Saturday, July 2, 2022

Latest Posts

ಪಿಎಂ ಸ್ವ ನಿಧಿ ಬಳಕೆಗೆ ಆಸಕ್ತಿ ತೋರದ ಬೀದಿ ಬದಿ ವ್ಯಾಪಾರಿಗಳು: 1392 ಅರ್ಜಿ ಸಲ್ಲಿಕೆ, 415ಕ್ಕೆ ಮುಂಜೂರಾತಿ, 56 ಅರ್ಜಿಗಳು ಮಾತ್ರ ವಿಲೇವಾರಿ

ಚಿತ್ರದುರ್ಗ: ಕೊರೋನಾ ಹಾವಳಿಯಿಂದ ನಿರೀಕ್ಷಿತ ವ್ಯಾಪಾರ ಇಲ್ಲದೆ ಜರ್ಝರಿತರಾಗಿರುವ ಬೀದಿ ಬದಿ ವ್ಯಾಪಾರಿಗಳಿಗೆ ಆರ್ಥಿಕ ನೆರವು ನೀಡಿ ಅವರನ್ನು ಉತ್ತೇಜಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಜಾರಿಗೊಳಿಸಿದ ಪ್ರಧಾನ ಮಂತ್ರಿ ಬೀದಿ ಬದಿ ವ್ಯಾಪಾರಿಗಳ ಆತ್ಮನಿರ್ಭರ ಯೋಜನೆ ನಿಧಿ (ಸ್ವ ನಿಧಿ) ಜಾರಿಗೆ ತರಲಾಗಿದೆ. ಯೋಜನೆ ಯಡಿ ಬೀದಿ ಬದಿ ವ್ಯಾಪಾರಿಗಳಿಗೆ 10 ಸಾವಿರ ವಿಶೇಷ ಕಿರು ಸಾಲ ನೀಡಲಾಗುವುದು. ಆದರೆ ಜಿಲ್ಲೆಯಲ್ಲಿ ಈ ಯೋಜನೆಗೆ ಬೀದಿ ಬದಿ ವ್ಯಾಪಾರಿಗಳು ಆಸಕ್ತಿ ತೋರುತ್ತಿಲ್ಲ ಎನಿಸುತ್ತದೆ.
ಕೇಂದ್ರ ಸರ್ಕಾರದ ಈ ಮಹತ್ವದ ಯೋಜನೆ ಕಳೆದ ಜುಲೈನಿಂದ ಜಾರಿಯಲ್ಲಿದೆ. ಜಿಲ್ಲಾ ಕೌಶಲ್ಯ ಅಭಿವೃದ್ಧಿ ಕೇಂದ್ರ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಸಹಯೋಗದಲ್ಲಿ ಅನುಷ್ಟಾನ ಮಾಡಲಾಗುತ್ತಿದೆ. ಜಿಲ್ಲೆಯ ಏಳು ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಒಟ್ಟು 3328 ಬೀದಿ ಬದಿ ವ್ಯಾಪಾರಿಗಳು ಇರಬಹುದೆಂದು ಅಂದಾಜಿಸಲಾಗಿದೆ. ಆನ್‌ಲೈನ್‌ನಲ್ಲಿ ಒಟ್ಟು 1392 ಅರ್ಜಿಗಳು ಸಲ್ಲಿಕೆಯಾಗಿವೆ. ಇವುಗಳಲ್ಲಿ 415 ಅರ್ಜಿಗಳಿಗೆ ಮುಂಜೂರಾತಿ ನೀಡಲಾಗಿದೆ. ಆದರೆ ಈವರೆಗೆ ಕೇವಲ 56 ಜನ ಬೀದಿ ಬದಿ ವ್ಯಾಪಾರಿಗಳು ಮಾತ್ರ ಯೋಜನೆಯ ಪ್ರಯೋಜನ ಪಡೆದಿದ್ದಾರೆ.
ಜಿಲ್ಲಾ ಕೇಂದ್ರವಾದ ಚಿತ್ರದುರ್ಗ ನಗರದಲ್ಲಿ ಅತೀ ಹೆಚ್ಚು 936 ಮಂದಿ ಬೀದಿ ಬದಿ ವ್ಯಾಪಾರಿಗಳಿದ್ದಾರೆ. ಚಳ್ಳಕೆರೆ 517, ಹಿರಿಯೂರು 576, ಹೊಳಲ್ಕೆರೆ 240, ಹೊಸದುರ್ಗ 220, ಮೊಳಕಾಲ್ಮೂರು 126, ನಾಯಕನಹಟ್ಟಿ ಪಟ್ಟಣದಲ್ಲಿ 134 ಮಂದಿ ನಾನಾ ರೀತಿಯ ಬೀದಿ ಬದಿ ವ್ಯಾಪಾರಿಗಳನ್ನು ಗುರುತಿಸಿ ಗುರುತಿನ ಚೀಟಿ ವಿತರಿಸಲಾಗಿದೆ. ಇದರಲ್ಲಿ ಈವರೆಗೆ ಚಿತ್ರದುರ್ಗ ನಗರದ 4, ಹಿರಿಯೂರು 12, ಹೊಸದುರ್ಗ 12, ಹೊಳಲ್ಕೆರೆ 9, ನಾಯಕನಹಟ್ಟಿಯ 19 ಸೇರಿದಂತೆ ಒಟ್ಟು 56 ಅರ್ಜಿಗಳನ್ನು ವಿಲೇ ಮಾಡಲಾಗಿದೆ.
ಚಿತ್ರದುರ್ಗದಲ್ಲಿ 336 ಅರ್ಜಿಗಳು ಸಲ್ಲಿಕೆಯಾಗಿವೆ. ಇವುಗಳಲ್ಲಿ 102 ಅರ್ಜಿಗಳಿಗೆ ಮುಂಜೂರಾತಿ ನೀಡಲಾಗಿದೆ. ಚಳ್ಳಕೆರೆ 354 ಅರ್ಜಿಗಳಿಗೆ 88, ಹಿರಿಯೂರು 311 ಅರ್ಜಿಗಳಿಗೆ 68, ಹೊಳಲ್ಕೆರೆ 110 ಅರ್ಜಿಗಳಿಗೆ 39, ಹೊಸದುರ್ಗ 57 ಅರ್ಜಿಗಳಿಗೆ 13, ಮೊಳಕಾಲ್ಮುರು 124 ಅರ್ಜಿಗಳಿಗೆ 36 ಹಾಗೂ ನಾಯಕನಹಟ್ಟಿ ಪಟ್ಟಣ ಪಂಚಾಯಿತಿಯಲ್ಲಿ 100 ಅರ್ಜಿಗಳು ಸಲ್ಲಿಕೆಯಾಗಿವೆ. ಅವುಗಳಲ್ಲಿ 69 ಅರ್ಜಿಗಳಿಗೆ ಮುಂಜೂರಾರಿ ನೀಡಲಾಗಿದೆ.
ಪ್ರಮುಖವಾಗಿ ಹೂವು, ಹಣ್ಣು, ತರಕಾರಿ, ಬುಟ್ಟಿ, ಹಗ್ಗ, ಚಾಪೆ, ಬಟ್ಟೆ, ಅಲಂಕಾರಿಕ ಸಾಮಾನು ಸೇರಿದಂತೆ ತರಹೇವಾರಿ ಮಾರಾಟ, ತಳ್ಳುಗಾಡಿಗಳು, ಪಾನಿಪೂರಿ, ಎಗ್ ರೈಸ್ ಮಾರುವವರು. ಹೀಗೆ ಬೀದಿಗಳಲ್ಲಿ ವಿಭಿನ್ನ ವ್ಯಾಪಾರ ಮಾಡುವವರು ಈ ಯೋಜನೆ ವ್ಯಾಪ್ತಿಗೆ ಒಳಪಡುತ್ತಾರೆ. ಬೀದಿ ಬದಿ ವ್ಯಾಪಾರಿಗಳಿಗೆ ಕಿರು ಸಾಲ ನೀಡುವ ಯೋಜನೆ ಕುರಿತು ಸಾಕಷ್ಟು ಪ್ರಚಾರ ನಡೆಸಲಾಗಿದೆ. ಆದಾಗ್ಯೂ ನಿರೀಕ್ಷಿತ ಮಟ್ಟದ ಜನರು ಇದರ ಪ್ರಯೋಜನ ಪಡೆಯುವಲ್ಲಿ ಆಸಕ್ತಿ ತೋರದಿರುವುದು ವಿಷಾದದ ಸಂಗತಿ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss