Wednesday, August 17, 2022

Latest Posts

ಪಿಣರಾಯಿ ಸರಕಾರ ವಿರುದ್ಧದ ಜನಾಕ್ರೋಶ ತಡೆಯಲು ಕೇರಳದಲ್ಲಿ 144 ಸೆಕ್ಷನ್ ಜಾರಿ: ಬಿಜೆಪಿ ನೇರ ಆರೋಪ

ಮಂಜೇಶ್ವರ: ಚಿನ್ನ ಕಳ್ಳ ಸಾಗಾಟ, ವಂಚನೆ ಪ್ರಕರಣ, ಸಚಿವರ ಮತ್ತು ಅವರ ಪುತ್ರರ, ಅಲ್ಲದೆ ಕುಟುಂಬದ ವಂಚನೆ ಪ್ರಕರಣಗಳಿಂದ ಮಾನ ಕಳೆದುಕೊಂಡಿರುವ ಪಿಣರಾಯಿ ವಿಜಯನ್ ಸರಕಾರವು ತನ್ನ ವಿರುದ್ಧದ ಜನಾಕ್ರೋಶವನ್ನು ಹತ್ತಿಕ್ಕಲು ಕೋವಿಡ್ ಹೆಸರಲ್ಲಿ ರಾಜ್ಯದಾದ್ಯಂತ 144 ಸೆಕ್ಷನ್ ಜಾರಿಗೆ ಆದೇಶಿಸಿದೆ. ಅದಲ್ಲದೆ ಬೇರೆ ಯಾವ ಪುರುಷಾರ್ಥಕ್ಕೆ ಸೆಕ್ಷನ್ ಜಾರಿ ಮಾಡಿರುವುದು ಎಂಬುದನ್ನು ರಾಜ್ಯ ಸರಕಾರವು ಜನರಿಗೆ ತಿಳಿಸಬೇಕೆಂದು ಬಿಜೆಪಿ ಮಂಜೇಶ್ವರ ಮಂಡಲ ಪ್ರಧಾನ ಕಾರ್ಯದರ್ಶಿ ಆದರ್ಶ್ ಬಿ.ಎಂ. ಸವಾಲು ಹಾಕಿದ್ದಾರೆ.
ಜಗತ್ತಿನಲ್ಲೇ ಕೊರೋನಾ ಪ್ರಕರಣ ಅಥವಾ ಅದಕ್ಕೆ ಸಂಬಂಧಿಸಿದ ವಿಚಾರಗಳನ್ನು ಆರೋಗ್ಯ ಇಲಾಖೆಯು ಗಮನಿಸುತ್ತಿದೆ. ಆದರೆ ಕೇರಳದಲ್ಲಿ ಮಾತ್ರ ಕೋವಿಡ್ ನಿಯಂತ್ರಣಕ್ಕೆ ಪೊಲೀಸ್ ಇಲಾಖೆಗೆ ಆಡಳಿತ ನೀಡಲಾಗಿದೆ ಎಂದು ಅವರು ಆರೋಪಿಸಿದರು.
ವಿಶ್ವದಲ್ಲೇ ನಂಬರ್ ವನ್ ಎಂದು ಬೊಗಳೆ ಬಿಡುವ ಪಿಣರಾಯಿ ಸರಕಾರವು ಕೋವಿಡ್ ನಿಯಂತ್ರಣದ ವಿಚಾರದಲ್ಲಿ ಸಂಪೂರ್ಣ ಹಾದಿ ತಪ್ಪಿದೆ. ಈ ನಿಟ್ಟಿನಲ್ಲಿ ಸರಕಾರವು ತನ್ನ ತಪ್ಪನ್ನು ಮರೆಮಾಚಲು ಇನ್ನಿಲ್ಲದ ಕಸರತ್ತು ಮಾಡುತ್ತಿದೆ. ಒಂದು ತಿಂಗಳು 144 ಸೆಕ್ಷನ್ ಜಾರಿ ಮಾಡುವುದು ಕಾನೂನಿನ ಸ್ಪಷ್ಟ ಉಲ್ಲಂಘನೆಯಾಗಿದೆ. ಕೆರಳವನ್ನು ಪೊಲೀಸ್ ರಾಜ್ ಮಾಡಲು ಎಡರಂಗ ಸರಕಾರವು ಷಡ್ಯಂತ್ರ ಹೆಣೆಯುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ವಂಚನೆ ಪ್ರಕರಣದಲ್ಲಿ ಮುಖ್ಯಮಂತ್ರಿಯ ಕುಟುಂಬ ಹಾಗೂ ಎಡರಂಗದ ನೇತಾರರ ಹೆಸರು ಕೇಳಿ ಬರುತ್ತಿದ್ದು , ಜೊತೆಗೆ ಸ್ವಪ್ನಾ ಸುರೇಶ್ ಮತ್ತು ತಂಡವು ಸರಕಾರದ ಭಾಗವಾಗಿ ಕೋಟಿಗಟ್ಟಲೆ ಹಣವನ್ನು ವಂಚಿಸಿದೆ. ಮೋಸ, ವಂಚನೆ, ಅವ್ಯವಹಾರ ಪ್ರಕರಣಗಳಲ್ಲಿ ಸಿಪಿಎಂ ಮತ್ತು ಮುಸ್ಲಿಂಲೀಗ್ ಒಂದೇ ನಾಣ್ಯದ ಎರಡು ಮುಖಗಳು. ಅದಕ್ಕಾಗಿಯೇ ಮಂಜೇಶ್ವರ ಶಾಸಕ ಎಂ.ಸಿ.ಖಮರುದ್ದೀನ್ ಅವರ ವಂಚನೆ ಬೆಳಕಿಗೆ ಬಂದರೂ ಸರಕಾರ ಅವರನ್ನು ಬಂಧಿಸಿಲ್ಲ ಎಂದು ಆದರ್ಶ್ ಬಿ.ಎಂ. ದೂರಿದರು.
ಬಿಜೆಪಿ ಮಂಜೇಶ್ವರ ಪಂಚಾಯತ್ ಸಮಿತಿಯ ವತಿಯಿಂದ ಶುಕ್ರವಾರ ನಡೆದ ನಿಂತು ಪ್ರತಿಭಟನೆಯಲ್ಲಿ ಅವರು ಭಾಗವಹಿಸಿ ಮಾತನಾಡಿದರು. ಲೋಕೇಶ್ ಮಾಡ ಅಧ್ಯಕ್ಷತೆ ವಹಿಸಿದ್ದರು. ಓಬಿಸಿ ಮೋರ್ಚಾ ರಾಜ್ಯ ಕೋಶಾಧಿಕಾರಿ, ನ್ಯಾಯವಾದಿ ನವೀನ್ ರಾಜ್ ಕೆ.ಜೆ. ಉದ್ಘಾಟಿಸಿದರು. ಪ್ರಮುಖರಾದ ಯಾದವ ಬಡಾಜೆ, ಮಾಧವ ಬಲ್ಯಾಯ, ಅವಿನಾಶ್ ಹೆಗ್ಡೆ , ರಾಜೇಶ್ ಮಜಲ್ ಪಾಲ್ಗೊಂಡಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!