಷ್ಟ ಎಚ್ಚರಿಕೆ ನೀಡಿದ ನಂತರ ಈ ಬೆಳವಣಿಗೆ ನಡೆದಿದೆ.
ಕಾಶ್ಮೀರಿಗಳನ್ನು ಬೆಂಬಲಿಸಲು ನೀವು ಸಭೆ ಕರೆಯಲು ಸಾಧ್ಯವಾಗದಿದ್ದರೇ ಕಾಶ್ಮೀರದ ವಿಷಯದಲ್ಲಿ ನಮ್ಮೊಂದಿಗೆ ನಿಲ್ಲಲು ಸಿದ್ಧವಿರುವ ಇಸ್ಲಾಮಿಕ್ ರಾಷ್ಟ್ರಗಳ ಸಭೆ ಕರೆಯುವಂತೆ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಕೇಳಿಕೊಳ್ಳುತ್ತೇನೆ ಎಂದು ಖುರೇಷಿ ಹೇಳಿದ್ದರು.
ಜತೆಗೆ, ಮಾಧ್ಯಮಗಳು ಈ ವಿಷಯಕ್ಕೆ ಸಂಬಂಧಿಸಿದಂತೆ ಕೇಳಿದ್ದ ಪ್ರಶ್ನೆಗೆ ಉತ್ತರ ನೀಡಿದ್ದ ಖುರೇಷಿ, ಇನ್ನಷ್ಟು ಸಮಯ ಕಾಯಲು ಪಾಕಿಸ್ತಾನ ಸಿದ್ಧವಿಲ್ಲ. ಒಂದು ವೇಳೆ ವಿದೇಶಾಂಗ ಸಚಿವರ ಸಮಿತಿ ಸಭೆಯನ್ನು ಕರೆಯಲು ಸಾಧ್ಯವಾಗದಿದ್ದಲ್ಲಿ ಓಐಸಿ ಹೊರಗೆ ಸೆಷನ್ ನಡೆಸಲು ಪಾಕಿಸ್ತಾನವು ಸಿದ್ಧವಿದೆ ಎಂದಿದ್ದರು. ಇದು ಪಾಕ್ಗೆ ಸಹಿಸಲು ಸಾಧ್ಯವಾಗಿರಲಿಲ್ಲ.
ಕಾಶ್ಮೀರ ವಿಚಾರದಲ್ಲಿ ಸೌದಿ ಅರೇಬಿಯಾವನ್ನು ಪಾಕಿಸ್ತಾನ ಟೀಕಿಸಿದ್ದನ್ನು ಗಂಭೀರವಾಗಿ ಪರಿಗಣಿಸಿ, ಸೌದಿಗೆ ನೀಡಲಿರುವ ಸಾಲ ಮತ್ತು ತೈಲ ಸರಬರಾಜನ್ನು ನಿಲ್ಲಿಸುವುದಾಗಿ ತಿಳಿಸಿದೆ.