ಕಾಸರಗೋಡು: ಪೆರ್ಲ ಪರಿಸರದಲ್ಲಿ ಮಳೆನೀರು ಸರಾಗವಾಗಿ ಹರಿದು ಹೋಗಲು ಸ್ಥಾಪಿಸಿದ ಚರಂಡಿಯನ್ನು ಮೊಬೈಲ್ ಕಂಪೆನಿಯೊಂದರ ಕೇಬಲ್ ಅಳವಡಿಸಲು ಬಳಸಿಕೊಂಡ ಬಗ್ಗೆ ಆರೋಪ ಉಂಟಾಗಿದೆ.
ಸೇರಾಜೆಯಿಂದ ಪೆರ್ಲಕ್ಕೆ ತೆರಳುವ ರಸ್ತೆ ಬದಿಯ ಚರಂಡಿಯಲ್ಲೇ ಖಾಸಗಿ ಮೊಬೈಲ್ ಸಂಸ್ಥೆಯೊಂದು ಕೇಬಲ್ ಸ್ಥಾಪಿಸಲು ಕಾಮಗಾರಿ ನಡೆಸುತ್ತಿದೆ. ಕೇಬಲ್ ಅಳವಡಿಸಲು ಹೊಸ ಹೊಂಡ ತೋಡುವ ಬದಲು ರಸ್ತೆ ಬದಿಯ ಚರಂಡಿಯ ಆಳ ಹೆಚ್ಚಿಸಿ ಅದರಲ್ಲಿ ಕೇಬಲ್ ಹಾಕುತ್ತಿರುವುದಾಗಿ ದೂರಲಾಗಿದೆ. ಇದರಿಂದ ಮಳೆನೀರು ರಸ್ತೆಯಲ್ಲೇ ಹರಿದು ಹೋಗುತ್ತಿದ್ದು , ರಸ್ತೆಯ ಡಾಮರು, ಕಾಂಕ್ರೀಟ್ ನಾಶಗೊಳ್ಳುತ್ತಿದೆ. ಈ ಕುರಿತು ಸಾರ್ವಜನಿಕರು ಎಣ್ಮಕಜೆ ಗ್ರಾಮ ಪಂಚಾಯತ್ ಕಚೇರಿಗೆ ದೂರು ನೀಡಿದ್ದಾರೆ. ಇದೇ ವೇಳೆ ಯಂತ್ರಗಳನ್ನು ಬಳಸಿ ಹೊಂಡ ತೋಡಬಾರದು ಹಾಗೂ ರಸ್ತೆಗೆ ಹಾನಿ ಮಾಡಬಾರದು ಅಲ್ಲದೆ ಸಾರ್ವಜನಿಕರಿಗೆ ತೊಂದರೆ ಸೃಷ್ಟಿಸಬಾರದು ಎಂದು ಮೊಬೈಲ್ ಸಂಸ್ಥೆಗೆ ನಿರ್ದೇಶಿಸಿರುವುದಾಗಿ ಪಂಚಾಯತ್ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಈ ಪ್ರದೇಶದಲ್ಲಿ ಯಂತ್ರ ಬಳಸಿ ಚರಂಡಿಯ ಆಳ ಹೆಚ್ಚಿಸಿ ಕೇಬಲ್ ಅಳವಡಿಕೆ ಪ್ರಕ್ರಿಯೆ ನಡೆಯುತ್ತಿದೆ. ಇನ್ನೊಂದೆಡೆ ಕುಡಿಯುವ ನೀರಿನ ಪೈಪ್ ಕೂಡ ಕೆಲವು ಕಡೆ ನಾಶಗೊಂಡಿರುವುದಾಗಿ ಆರೋಪಿಸಲಾಗಿದೆ. ಪ್ರಸ್ತುತ ನಾಗರಿಕರ ದೂರಿನ ಮೇರೆಗೆ ಪಂಚಾಯತ್ ಕಾರ್ಯದರ್ಶಿ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿಗೆ ತಾತ್ಕಾಲಿಕ ತಡೆಯೊಡ್ಡಿದ್ದಾರೆ. ಈ ಮಧ್ಯೆ ಮಳೆನೀರು ಹರಿದು ಹೋಗಲು ಸಮರ್ಪಕ ಚರಂಡಿ ವ್ಯವಸ್ಥೆ ಮಾಡಿದ ಬಳಿಕ ಮೊಬೈಲ್ ಕೇಬಲ್ ಸ್ಥಾಪಿಸಲು ಕಾಮಗಾರಿ ನಡೆಸುವಂತೆ ಸಾರ್ವಜನಿಕ ವಲಯ ಆಗ್ರಹಿಸಿದೆ.