ಮಂಗಳೂರು/ಪುತ್ತೂರು: ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ನಡೆದ ಸಿಎಎ ವಿರೋಧಿ ಪ್ರತಿಭಟನೆ ಸಂದರ್ಭದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ ಅಮೂಲ್ಯ ಲಿಯೋನ ವಿರುದ್ಧ ಕರಾವಳಿಯಲ್ಲಿ ಆಕ್ರೋಶ ಮುಂದುವರಿದಿದೆ.
ಪುತ್ತೂರು ವಿವೇಕಾನಂದ ಕಾಲೇಜಿನ ಎಬಿವಿಪಿ ಶನಿವಾರ ನೆಹರೂ ನಗರದ ವಿವೇಕಾನಂದರ ಪ್ರತಿಮೆಯ ಬಳಿ ಆಕೆಯ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಿದ್ದರೆ, ಪಾಕಿಸ್ಥಾನ ಪರ ಘೋಷಣೆ ಕೂಗಿರುವುದನ್ನು ದೇಶದ್ರೋಹವೆಂದು ಪರಿಗಣಿಸಿ ಆಯೋಜಕನ ಸಹಿತ ಅಮೂಲ್ಯ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಬಿಜೆಪಿ ಯುವ ಮೋರ್ಚಾದ ಸದಸ್ಯರು ಮಂಗಳೂರು ನಗರ ಉತ್ತರ ಮಂಡಲದ ಅಧ್ಯಕ್ಷ ಭರತ್ ರಾಜ್ ಕೃಷ್ಣಾಪುರ ನೇತೃತ್ವದಲ್ಲಿ ಸುರತ್ಕಲ್ ಪೊಲೀಸ್ ಠಾಣಾಧಿಕಾರಿ ಚಂದ್ರಪ್ಪ ಅವರಿಗೆ ಮನವಿ ಸಲ್ಲಿಸಿದರು.
ಅಮೂಲ್ಯ ಲಿಯೋನ ಗಡಿಪಾರಿಗೆ ಆಗ್ರಹ: ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಎಬಿವಿಪಿ ನಗರ ಮುಖಂಡ ಕಾರ್ತಿಕ್, ದೇಶದಲ್ಲಿ ಹುಟ್ಟಿ ಬೆಳೆದು, ದೇಶದ ಅನ್ನವನ್ನು ಉಂಡು ದೇಶದ್ರೋಹಿ ಚಟುವಟಿಕೆಗಳಲ್ಲಿ ಭಾಗವಹಿಸಿ ಪಾಕಿಸ್ಥಾನಕ್ಕೆ ಜಿಂದಾಬಾಂದ್ ಕೂಗಿದ ಅಮೂಲ್ಯ ಲಿಯೋನಳನ್ನು ದೇಶದಿಂದಲೇ ಗಡಿಪಾರು ಮಾಡುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.
ಮಂಗಳೂರು ವಿಭಾಗದ ವಿದ್ಯಾರ್ಥಿನಿ ಪ್ರಮುಖ್ ಮನಿಷಾ ಶೆಟ್ಟಿ, ದೇಶ ವಿರೋಧಿ ಕೃತ್ಯಗಳಲ್ಲಿ ಭಾಗವಹಿಸಿ, ಪಾಕಿಸ್ತಾನಕ್ಕೆ ಜಿಂದಾಬಾದ್ ಕೂಗಿದ ಅಮೂಲ್ಯ ಲಿಯೋನಳಿಗೆ ಉಗ್ರ ಶಿಕ್ಷೆ ನೀಡಬೇಕು. ಅವಳ ಹಿಂದೆ ಕೆಲವೊಂದು ಕಾಣದ ಶಕ್ತಿಗಳು ಅಡಕವಾಗಿದ್ದು ಅವರನ್ನು ಪತ್ತೆ ಮಾಡಿ ಅವರಿಗೂ ಉಗ್ರ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿದರು.
ಅಮೂಲ್ಯ ಪ್ರತಿಕೃತಿ ಚಟ್ಟದಲ್ಲಿ ಹೊತ್ತುತಂದು ದಹನ: ಪುತ್ತೂರು ಕಾಲೇಜು ಬಳಿಯಿಂದ ಹೊರಟ ವಿದ್ಯಾರ್ಥಿಗಳು ಅಮೂಲ್ಯ ಪ್ರತಿಕೃತಿ ಚಟ್ಟದಲ್ಲಿ ಹೊತ್ತು ತಂದು ಅವಳ ವಿರುದ್ಧ ಧಿಕ್ಕಾರ ಕೂಗುತ್ತಾ ವಿವೇಕಾನಂದರ ಪ್ರತಿಮೆ ಬಳಿಗೆ ಸಾಗಿ ಬಂದರು. ದೇಶ ದ್ರೋಹಿ ಕೃತ್ಯ ನಡೆಸಿದ ಅಮೂಲ್ಯಳ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.
ಎಬಿವಿಪಿ ಮುಖಂಡರಾದ ಮನೀಷ್ ಕುಲಾಲ್, ಹರ್ಷಿತ್, ಜಗದೀಶ್, ಶಶಾಂಕ್, ಪ್ರಾಣೇಶ್, ನೂರಾರು ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಆಕೆಯನ್ನು ದೇಶದಿಂದ ಗಡಿಪಾರು ಮಾಡಬೇಕು
ದೇಶದಲ್ಲಿ ಹುಟ್ಟಿ ಬೆಳೆದು, ದೇಶದ ಅನ್ನವನ್ನು ಉಂಡು ದೇಶ ದ್ರೋಹಿ ಚಟುವಟಿಕೆಗಳಲ್ಲಿ ಭಾಗವಹಿಸಿ ಪಾಕಿಸ್ಥಾನಕ್ಕೆ ಜಿಂದಾಬಾಂದ್ ಕೂಗಿದ ಅಮೂಲ್ಯ ಲಿಯೋನಳನ್ನು ದೇಶದಿಂದಲೇ ಗಡಿಪಾರು ಮಾಡಬೇಕು.
-ಕಾರ್ತಿಕ್, ಎಬಿವಿಪಿ ಪುತ್ತೂರು ನಗರ ಮುಖಂಡ