ಪಿಎಂ ಕೇರ್ ಫಂಡ್ ಬಗ್ಗೆ ಆಧಾರ ರಹಿತ ಆರೋಪ: ಕಾಂಗ್ರೆಸ್‌ ಹೇಯ ರಾಜಕೀಯಕ್ಕೆ ನಳಿನ್ ಆಕ್ರೋಶ

0
248

ಮಂಗಳೂರು: ಪ್ರಧಾನಿ ನರೇಂದ್ರ ಮೋದಿಯವರು ಅತ್ಯಂತ ಅಸಾಮಾನ್ಯ ರೀತಿಯಲ್ಲಿ ಕೋವಿಡ್-19ರ ವಿರುದ್ಧ ಹೋರಾಟ ನಡೆಸಿ ವಿಶ್ವದ ಮೆಚ್ಚುಗೆ ಗಳಿಸುತ್ತಿದ್ದರೆ, ಕಾಂಗ್ರೆಸ್‌ನ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಮಾತ್ರ ಪ್ರಧಾನಿಯವರು ಬಿಕ್ಕಟ್ಟು ನಿಭಾಯಿಸುವುದಕ್ಕಾಗಿ ಆರಂಭಿಸಿದ ಪಿಎಂ ಕೇರ್ ಫಂಡ್ ಬಗ್ಗೆ ಕಾಂಗ್ರೆಸ್ ಪಕ್ಷದ ಟ್ವೀಟ್‌ನಲ್ಲಿ ಆಧಾರರಹಿತ ಆರೋಪ ಮಾಡಿ ಹೀನ ರಾಜಕೀಯಕ್ಕಿಳಿದಿರುವುದು ಅತ್ಯಂತ ಖಂಡನೀಯ. ಇದು ಕಾಂಗ್ರೆಸ್‌ನ ಬೌದ್ಧಿಕ ದಿವಾಳಿತನದ ದ್ಯೋತಕ ಎಂಬುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಹೇಳಿದ್ದಾರೆ.
ದೇಶ ಕಂಡ ಅಪ್ರತಿಮ ನಾಯಕ ಹಾಗೂ ಪ್ರಾಮಾಣಿಕತೆಯೊಂದಿಗೆ ದೇಶದ ಜನತೆಯ ಗೌರವಾದರಗಳಿಗೆ ಪಾತ್ರರಾಗಿರುವ ಪ್ರಧಾನಿ ಮೋದಿಯವರು ಪಿಎಂ ಕೇರ್ ಫಂಡನ್ನು ವೈಯಕ್ತಿಕ ಉದ್ದೇಶಕ್ಕೆ ಬಳಸಿಕೊಂಡಿದ್ದಾರೆ ಎಂಬುದಾಗಿ ಪಕ್ಷದ ಟ್ವೀಟ್‌ನಲ್ಲಿ ಯಾವುದೇ ಆಧಾರವಿಲ್ಲದೆ ಹೀನ ಆರೋಪ ಮಾಡಿರುವ ಸೋನಿಯಾ ಗಾಂಧಿ, ಕೊರೋನಾ ಬಿಕ್ಕಟ್ಟಿನಲ್ಲಿ ಕಾಂಗ್ರೆಸ್ ಎಂತಹ ಹತಾಶೆಗೆ ಸಿಲುಕಿದೆ ಎಂಬುದನ್ನು ಪ್ರದರ್ಶಿಸಿದ್ದಾರೆ.ಕೇಂದ್ರ ಸರಕಾರ ಮತ್ತು ಪ್ರಧಾನಿ ಮೋದಿಯವರು ಭಾರತೀಯರನ್ನು ಈ ಸಂಕಟದಿಂದ ಪಾರು ಮಾಡಲು ಹಗಲಿರುಳು ಶ್ರಮಿಸುತ್ತಿದ್ದರೆ ಕಾಂಗ್ರೆಸ್ ಕೀಳು ರಾಜಕೀಯ ಪ್ರದರ್ಶಿಸುತ್ತಿದೆ ಎಂಬುದಾಗಿ ನಳಿನ್ ಕುಮಾರ್ ಹೇಳಿಕೆಯೊಂದರಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಮಾಲೆ ಕಣ್ಣಿನವರಿಗೆ ಲೋಕವೆಲ್ಲ ಹಳದಿ ಎಂಬಂತೆ, ಭ್ರಷ್ಟಾಚಾರವನ್ನೇ ಉಸಿರಾಗಿರಿಸಿಕೊಂಡಿರುವ ಕಾಂಗ್ರೆಸ್ ಪ್ರಧಾನಿ ಮೋದಿಯವರ ವಿರುದ್ಧ ಇಂತಹ ಆರೋಪ ಮಾಡುತ್ತಿರುವುದು ವಿಪರ್ಯಾಸ. ಎಲ್ಲ ಕಡೆ ಇಂತಹ ಕೀಳು ರಾಜಕೀಯ ಮಾಡಿ ಜನತೆಯಿಂದ ಹಿಡಿಶಾಪಕ್ಕೆ ಗುರಿಯಾಗುತ್ತಿರುವ ಕಾಂಗ್ರೆಸ್ ಇನ್ನೂ ಪಾಠಕಲಿಯದಿರುವುದು ದುರಂತ ಎಂಬುದಾಗಿ ಅವರು ಹೇಳಿದ್ದಾರೆ.
