ಹುಬ್ಬಳ್ಳಿ: ನಗರದ ಕೆ.ಎಲ್.ಎಂಜಿನಿಯರಿಂಗ್ ಕಾಲೇಜಿನಲ್ಲಿ ಪಾಕಿಸ್ಥಾನ ಪರ ಘೋಷಣೆ ಕೂಗಿದ್ದ ಕಾಶ್ಮೀರಿ ವಿದ್ಯಾರ್ಥಿಗಳ ಜಾಮೀನು ಪ್ರಕರಣದಲ್ಲಿ ಕರ್ತವ್ಯ ಲೋಪವೆಸಗಿದ ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಜಾಕ್ಸನ್ ಡಿಸೋಜಾರನ್ನು ಅಮಾನತು ಮಾಡಲಾಗಿದೆ.
ಉತ್ತರ ವಲಯದ ಐಜಿಪಿ ರಾಘವೇಂದ್ರ ಸುಹಾಸ್, ಹುಬ್ಬಳ್ಳಿ ಗ್ರಾಮೀಣ ಠಾಣೆಯ ಇನ್ಸ್ಪೆಕ್ಟರ್ ಜಾಕ್ಸನ್ ಡಿಸೋಜಾ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
90 ದಿನಗಳೊಳಗೆ ಪ್ರಕರಣದ ಜಾರ್ಜ್ಶೀಟ್ ಸಲ್ಲಿಸದ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ೨ ನೇ ಜೆಎಂಎಫ್ಸಿ ನ್ಯಾಯಾಲಯದಿಂದ ಆರೋಪಿಗಳಿಗೆ ಜಾಮೀನು ಸಿಕ್ಕಿತ್ತು. ಹೀಗಾಗಿ ಪ್ರಕರಣದಲ್ಲಿ ಹುಬ್ಬಳ್ಳಿಯ ಗ್ರಾಮೀಣ ಠಾಣೆ ಪೊಲೀಸರ ನಿರ್ಲಕ್ಷ್ಯ ಕಂಡು ಬಂದಿತ್ತು. ಆದ್ದರಿಂದ ಕರ್ತವ್ಯ ಲೋಪ, ನಿರ್ಲಕ್ಷ್ಯತನದ ಗಂಭೀರ ಸ್ವರೂಪದ ಆರೋಪದಡಿ ಪೊಲೀಸ್ ಅಕಾರಿ ಅಮಾನತು ಶಿಕ್ಷೆಗೆ ಒಳಗಾಗಿದ್ದಾರೆ.
ಪಾಕಿಸ್ಥಾನದ ಪರವಾಗಿ ಘೋಷಣೆ ಕೂಗಿದ್ದ ಆರೋಪದ ಮೇಲೆ ಮೂವರು ಆರೋಪಿಗಳನ್ನು ಬಂಸಲಾಗಿತ್ತು.
ಆರೋಪಿಗಳು ಜಾಮೀನು ಕೋರಿ ಕೋರ್ಟ್ ಮೊರೆ ಹೋಗಿದ್ದರು. ಒಮ್ಮೆ ಆರೋಪಿಗಳು ಬಂತರಾದರೆ ೯೦ ದಿನಗಳವರೆಗೆ ಆರೋಪಪಟ್ಟಿ ಸಲ್ಲಿಕೆ ಮಾಡಬೇಕಾದುದು ನಿಯಮ. ಆದರೆ, ಹುಬ್ಬಳ್ಳಿಯ ಇನ್ಸ್ಪೆಕ್ಟರ್ ಜಾಕ್ಸನ್ ಡಿಸೋಜಾ ಅವರು ಕರ್ತವ್ಯ ಲೋಪ ಎಸಗಿದ್ದರು. ಇದನ್ನೇ ಆಧಾರವಾಗಿಟ್ಟುಕೊಂಡು ಈ ವಿದ್ಯಾರ್ಥಿಗಳ ಪರ ವಕೀಲರು ಕೋರ್ಟ್ನಲ್ಲಿ ವಾದಿಸಿದ್ದರು. ಈ ಹಿನ್ನೆಲೆಯಲ್ಲಿ 2 ನೇ ಜೆಎಂಎಫ್ಸಿ ನ್ಯಾಯಾಲಯ ಅನಿವಾರ್ಯವಾಗಿ ಜಾಮೀನು ನೀಡಬೇಕಾಯಿತು. ಈ ಬಗ್ಗೆ ವಿಚಾರಣೆ ನಡೆಸಿದಾಗ ಡಿಸೋಜಾ ಕರ್ತವ್ಯಲೋಪ ಎಸಗಿರುವುದು ಬೆಳಕಿಗೆ ಬಂದಿದ್ದು , ಅವರನ್ನು ಅಮಾನತು ಮಾಡಲಾಗಿದೆ.