ಪಿಎಸ್‌ಐ ಪರೀಕ್ಷೆಯಲ್ಲಿ ಭಾರೀ ಗೋಲ್‌ಮಾಲ್?

0
32

ಬೆಂಗಳೂರು: 2019-20ನೇ ಸಾಲಿನ ರಾಜ್ಯದ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಹುದ್ದೆಗೆ ನಡೆದ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆಯೇ ಎಂಬ ಪ್ರಶ್ನೆ ಈಗ ಜನರಲ್ಲಿ ಮೂಡಿದೆ. ರಾಜ್ಯಾದ್ಯಂತ ಹಲವಾರು ಪರೀಕ್ಷಾ ಕೇಂದ್ರಗಳಲ್ಲಿ 2020ರ ಜನವರಿ 5ರಂದು 200 ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (ಪಿಎಸ್‌ಐ) ಆಯ್ಕೆಗೆ ಪರೀಕ್ಷೆ ನಡೆದಿತ್ತು.

ಅಲ್ಲದೇ ಈ ಪರೀಕ್ಷೆಯ ತಾತ್ಕಾಲಿಕ ಫಲಿತಾಂಶವನ್ನೂ ಪೊಲೀಸ್ ಇಲಾಖೆ ಬಿಡುಗಡೆ ಮಾಡಿದೆ. ವಿಚಿತ್ರ ಏನೆಂದರೆ, ಧಾರವಾಡ ಜಿಲ್ಲಾ ಪರೀಕ್ಷಾ ಕೇಂದ್ರದಲ್ಲಿ ಬರೆದ ಸುಮಾರು 108 ಅಭ್ಯರ್ಥಿಗಳು ಅನುಮಾನಾಸ್ಪದ ರೀತಿಯಲ್ಲಿ ಪಾಸಾಗಿದ್ದು, ಅವರ ಹೆಸರುಗಳೆಲ್ಲರೂ ತಾತ್ಕಾಲಿಕ ಫಲಿತಾಂಶ ಪಟ್ಟಿಯಲ್ಲಿ ಪ್ರಕಟವಾಗಿದೆ. ಅನ್ಯಾಯವಾದ ಅಭ್ಯರ್ಥಿಗಳು ಎಂಬ ಹೆಸರಿನಲ್ಲಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಗೃಹ ಸಚಿವ ಬಸವರಾಜ ಬೊಮ್ಮಾಯಿ ಮತ್ತು ಪೊಲೀಸ್ ಮಹಾನಿರ್ದೇಶಕರಿಗೆ ಬರೆದ ಪತ್ರವೊಂದರಲ್ಲಿ, ಪರೀಕ್ಷಾ ಕೊಠಡಿಯಲ್ಲೇ ಮೊಬೈಲ್ ಬಳಸಿ ಪರೀಕ್ಷೆ ಬರೆದು ಪಾಸಾಗಿದ್ದಾರೆ ಎಂಬುದನ್ನು ಆರೋಪಿಸಿ, ಅಭ್ಯರ್ಥಿಗಳ ರೋಲ್ ನಂಬರ್ ಸಮೇತವಾಗಿ ಬರೆದು ತಮ್ಮ ನೋವನ್ನು ಹೇಳಿಕೊಂಡಿದ್ದಾರೆ.

ಅನಾಮಿಕ ಪತ್ರದಲ್ಲೇನಿದೆ?: ಧಾರವಾಡದ ಪರೀಕ್ಷಾ ಕೇಂದ್ರದಲ್ಲಿ ಅಕ್ಕಪಕ್ಕದಲ್ಲಿ ಕುಳಿತುಕೊಂಡ ಅಭ್ಯರ್ಥಿಗಳು ಪ್ರಶ್ನೆ ಪತ್ರಿಕೆಯನ್ನು ಪರೀಕ್ಷಾ ಕೇಂದ್ರದಲ್ಲಿಯೇ ಚರ್ಚೆ ಮಾಡಿ, ಮೊಬೈಲ್ ಫೋನ್ ಬಳಸಿ ಪಿಎಸ್‌ಐ ಹುದ್ದೆಗಳಿಗೆ ಆಯ್ಕೆಯಾಗಿದ್ದು ಅವರ ರೋಲ್ ನಂಬರ್‌ಗಳು ಇಂತಿವೆ ಎಂದು 50 ಅಭ್ಯರ್ಥಿಗಳ ರೋಲ್ ನಂಬರ್‌ಗಳನ್ನು ನೀಡಲಾಗಿದೆ.

ಅಲ್ಲದೇ ಗಣೇಶ್ ಕಾಲಿ (ಹೆಸರು ಬದಲಾಯಿಸಲಾಗಿದೆ) ಎಂಬ ಅಭ್ಯರ್ಥಿಯ ಹೆಸರು ತಾತ್ಕಾಲಿಕ ಫಲಿತಾಂಶ ಪಟ್ಟಿಯಲ್ಲಿ ಎರಡೆರಡು ಸಲ ಪ್ರಕಟವಾಗಿರುವುದನ್ನೂ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಈ ರೀತಿ ಅಕ್ರಮದಿಂದ ಪರೀಕ್ಷೆ ನಡೆದಿರುವುದು ಕರ್ನಾಟಕ ದಕ್ಷಿಣ ಭಾಗದ ಮಂದಿಗೆ ಅನ್ಯಾಯವಾಗಿದ್ದು, ಪರೀಕ್ಷೆಯನ್ನು ಪುನಃ ನಡೆಸಬೇಕು ಎಂದು ಕೇಳಿಕೊಂಡಿದ್ದಾರೆ.

ಹಿಂದೊಮ್ಮೆ ಪೊಲೀಸ್ ಇಲಾಖೆ ಪೇಚಿಗೆ: ಅಲ್ಲದೇ, ಇದೇ ಪರೀಕ್ಷೆಯ ಅಂತಿಮ ಉತ್ತರ ಪ್ರತಿಯನ್ನು(ಆನ್ಸರ್ ಕೀ) ಬಿಡುಗಡೆಗೊಳಿಸಿದಾಗಲೂ ಪೊಲೀಸ್ ಇಲಾಖೆ ಪೇಚಿಗೆ ಸಿಲುಕಿತ್ತು. ತಪ್ಪು ಉತ್ತರಗಳೇ ಸರಿ ಉತ್ತರ ಎಂದು ಪೊಲೀಸ್ ಇಲಾಖೆ ಬಿಡುಗಡೆ ಮಾಡಿದ್ದರ ಬಗ್ಗೆ ವಿಶೇಷ ವರದಿಯು ದಿಗಂತ ಪ್ರಕಟಿಸಿತ್ತು. ನಂತರ ಮತ್ತೊಂದು ಅಂತಿಮ ಉತ್ತರ ಪ್ರತಿಯನ್ನು ಬಿಡುಗಡೆ ಮಾಡಿದ ಪೊಲೀಸ್ ಈ ತಪ್ಪುಗಳನ್ನು ತಿದ್ದಿಕೊಂಡಿತ್ತು.

LEAVE A REPLY

Please enter your comment!
Please enter your name here