ಕೊರೋನಾ ಬಿಕ್ಕಟ್ಟಿನ ವಿರುದ್ಧ ಇಡಿ ದೇಶ ಒಂದಾಗಿ ಹೋರಾಟ ನಡೆಸಬೇಕೆಂದು ಪ್ರಧಾನಿಯವರು ಕರೆ ನೀಡಿದ್ದಾರೆ. ರಾಜಕೀಯ ಭಿನ್ನತೆ ಪರಿಗಣಿಸದೆ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೋವಿಡ್ -19ರ ವಿರುದ್ಧ ದಿಟ್ಟ ಹೋರಾಟ ನಡೆಸಲು ನೇತೃತ್ವ ನೀಡಿರುವ ಪ್ರಧಾನಿ ಮೋದಿಯವರ ವಿರುದ್ಧ ಇಂತಹ ಕ್ಷುದ್ರ ಆರೋಪ ಮಾಡುವ ಮೂಲಕ ಕಾಂಗ್ರೆಸ್ ಜನತೆಯಿಂದ ಇನ್ನಷ್ಟು ತಿರಸ್ಕಾರಕ್ಕೆ ಗುರಿಯಾಗಲಿದೆ. ಈಗಲಾದರೂ ಎಚ್ಚೆತ್ತುಕೊಂಡು ಈ ಬಿಕ್ಕಟ್ಟಿನಿಂದ ದೇಶವನ್ನು ಪಾರು ಮಾಡಲು ಒಂದಾಗಿ ಹೋರಾಟ ನಡೆಸುವ ಪ್ರಧಾನಿಯವರ ಕರೆಗೆ ಸ್ಪಂದಿಸಲಿ ಕಾಂಗ್ರೆಸ್ ಎಂದು ನಳಿನ್ ಹೇಳಿದ್ದಾರೆ.
ಪ್ರಧಾನಿಯವರ ವಿರುದ್ಧ ಇಂತಹ ಸುಳ್ಳು ಆರೋಪ ಮಾಡಿರುವ ಸುಳ್ಳುಕೋರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿರುವ ನಳಿನ್ , ಯಾವುದೇ ಕಾರಣಕ್ಕೂ ಸೋನಿಯಾ ವಿರುದ್ಧ ಸಾಗರ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ನ್ನು ಹಿಂಪಡೆಯಬಾರದೆಂದು ಒತ್ತಾಯಿಸಿದ್ದಾರೆ. ದೇಶದ ಪ್ರಧಾನಿಯವರ ವಿರುದ್ಧ ಕಾಂಗ್ರೆಸ್‌ನ ಸುಳ್ಳು ಆರೋಪ ವಿರುದ್ಧ ಸಾಗರದ ನ್ಯಾಯವಾದಿಯೊಬ್ಬರು ದೂರು ದಾಖಲಿಸಿದ್ದರು.
ಸೋನಿಯಾ ಗಾಂಧಿಯವರೇ, ಕಳೆದ ಏಳು ದಶಕಗಳಲ್ಲಿ ದೇಶದಲ್ಲಿ ಗಾಂಧಿ ಕುಟುಂಬದ ಕೇರ್ ಮಾಡುತ್ತಾ ದೇಶದ ಕೇರ್‌ನ್ನು ನಿರ್ಲಕ್ಷಿಸಿದ್ದರಿಂದ ಇಂದು ದೇಶ ಆರೋಗ್ಯ ಮೂಲಸೌಕರ್ಯಗಳ ಕೊರತೆಯಿಂದ ಕೋವಿಡ್ -19ವಿರುದ್ಧ ಹೋರಾಟ ನಡೆಸಲು ಹೆಣಗಬೇಕಾಗಿ ಬಂದಿದೆ. ಆದರೆ ಇದೀಗ ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ದೇಶ ಆರೋಗ್ಯ ರಂಗದಲ್ಲಿ ಅತ್ಯದ್ಭುತ ಸಾಧನೆಗಳನ್ನು ಮಾಡುತ್ತಿದೆ.ದೇಶ ಸ್ವಾವಲಂಬನೆಯತ್ತ ಮುನ್ನಡೆಯುತ್ತಿದೆ. ಈ ಸಂದರ್ಭ ಪ್ರಧಾನಿಯವರ ವಿರುದ್ಧ ಸುಳ್ಳು , ಕುತ್ಸಿತ ಆರೋಪ ಮಾಡುವ ನಿಮ್ಮನ್ನು ದೇಶದ ಜನತೆ ಕ್ಷಮಿಸಲಾರರು ಎಂಬುದಾಗಿ ನಳಿನ್ ಕಾಂಗ್ರೆಸ್ ಅಧ್ಯಕ್ಷರಿಗೆ ಕಿವಿಮಾತು ಹೇಳಿದ್ದಾರೆ.

LEAVE A REPLY

Please enter your comment!
Please enter your name here