ಹೊಸದಿಗಂತ ವರದಿ, ಧಾರವಾಡ:
ಪೆಟ್ರೋಲ್-ಡೀಸೆಲ್ ಹಾಗೂ ಎಲ್.ಪಿ.ಜಿ, ಸಿ.ಎನ್.ಜಿ ಅನಿಲ ಬೆಲೆ ಏರಿಕೆ ಖಂಡಿಸಿ, ಧಾರವಾಡ ಆಟೋ ರೀಕ್ಷಾ ಚಾಲಕರ ಅಭಿವೃದ್ಧಿ ಸಂಘದಿಂದ ಜಿಲ್ಲಾಧಿಕಾರಿ ಕಚೇರಿ ಎದುರಿಗೆ ಶನಿವಾರ ಪ್ರತಿಭಟನೆ ನಡೆಯಿತು.
ನಗರದ ಕಲಾಭವನದಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆ, ಜ್ಯುಬ್ಲಿ ವೃತ್ತ, ಕೋರ್ಟ್ ಸರ್ಕಲ್, ತಹಶೀಲ್ದಾರ್ ಕಚೇರಿ, ಹೆಡ್ ಪೋಸ್ಟ್ ಮಾರ್ಗವಾಗಿ ಸಂಚರಿಸಿ, ಜಿಲ್ಲಾಧಿಕಾರಿ ಕಚೇರಿ ಮುಂದೆ ಸಮಾವೇಶಗೊಂಡರು.
ಸುಮಾರು ಅರ್ಧ ಗಂಟೆಗೂ ಅಧಿಕ ಹೊತ್ತು ಪ್ರತಿಭಟಿಸಿದ ಪ್ರತಿಭಟನಾಕಾರರು, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿ, ತೈಲ ಬೆಲೆ, ಅಡುಗೆ ಅನಿಲ ಬೆಲೆ ಏರಿಕೆಯನ್ನು ತೀವ್ರಗಾಗಿ ಖಂಡಿಸಿದರು.
ನಿತ್ಯವೂ ಪೆಟ್ರೋಲ್-ಡೀಸೆಲ್, ಎಲ್.ಪಿ.ಜಿ, ಸಿಎನ್.ಜಿ, ಅಡುಗೆ ಅನಿಲ ಬೆಲೆ ಏರಿಕೆಯು ಆಟೋ ಚಾಲರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಕೋವಿಡ್ ಸಂದಿಗ್ಧತೆಯಲ್ಲೂ ಆಟೋ ಚಾಲಕರಿಗೆ ಬಹಳ ಅನ್ಯಾಯ ಆಗಿದೆ ಎಂದು ಅಳಲು ತೋಡಿಕೊಂಡರು.
ಮನೆಗಳ ಬಾಡಿಗೆ, ಬ್ಯಾಂಕ್ ಲೋನ್, ಮೈಕ್ರೋ ಫೈನಾನ್ಸ್, ಶಾಲೆಗಳ ದುಬಾರಿ ಶುಲ್ಕದ ಜತೆಗೆ ನಿತ್ಯವೂ ಗಗನಕ್ಕೇರುವ ಅಗತ್ಯ ವಸ್ತುಗಳ ಬೆಲೆಯ ಬಿಸಿಯಿಂದ ಚಾಲಕರ ಗೋಳ ಹೇಳತೀರದಾಗಿದೆ ಎಂದು ನೋವು ತೋಡಿಕೊಂಡರು.
ಪೆಟ್ರೋಲ್-ಡೀಸೆಲ್, ಅಡುಗೆ ಅನಿಲ ದರ ಇಳಕೆ, ಆಟೋ ಚಾಲಕರ ಅಭಿವೃದ್ಧಿ ನಿಗಮ ಸ್ಥಾಪನೆ, ಆಟೋ ಚಾಲರಿಗೆ ರೂ.10 ಲಕ್ಷದ ಉಚಿತ ವಿಮೆ, ಆಟೋ ಚಾಲಕರ ಮಕ್ಕಳಿಗೆ 1ನೇ ತರಗತಿಯಿಂದ ಉನ್ನತ ವ್ಯಾಸಂಗದವರೆಗೆ ಉಚಿತ ಶಿಕ್ಷಣ ಸೇರಿದಂತೆ ಹಲವು ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಆಟೋ ಚಾಲಕತ ಸಂಘದ ಅಧ್ಯಕ್ಷ ಜೀವನ ಉತ್ಕುರಿ, ಲಕ್ಷ್ಮಣ ಜಮನಾಳ, ವಿ.ಬಿ.ಸಂಜೀವಪ್ಪನವರ, ನೂರ ಅಹ್ಮದ್ ಮಾಗಡಿ, ರಜಾಕ್ ಹಂಚಿನಮನಿ, ಲಿಂಗರಾಜ ಕರಿಗಾರ, ಕೈಲಾಸ ಕಟ್ಟಿಮನಿ, ಗೌಸ್ ಕಿತ್ತೂರ ಅನೇಕರು ಇದ್ದರು.