Wednesday, August 10, 2022

Latest Posts

ಪೂರ್ಣಾವಧಿಗೆ ಬಿಎಸ್‌ವೈ ಮುಖ್ಯಮಂತ್ರಿ: ಸಚಿವ ಭೈರತಿ ಬಸವರಾಜ್ ವಿಶ್ವಾಸ

ದಾವಣಗೆರೆ: ಮುಂದಿನ ಮೂರು ವರ್ಷಗಳವರೆಗೆ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ರಾಜ್ಯವನ್ನು ಮುನ್ನಡೆಸಲಿದ್ದಾರೆ ಎಂದು ನಗರಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಎ.ಬಸವರಾಜ ವಿಶ್ವಾಸ ವ್ಯಕ್ತಪಡಿಸಿದರು.
ಇಲ್ಲಿನ ಜಿಲ್ಲಾಡಳಿತ ಭವನದಲ್ಲಿ ಸೋಮವಾರ ರಾಜ್ಯ ಬಿಜೆಪಿ ಸರ್ಕಾರ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ನಡೆದ ವೀಡಿಯೋ ಸಂವಾದ ಕಾರ್ಯಕ್ರಮದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಯಡಿಯೂರಪ್ಪ ಕಷ್ಟದ ಸಂದರ್ಭದಲ್ಲಿ ರಾಜ್ಯದ ಅಧಿಕಾರ ವಹಿಸಿಕೊಂಡಿದ್ದು, ಬಿಎಸ್‌ವೈ ಮೇಲೆ ಜನತೆ ಸಾಕಷ್ಟು ನಿರೀಕ್ಷೆ ಇಟ್ಟಿದ್ದಾರೆ. ಅದನ್ನು ಮುಖ್ಯಮಂತ್ರಿಗಳು ಖಂಡಿತ ಪೂರೈಸುತ್ತಾರೆ. ಇಂದು ರಾಜ್ಯಾದ್ಯಂತ ಕೆಲ ಫಲಾನುಭವಿಗಳೊಂದಿಗೆ ಸಿಎಂ ನೇರ ಸಂವಾದ ನಡೆಸಿದ್ದಾರೆ. ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡು, ಅನೇಕ ತೀರ್ಮಾನ ಕೈಗೊಂಡಿದ್ದಾರೆ. ಇಂತಹವರು ಅಧಿಕಾರ ಪೂರ್ಣಗೊಳಿಸಬೇಕೆಂಬುದು ಜನರ ಆಶಯವೂ ಆಗಿದೆ ಎಂದರು.
ದಾವಣಗೆರೆ, ಹಾವೇರಿ, ಚಿತ್ರದುರ್ಗ ಭಾಗದಲ್ಲಿ ಹೆಚ್ಚು ಮೆಕ್ಕೆಜೋಳ ಬೆಳೆಯಲಾಗುತ್ತದೆ. ಇಲ್ಲಿನ ಮೆಕ್ಕೆಜೋಳ ಬೆಳೆಗಾರರು, ಕಾರ್ಮಿಕರ ಮನವಿ ಬಗ್ಗೆ ಸಿಎಂ ಬಳಿ ಚರ್ಚಿಸಿದ್ದೇನೆ. ಮೆಕ್ಕೆಜೋಳ ಬೆಳೆಗಾರರಿಗೆ 500 ಕೋಟಿ ರೂ. ಮೀಸಲಿಟ್ಟು, ಪ್ರತಿ ರೈತರಿಗೆ 5 ಸಾವಿರ ರೂ. ಪ್ರೋತ್ಸಾಹಧನ ನೀಡುವ ಮೂಲಕ ಬಿಎಸ್‌ವೈ ಸ್ಪಂದಿಸಿದರು. ವಿಶೇಷವಾಗಿ ಇಲ್ಲಿನ ಹೂವಿನ ಬೆಳೆಗಾರರ ಮನವಿ ಹಿನ್ನೆಲೆಯಲ್ಲಿ ತಕ್ಷಣವೇ ಪ್ರತಿ ಹೆಕ್ಟೇರ್‌ಗೆ 25 ಸಾವಿರ ರೂ. ಘೋಷಿಸಿದ ಯಡಿಯೂರಪ್ಪ ರೈತಪರ ಕಾಳಜಿಗೆ ಸಾಕ್ಷಿ ಎಂದರು.
ದಾವಣಗೆರೆ ಜಿಲ್ಲೆಯ ಅಭಿವೃದ್ಧಿ ವಿಚಾರದಲ್ಲಿ ಸಿಎಂ ಯಡಿಯೂರಪ್ಪ ಕೇಳಿದ್ದನ್ನೇ ಪೂರೈಸಿದ್ದಾರೆ. ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಸುಮಾರು 22 ಕೋಟಿ ರೂ. ವೆಚ್ಚದಲ್ಲಿ ಕಟ್ಟಡ ನಿರ್ಮಾಣಗೊಳ್ಳಲಿದ್ದು, ಅದಕ್ಕೆ ಈಗಾಗಲೇ ಭೂಮಿಪೂಜೆ ಮಾಡಲಾಗಿದೆ. ಎಸ್‌ಎಸ್ ಹೈಟೆಕ್ ಆಸ್ಪತ್ರೆ, ಜೆಜೆಎಂ ಮೆಡಿಕಲ್ ಕಾಲೇಜು ಹಾಗೂ ಜಿಲ್ಲಾಸ್ಪತ್ರೆಯಲ್ಲಿ ಕೊರೋನಾ ಪರೀಕ್ಷಾ ಕೇಂದ್ರ ಪ್ರಾರಂಭಿಸಲಾಗಿದೆ. ಜಿಲ್ಲಾಸ್ಪತ್ರೆಯನ್ನು ಮೇಲ್ದರ್ಜೆಗೇರಿಸಲು ಜಿಲ್ಲೆಯ ಎಲ್ಲಾ ಶಾಸಕರು, ಸಂಸದರು ಹೆಚ್ಚಿನ ಒತ್ತು ನೀಡಿ ಕೈ ಜೋಡಿಸಿದ್ದಾರೆ ಎಂದು ಅವರು ಶ್ಲಾಘಿಸಿದರು.
ನಾನ್-ಕೋವಿಡ್ ರೋಗಿಗಳಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡುತ್ತಿಲ್ಲವೆಂಬ ದೂರಿನ ಹಿನ್ನೆಲೆಯಲ್ಲಿ ರಚಿಸಿರುವ ಎಸ್ಪಿ ನೇತೃತ್ವದ ತಂಡಗಳು ದಿನದ 24 ಗಂಟೆಯೂ 3 ಪಾಳಿಯಂತೆ ಆಸ್ಪತ್ರೆಗಳ ಮೇಲೆ ನಿಗಾ ವಹಿಸಲಿವೆ. ಜಿಲ್ಲೆಯ ಯಾವುದೇ ಖಾಸಗಿ ಆಸ್ಪತ್ರೆಯಲ್ಲಿ ಕೊರೋನಾ ಇಲ್ಲದ ರೋಗಿಗಳಿಗೆ ಚಿಕಿತ್ಸೆ ನೀಡಲು ನಿರಾಕರಿಸಿದರೆ, ದಾಖಲಿಸಿಕೊಳ್ಳದಿದ್ದರೆ ಅಂತಹ ಖಾಸಗಿ ಆಸ್ಪತ್ರೆಗಳ ವಿರುದ್ಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನೇತೃತ್ವದ ತಂಡ ಕ್ರಮ ಕೈಗೊಳ್ಳಲಿದೆ. ೫ ಜನ ಅಧಿಕಾರಿಗಳ ತಂಡವು ಆಸ್ಪತ್ರೆಗಳ ಮೇಲೆ ನಿಗಾ ವಹಿಸಲಿದ್ದು, ಯಾವುದೇ ಆಸ್ಪತ್ರೆ ಬಗ್ಗೆ ಎಷ್ಟೇ ಹೊತ್ತಿನಲ್ಲಿ ದೂರು ಬಂದರೂ ಈ ತಂಡ ಹಾಗೂ ಎಸ್ಪಿ ಸ್ಥಳಕ್ಕೆ ಭೇಟಿ ನೀಡಿ, ನಿರ್ದಾಕ್ಷಿಣ್ಯ ಕ್ರಮ
ಕೈಗೊಳ್ಳುವಂತೆ ಸೂಚನೆ ನೀಡಿದ್ದೇನೆ ಎಂದರು.
ಈ ಸಂದರ್ಭದಲ್ಲಿ ಸಂಸದ ಜಿ.ಎಂ.ಸಿದ್ದೇಶ್ವರ, ಶಾಸಕರಾದ ಎಸ್.ಎ.ರವೀಂದ್ರನಾಥ, ಎಸ್.ವಿ.ರಾಮಚಂದ್ರಪ್ಪ, ಪ್ರೊ.ಎನ್.ಲಿಂಗಣ್ಣ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ದೀಪಾ ಜಗದೀಶ್ ಮತ್ತಿತರರು ಹಾಜರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss