ಹೊಸ ದಿಗಂತ ವರದಿ, ಶಿವಮೊಗ್ಗ:
ಮಹಾನಗರ ಪಾಲಿಕೆಯ ಸರ್ವೆ ನಂ.35 ಮತ್ತು 34ಕ್ಕೆ ಲಗತ್ತಾಗಿರುವ ಪಾಲಿಕೆ ಸೇರಿದ 1 ಎಕರೆ 26 ಗುಂಟೆ ಜಾಗ ಗ್ರಾಮ ಠಾಣಾ ಆಗಿದೆ. ಇಲ್ಲಿ ಒತ್ತುವರಿ ಆಗಿದ್ದರೂ ಪಾಲಿಕೆ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಪಾಲಿಕೆ ಕಾಂಗ್ರೆಸ್ ಸದಸ್ಯರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಗ್ರಾಮಠಾಣ ಪಕ್ಕದಲ್ ಲೇಔಟ್ ಮಾಲಿಕರು ಗ್ರಾಮಠಾಣೆ ರಸ್ತೆಯನ್ನು ಒತ್ತುವರಿ ಮಾಡಿ ಲೇಔಟ್ ನಲ್ಲಿ ವಾಸ ಮಾಡುತ್ತಿರುವ ಜನಕ್ಕೆ ಓಡಾಡಲು ಅವಕಾಶ ಮಾಡಿಕೊಟ್ಟಿದ್ದಾರೆ. ಮಹಾನಗರ ಪಾಲಿಕೆ ಆಸ್ತಿಯಲ್ಲಿ ಸುಮಾರು 10 ರಿಂದ 15 ತಾತ್ಕಾಲಿಕ ಶೆಡ್ಡುಗಳನ್ನು ಹಾಕಿದ್ದಾರೆ. ಇದೇ ಜಾಗದಲ್ಲಿ ಪರಿಶಿಷ್ಟ ಜಾತಿ-ಪಂಗಡಕ್ಕೆ ಸೇರಿದ ಅನೇಕ ಜನರು ವಾಸವಾಗಿದ್ದು ಅವರು ಸಹ ತಾತ್ಕಾಲಿಕ ಮನೆಗಳನ್ನು ಕಟ್ಟಿಕೊಂಡಿದ್ದಾರೆ. ಮಹಾನಗರ ಪಾಲಿಕೆಯಿಂದ ಪರಿಶಿಷ್ಟ ಜಾತಿ ಮತ್ತು ಪಂಗಡದವರ ಮನೆಗಳನ್ನು ತೆರೆವುಗೊಳಿಸಿದ್ದಾರೆ. ಆದರೆ ಗ್ರಾಮಠಾಣಾ ವ್ಯಾಪ್ತಿಯಲ್ಲಿ ಕಟ್ಟಿರುವ ಇನ್ನು ಅನೇಕ ಮನೆಗಳನ್ನು ತೆರೆವುಗೊಳಿಸಿಲ್ಲ ಎಂದು ದೂರಿದರು.
ಮಹಾನಗರ ಪಾಲಿಕೆ ಹಾಗೂ ಶಿವಮೊಗ್ಗ ನಗರಾಭಿವೃದ್ಧಿ ಪ್ರಾಧಿಕಾರದವರು ಜಂಟಿ ಸರ್ವೆ ಮಾಡಿ ಪಾಲಿಕೆಯ ಗ್ರಾಮಠಾಣಾ ಜಾಗದ ಒತ್ತುವರಿ ತೆರವುಗೊಳಿಸಬೇಕು. ಅಲ್ಲಿ ವಾಸಮಾಡಿತ್ತಿರುವ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಆಶ್ರಯ ಯೋಜನೆ ಅಡಿಯಲ್ಲಿ ಸೂರನ್ನು ಕಲ್ಪಿಸಿಕೊಡಬೇಕಾಗಿ ಒತ್ತಾಯಿಸಿದರು.
ಮಹಾನಗರಪಾಲಿಕೆ ವಿರೋಧ ಪಕ್ಷದ ನಾಯಕ ಹೆಚ್ .ಸಿ. ಯೋಗೇಶ್, ಸದಸ್ಯರಾದ ಮಂಜುಳಾ ಶಿವಣ್ಣ, ಕಾಂಗ್ರೆಸ್ ಪಕ್ಷದ ಮುಖಂಡರಾದ ಶರೀಫ್, ಪವನ್ ಮತ್ತು ಸ್ಥಳೀಯರು ಇದ್ದರು.