ಹೊಸ ದಿಗಂತ ಆನ್ ಲೈನ್ ಡೆಸ್ಕ್:
ಕೇರಳ, ಕರ್ನಾಟಕ ಸೇರಿದಂತೆ 9 ರಾಜ್ಯಗಳಲ್ಲಿನ 26 ಸ್ಥಳಗಳಲ್ಲಿನ ಪಾಪ್ಯುಲರ್ ಫ್ರಾಂಟ್ ಆಫ್ ಇಂಡಿಯಾ (ಪಿಎಫ್ಐ) ಕಚೇರಿ ಹಾಗೂ ಸಂಘಟನೆಯ ಪದಾಧಿಕಾರಿಗಳ ಮನೆಗಳ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿ, ಶೋಧಕಾರ್ಯ ಕೈಗೊಂಡಿದ್ದಾರೆ.
ಕೇರಳದ ಮಲಪ್ಪುರಂ ಮತ್ತು ತಿರುವನಂತಪುರಂ ಜಿಲ್ಲೆಗಳಲ್ಲಿ ಪಿಎಫ್ಐ ಮುಖ್ಯಸ್ಥ ಒ.ಎಂ. ಅಬ್ದುಲ್ ಸಲಾಮ್ ಮತ್ತು ರಾಷ್ಟ್ರೀಯ ಕಾರ್ಯದರ್ಶಿ ನಸ್ರುದ್ದೀನ್ ಎಲಮರಂ ಅವರ ಮನೆಗಳಲ್ಲೂ ಅಧಿಕಾರಿಗಳು ಶೋಧ ನಡೆಸಿದ್ದಾರೆ.
ಇನ್ನು ಪಿಎಫ್ಐ ಸಂಘಟನೆ ಹಾಗೂ ಚಂದ್ರಶೇಖರ್ ಆಜಾದ್ ಅವರ ಭೀಮ್ ಆರ್ಮಿ ನಡುವೆ ಅಕ್ರಮ ಹಣಕಾಸಿನ ವ್ಯವಹಾರ ಹಾಗೂ ಸಿಎಎ ವಿರೋಧಿ ಪ್ರತಿಭಟನೆ ಹಿಂದೆ ಈ ಎರಡೂ ಸಂಘಟನೆಗಳ ಕೈವಾಡದ ಬಗ್ಗೆ ಕೂಡ ಇ.ಡಿ ತನಿಖೆ ನಡೆಸುತ್ತಿದ್ದು, ಪೂರಕ ಸಾಕ್ಷ್ಯಾಧಾರ ಸಂಗ್ರಹಕ್ಕಾಗಿ ಗುರುವಾರ ದಾಳಿ ನಡೆಸಲಾಗಿದೆ.
ಕರ್ನಾಟಕದ ಬೆಂಗಳೂರು, ಕೇರಳದ ಕೊಚ್ಚಿ, ಮಲಪ್ಪುರಂ ಮತ್ತು ತಿರುವನಂತಪುರಂ ಸೇರಿದಂತೆ ಆರು ಸ್ಥಳಗಳು, ತಮಿಳುನಾಡಿನಲ್ಲಿ ತೆಂಕಸಿ, ಮಧುರೈ ಮತ್ತು ಚೆನ್ನೈ ಸೇರಿದಂತೆ ಐದು ಸ್ಥಳಗಳು, ಪಶ್ಚಿಮ ಬಂಗಾಳದಲ್ಲಿ ಕೋಲ್ಕತಾ ಮತ್ತು ಮುರ್ಷಿದಾಬಾದ್, ದೆಹಲಿಯ ಶಾಹೀನ್ ಬಾಗ್, ಉತ್ತರ ಪ್ರದೇಶದ ಲಖನೌ ಮತ್ತು ಬರಾಬಂಕಿ, ಬಿಹಾರದ ದರ್ಭಂಗಾ ಮತ್ತು ಪೂರ್ಣಿಯಾ, ಮಹಾರಾಷ್ಟ್ರದ ಔರಂಗಾಬಾದ್, ಮತ್ತು ರಾಜಸ್ಥಾನದ ಜೈಪುರದಲ್ಲಿ ಇ.ಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ದೇಶದ ವಿವಿಧ ಭಾಗಗಳಲ್ಲಿ ಪಿಎಫ್ಐ ಸಂಘಟನೆಗೆ 2019ರ ಡಿಸೆಂಬರ್ ಮತ್ತು 2020ರ ಜನವರಿ ನಡುವೆ 73 ಬ್ಯಾಂಕ್ ಖಾತೆಗಳಲ್ಲಿ ಒಟ್ಟು 120 ಕೋಟಿ ರೂ. ಹಣ ಜಮೆಯಾಗಿದ್ದು, ಈ ಕುರಿತು ಇಡಿ ತನಿಖೆ ನಡೆಸುತ್ತಿದೆ.