ಹೊಸ ದಿಗಂತ ಆನ್ ಲೈನ್ ಡೆಸ್ಕ್:
2019ರಲ್ಲಿ ಪುಲ್ವಾಮಾ ಸ್ಫೋಟದ ವೇಳೆ ಉಗ್ರರ ಕಾರು ಬೆನ್ನಟ್ಟಿ ಗುಂಡು ಹಾರಿಸಿದ್ದ ಸಿಆರ್ ಪಿಎಫ್ ಸಹಾಯಕ ಸಬ್ ಇನ್ಸ್ಪೆಕ್ಟರ್(ಎಎಸ್ಐ) ಮೋಹನ್ ಲಾಲ್ ಅವರಿಗೆ ಮರಣೋತ್ತರವಾಗಿ ಅತ್ಯುನ್ನತ ಪೊಲೀಸ್ ಗೌರವ ರಾಷ್ಟ್ರಪತಿಗಳ ಪೊಲೀಸ್ ಪದಕ ನೀಡಿ ಗೌರವಿಸಲಾಗುತ್ತಿದೆ.
ಕೇಂದ್ರ ಗೃಹ ಸಚಿವಾಲಯ ಇಂದು ಪೊಲೀಸ್ ಪದಕ ಪಟ್ಟಿ ಪ್ರಕಟಿಸಿದ್ದು, ಈ ವರ್ಷ ಒಟ್ಟು 207 ಪೊಲೀಸ್ ಪದಕಗಳು ಮತ್ತು 89 ರಾಷ್ಟ್ರಪತಿಗಳ ಪೊಲೀಸ್ ಪದಕ ಹಾಗೂ ಶ್ರೇಷ್ಠ ಸೇವೆಗಾಗಿ 650 ಪೊಲೀಸ್ ಪದಕಗಳನ್ನು ನೀಡಲಾಗುತ್ತಿದೆ.
ಶೌರ್ಯ ಪ್ರದರ್ಶನಕ್ಕಾಗಿ ಸಿಆರ್ಪಿಎಫ್ನ ಮೋಹನ್ ಲಾಲ್ ಮತ್ತು ಹುತಾತ್ಮ ಜಾರ್ಖಂಡ್ ಪೊಲೀಸ್ ಎಎಸ್ಐ ಬಾನುವಾ ಒರಾನ್ ಅವರಿಗೆ ರಾಷ್ಟ್ರಪತಿಗಳ ಪೊಲೀಸ್ ಪದಕ(ಪಿಪಿಎಂಜಿ) ನೀಡಲಾಗಿದೆ.
50 ವರ್ಷದ ಎಎಸ್ಐ ಮೋಹನ್ ಲಾಲ್ ಅವರು ಸಿಆರ್ಪಿಎಫ್ ರಸ್ತೆ ತೆರೆಯುವ ಪಿಕೆಟ್ ಕಮಾಂಡರ್ ಆಗಿದ್ದರು. ಫೆಬ್ರವರಿ 14, 2019 ರಂದು ಜಮ್ಮು-ಶ್ರೀನಗರ ಹೆದ್ದಾರಿಯಲ್ಲಿ ಪುಲ್ವಾಮದ ಲೆಥ್ಪೊರಾದ ಬಿಎಸ್ಎನ್ಎಲ್ ಟವರ್ ಬಳಿ ಜೈಶ್-ಎ-ಮೊಹಮ್ಮದ್ ಉಗ್ರ ಸಂಘಟನೆ ನಡೆಸಿದ ದಾಳಿಯಲ್ಲಿ ಲಾಲ್ ಸೇರಿದಂತೆ 40 ಸಿಆರ್ ಪಿಎಫ್ ಯೋಧರು ಹುತಾತ್ಮರಾಗಿದ್ದರು.