ಹೊಸ ದಿಗಂತ ಆನ್ ಲೈನ್ ಡೆಸ್ಕ್:
ಕೌನ್ಸೆಲಿಂಗ್ ಮೂಲಕ ಸ್ಥಳ ನಿಯುಕ್ತಿಗೊಂಡಿರುವ ನೂತನ ಪಿಯು ಉಪನ್ಯಾಸಕ ಅಭ್ಯರ್ಥಿಗಳಿಗೆ ನವೆಂಬರ್ 20 ರಿಂದ ನೇಮಕಾತಿ ಆದೇಶಗಳನ್ನು ನೀಡಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ.
ಇಂದು ನಡೆದ ಶಿಕ್ಷಣ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದ್ದು, ನವೆಂಬರ್ 20ರಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಾಂಕೇತಿಕವಾಗಿ ನೇಮಕಾತಿ ಆದೇಶ ನೀಡಲಿದ್ದಾರೆ.
ನೂತನ ಉಪನ್ಯಾಸಕರಿಗೆ ಇಲಾಖೆಯ ನಿಯಮಗಳು, ಆಡಳಿತ, ವೃಂದ ಮತ್ತು ನೇಮಕಾತಿ ನಿಯಮಗಳು, ಉಪನ್ಯಾಸಕರ ವೃತ್ತಿ ಧರ್ಮ, ವೃತ್ತಿ ಗೌರವ ಸೇರಿದಂತೆ ಪ್ರೇರಣಾದಾಯಕ ತರಬೇತಿ ಕಾರ್ಯಾಗಾರವನ್ನು ಜಿಲ್ಲೆಗಳಲ್ಲಿ ಇಲ್ಲವೇ ವಿಭಾಗಗಳಲ್ಲಿ ನೀಡಲಾಗುವುದು ಎಂದು ಸಚಿವರು ತಿಳಿಸಿದರು.
ಇನ್ನು 23ರಿಂದ ಪಿಯು ಉಪನ್ಯಾಸಕರ ವರ್ಗಾವಣಾ ಪ್ರಕ್ರಿಯೆ ಆರಂಭವಾಗಲಿದ್ದು, ಅಂದಿನಿಂದಲೇ ಅರ್ಜಿ ಸಲ್ಲಿಕೆಗೆ ಅವಕಾಶವಾಗಲಿದೆ ಎಂದರು.