ಪೆರಿಯಾರ್ ವಿವಾದಕ್ಕೆ ಕ್ಷಮೆ ಕೇಳೋ ಮಾತೇ ಇಲ್ಲ ಎಂದ ಸೂಪರ್ ಸ್ಟಾರ್

0
188

ಚೆನ್ನೈ: ಸಮಾಜ ಪರಿವರ್ತಕ ಪೆರಿಯಾರ್ ಇವಿ ರಾಮಸ್ವಾಮಿ ಅವರು ಕುರಿತು ಮಾಧ್ಯಮದ ವರದಿ ಉಲ್ಲೇಖಿಸಿಯೇ ನಾನು ಹೇಳಿದ್ದು, ಹೀಗಾಗಿ ಕ್ಷಮೆಯಾಚಿಸುವುದಿಲ್ಲ ಎಂದು ಸೂಪರ್ ಸ್ಟಾರ್ ರಜನಿಕಾಂತ್ ತಿಳಿಸಿದ್ದಾರೆ.

ದ್ರಾವಿಡ ಚಳವಳಿಯ ಪಿತಾಮಹ ಎಂದೇ ಕರೆಯಲಾಗುವ ಪೆರಿಯಾರ್ ಅವರ ಗೌರವಕ್ಕೆ ಧಕ್ಕೆ ಬರುವಂತಹ ಹೇಳಿಕೆಯನ್ನು ನಟ ರಜನಿಕಾಂತ್ ನೀಡಿದ್ದಾರೆ ಎಂದು ಆರೋಪಿಸಿ ದ್ರಾವಿಡರ್ ವಿದುತಲೈ ಕಳಗಂ ಸಂಘಟನೆಯ ಸದಸ್ಯರು ದೂರು ನೀಡಿದ್ದರು. ಪೆರಿಯಾರ್ ಅವರ ಬಗ್ಗೆ ಸುಳ್ಳು ಸುದ್ದಿ ಹರಡಿರುವ ರಜನಿಕಾಂತ್ ಸಮಾಜಕ್ಕೆ ತಪ್ಪು ಸಂದೇಶ ರವಾನಿಸುತ್ತಿದ್ದಾರೆ. ಈ ಕುರಿತು ಅವರು ಬೇಷರತ್ ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ರಜನಿಕಾಂತ್ ಮನೆ ಮುಂದೆ ಗೇರಾವ್ ಹಾಕಲಾಗುವುದು ಎಂದು ದ್ರಾವಿಡರ್ ವಿದುತಲೈ ಕಳಗಂ ಸಂಘಟನೆ ಎಚ್ಚರಿಕೆ ನೀಡಿತ್ತು.

ಈ ಹಿನ್ನೆಲೆಯಲ್ಲಿ ನಟ ರಜನಿಕಾಂತ್, ಕ್ಷಮೆ ಯಾಚಿಸಿದರೆ ನಾನು ಹೇಳಿದ್ದು ಸುಳ್ಳು ಎಂಬಂತಾಗುತ್ತದೆ. ಹೀಗಾಗಿ ಯಾವುದೇ ಕಾರಣಕ್ಕೂ ಕ್ಷಮೆ ಕೇಳುವುದಿಲ್ಲ. ನಾನು ಮಾಧ್ಯಮದ ವರದಿಯನ್ನು ಉಲ್ಲೇಖಿಸಿಯೇ ಹೇಳಿದ್ದೇ ವಿನಃ ಬೇರೆ ಏನು ಹೇಳಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಏನಿದು ವಿವಾದತ್ಮಾಕ ಹೇಳಿಕೆ?: 1971ರಲ್ಲಿ ಪೆರಿಯಾರ್ ಸೇಲಂನಲ್ಲಿ ಮೌಢ್ಯತೆ ವಿರುದ್ಧ ಬೃಹತ್ ಜಾಥ ಆಯೋಜಿಸಿದ್ದರು. ಈ ಸಂದರ್ಭದಲ್ಲಿ ರಾಮಚಂದ್ರ ಹಾಗೂ ಸೀತೆಯ ನಗ್ನ ಚಿತ್ರಕ್ಕೆ ಗಂಧದ ಹಾರ ಹಾಕಿ ಮೆರವಣಿಗೆ ನಡೆಸಿದ್ದರು. ಈ ಸುದ್ದಿಯನ್ನು ಯಾವ ಮಾಧ್ಯಮವೂ ಪ್ರಕಟಿಸಿರಲಿಲ್ಲ.

ಆದರೆ ತುಘಲಕ್ ನಿಯತಕಾಲಿಕೆ ಮಾತ್ರ ಆ ವರದಿ ಪ್ರಕಟಿಸಿ ಟೀಕೆ ಮಾಡಿತ್ತು. ಇದು ಅಂದು ಆಡಳಿತ ನಡೆಸುತ್ತಿದ್ದ ಕೆ.ಕರುಣಾನಿಧಿ ನೇತೃತ್ವದ ಸರ್ಕಾರಕ್ಕೆ ಇರಿಸು ಮುರಿಸು ಉಂಟಾಗುವಂತೆ ಮಾಡಿತ್ತು ಎಂದು ರಜನಿಕಾಂತ್ ಜ.14ರಂದು ನಡೆದ ತಮಿಳು ನಿಯತಕಾಲಿಕೆ ತುಘಲಕ್ ನ 50ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ನೆನಪಿಸಿಕೊಂಡಿದ್ದರು.

LEAVE A REPLY

Please enter your comment!
Please enter your name here