Monday, July 4, 2022

Latest Posts

ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ಶ್ರೀವಿಶ್ವೇಶತೀರ್ಥ ಶ್ರೀಪಾದರ ಶಿಲಾ ವೃಂದಾವನ ಪ್ರತಿಷ್ಠಾ ಪೂರ್ವಕ ಆರಾಧನೋತ್ಸವ

ಹೊಸ ದಿಗಂತ ವರದಿ, ಉಡುಪಿ:

ಗುರುವಾರ ಪೇಜಾವರ ಶ್ರೀವಿಶ್ವೇಶತೀರ್ಥ ಶ್ರೀಪಾದರ ಪ್ರಥಮ ಪುಣ್ಯತಿಥಿ. ಬೆಂಗಳೂರಿನ ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ಶ್ರೀಗಳ ಶಿಲಾ ವೃಂದಾವನ ಪ್ರತಿಷ್ಠಾ ಪೂರ್ವಕ ಆರಾಧನೋತ್ಸವ ನಡೆದರೆ, ಉಡುಪಿಯೂ ಸೇರಿದಂತೆ ದೇಶದ ವಿವಿಧೆಡೆ ಇರುವ ಪೇಜಾವರ ಮಠದ ಶಾಖೆಗಳಲ್ಲೂ ಶ್ರೀಗಳ ಸಂಸ್ಮರಣೋತ್ಸವವು ಜರಗಿತು.
ಉಡುಪಿಯಲ್ಲಿ ಶ್ರೀಗಳ ಸಂಸ್ಮರಣೆಯ ವಿಶೇಷ ಕಾರ್ಯಕ್ರಮವೊಂದು ಸಂಪನ್ನಗೊಂಡಿದೆ. ಸ್ಥಳೀಯ ಮುಚ್ಲುಕೋಡು ಶ್ರೀಸುಬ್ರಹ್ಮಣ್ಯ ದೇವಸ್ಥಾನ, ಕರಂಬಳ್ಳಿ ಶ್ರೀವೆಂಕಟರಮಣ ದೇವಸ್ಥಾನ, ಕೊಡವೂರು ಶಂಕರನಾರಾಯಣ ದೇವಸ್ಥಾನ, ಪಾಜಕದ ಆನಂದತೀರ್ಥ ವಿದ್ಯಾಲಯಗಳಲ್ಲಿ ಶ್ರೀವಿಶ್ವೇಶತೀರ್ಥರು ವಿವಿಧ ಸಂದರ್ಭಗಳಲ್ಲಿ ಭೇಟಿ ನೀಡಿದಾಗ ಸಸಿಗಳನ್ನು ನೆಟ್ಟಿದ್ದರು. ಅವುಗಳು ಈಗ ಸೊಂಪಾಗಿ ಬೆಳೆದು ನಿಂತಿವೆ. ಇವುಗಳಿಗೆ ಸುಂದರವಾಗಿ ಕಟ್ಟೆ ನಿರ್ಮಿಸಿ, ಪುಷ್ಪಾಲಂಕಾರ ಮಾಡಿ ಲೋಕಾರ್ಪಣೆಗೊಳಿಸಿ ಸಂಸ್ಮರಣೆ ಮಾಡಲಾಯಿತು.
ಶ್ರೀಗಳು ತಮ್ಮ 80ನೇ ಜನ್ಮ ವರ್ಧಂತಿ ಪ್ರಯುಕ್ತ ನಡೆದ ಸಾರ್ವಜನಿಕ ಕಾರ್ಯಕ್ರಮದಲ್ಲಿ 2010ರ ಸುಬ್ರಹ್ಮಣ್ಯ ಷಷ್ಠಿ ಪರ್ವದಿನದಂದು ಮುಚ್ಲುಕೋಡು ದೇವಳದ ಆವರಣದಲ್ಲಿ ‘ಶ್ರೀವಿಶ್ವೇಶತೀರ್ಥ ಮೂಲಿಕಾ ವನ’ ನಿರ್ಮಾಣಕ್ಕೆ ನಾಗಕೇಸರ ಸಸಿ ನೆಟ್ಟು ಚಾಲನೆ ನೀಡಿದ್ದರು. ಅದು ಈಗ ಸಮೃದ್ಧವಾಗಿ ಬೆಳೆದಿದೆ ಮಾತ್ರವಲ್ಲ; ಅಲ್ಲಿ 80 ವಿವಿಧ ವನಸ್ಪತಿಗಳ ಸುಂದರವಾದ ಪುಟ್ಟ ವನ ಬೆಳೆದು ನಿಂತಿದೆ. ಪರಿಸರ, ಪ್ರಕೃತಿಯ ಬಗ್ಗೆ ಅನನ್ಯ ಪ್ರೀತಿ ಹೊಂದಿದ್ದ ಶ್ರೀಗಳ ಸ್ಮರಣಾರ್ಥ ಅಲ್ಲಿರುವ ಮರಗಿಡಗಳನ್ನು ಚೆನ್ನಾಗಿ ಪೋಷಿಸುವ ಸಂಕಲ್ಪ ಮಾಡಲಾಗಿದೆ. ಅಲ್ಲಿ ನಿರ್ಮಿಸಿರುವ ಕಟ್ಟೆಗಳ ಮೇಲೆ ಶ್ರೀಗಳ ಹೆಸರು ಮತ್ತು ನೆಟ್ಟ ದಿನಾಂಕವನ್ನು ಶಿಲಾಲಕದಲ್ಲಿ ನಮೂದಿಸಲಾಗುತ್ತದೆ ಎಂದು ಸಂಯೋಜಿಸಿದ ವಾಸುದೇವ ಭಟ್ ಪೆರಂಪಳ್ಳಿ ತಿಳಿಸಿದ್ದಾರೆ.
ಕಾರ್ಯಕ್ರಮಕ್ಕೆ ಕರಂಬಳ್ಳಿಯಲ್ಲಿ ಕೆ. ರಘುಪತಿ ಭಟ್, ರಮೇಶ ಬಾರಿತ್ತಾಯ, ವಾಗೀಶ, ಆನಂದತೀರ್ಥ ವಿದ್ಯಾಲಯದಲ್ಲಿ ರೂಪಾ ಬಲ್ಲಾಳ್, ಗೀತಾ ಶಶಿಧರ್, ಮುಚ್ಲುಕೋಡಿನಲ್ಲಿ ರಾಮಕೃಷ್ಣ ತಂತ್ರಿ ರಾಜಶೇಖರ ಹೆಬ್ಬಾರ್, ಕೊಡವೂರು ದೇವಳದ ಆಡಳಿತ ಮಂಡಳಿ ಜನಾರ್ದನ ಕೊಡವೂರು ವಿಶೇಷ ಸಹಕಾರ ನೀಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss