Tuesday, June 28, 2022

Latest Posts

ಪೇರಲ ಹಣ್ಣಲ್ಲಿ ಕಪ್ಪು ಚುಕ್ಕಿ ರೋಗ: ಕೊಳ್ಳುವವರಿಲ್ಲದೆ ಕಂಗಾಲಾಗಿರುವ ರೈತರು!

ಹೊಸ ದಿಗಂತ ವರದಿ, ಹಾವೇರಿ:
 
ಗಿಡದಲ್ಲೇ ಹಣ್ಣಿಗೆ ಕರಿ ಚಿಕ್ಕಿ ಮೂಡುವುದು ಹಾಗೂ ಹಣ್ಣು ಗಿಡದಲ್ಲೇ ಸೀಳಿದಂತಾಗುತ್ತಿರುವುದರಿಂದ ಹಣ್ಣನ್ನು ಕೊಳ್ಳುವವರಿಲ್ಲದೆ ಪೇರಲ ಬೆಳೆದ ರೈತ ಕಂಗಾಲಾಗಿದ್ದಾರೆ.
ಹೌದು, ಜಿಲ್ಲೆಯಲ್ಲಿ ತೋಟಗಾರಿಕೆ ಬೆಳೆಯಾಗಿ ಬೆಳೆದ ಪೇರಲ ಹಣ್ಣು ತೋಟದ ಗಿಡದಲ್ಲಿನೇ ಕಪ್ಪು ಚುಕ್ಕಿ ರೋಗ ಹಾಗೂ ಹಣ್ಣು ನಾಲ್ಕಾರು ಭಾಗಗಳಾಗಿ ಸೀಳುತ್ತಿದೆ. ಇದರಿಂದ ಪೇರಲ ಹಣ್ಣನ್ನು ಕೊಳ್ಳುವುದಕ್ಕೆ ಯಾರೂ ಮುಂದೆ ಬರುತ್ತಿಲ್ಲ ಇದರಿಂದಾಗಿ ಅಪಾರ ಪ್ರಮಾಣದಲ್ಲಿ ಬಂದ ಫಸಲು ಗಿಡದಲ್ಲಿನೇ ಕೊಳೆಯುತ್ತಿದೆ.
ಮುಂಗಾರಿನಲ್ಲಿ ಉತ್ತಮ ಮಳೆಯಾಗಿದ್ದರಿಂದ ಪೇರಲ ಉತ್ತಮ ಹೂವು ಮತ್ತು ಕಾಯಿಗಟ್ಟಿತ್ತು. ಇದರಿಂದ ಈ ಬಾರಿ ಉತ್ತಮ ಫಸಲು ಬರಬಹುದೆಂದು ನಿರೀಕ್ಷಿಸಿದ್ದ ರೈತ. ಆದರೆ ಮುಂಗಾರು ಎಡೆಬಿಡದೆ ಆಗುತ್ತ ಬಂದಿತು ಮತ್ತು ಹಿಂಗಾರು ಮಳೆಯೂ ಅಧಿಕ ಪ್ರಮಾಣದಲ್ಲಿ ಹಾಗೂ ಸತತ ಆಗುತ್ತ ಬಂದಿದ್ದರಿಂದ ಉತ್ತಮ ರೀತಿಯಿಂದ ಬೆಳೆದು ನಿಂತ ಪೇರಲದಲ್ಲಿ ಗಂಟು ಗಂಟಿನಂತಹ ಚುಕ್ಕಿಗಳು ಕಾಣಲರಂಭಿಸಿದವು. ಇದಲ್ಲದೆ ಕಾಯಿ ಮತ್ತು ಹಣ್ಣುಗಳು ಹಲವು ಭಾಗಗಳಾಗಿ ಸೀಳಲಾರಂಭಿಸಿದವು.
ಇದರಿಂದ ಸಗಟು ರೀತಿಯಲ್ಲಿ ಪೇರಲವನ್ನು ಕೊಳ್ಳುವ ಸಗಟು ವ್ಯಾಪರಿ ಮತ್ತು ಚಿಲ್ಲರೆ ವ್ಯಾಪರಿಗಳು ಹಣ್ಣನ್ನು ಕೊಳ್ಳುವುದಕ್ಕೆ ಮುಂದೆ ಬಾರದ ಹಿನ್ನಲೆಯಲ್ಲಿ ರೈತರು ಇಂತಹ ಪೇರಲವನ್ನು ಕಿತ್ತು ತೋಟದಲ್ಲೇ ಹಾಕಿದ್ದಾರೆ. ಇದರಿಂದ ಈ ಬಾರಿ ಫಸಲು ಅಧಿಕ ಪ್ರಮಾಣದಲ್ಲಿ ಬಂದಿದ್ದರೂ ಕೊಳ್ಳುವವರಿಲ್ಲದ್ದರಿಂದ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ ರೈತರ ಸ್ಥಿತಿ.
ಹೂವು ಬಿಡುವ ಸಂದರ್ಭದಲ್ಲಿ ಕೀಟ ಹೂವಿನಲ್ಲಿ ಮೊಟ್ಟೆ ಇಡುವುದರಿಂದ ಮತ್ತು ಚಿಕ್ಕ ಕಾಯಿ ಇರುವ ಸಂದರ್ಭದಲ್ಲಿ ಕೀಟ ರಸ ಹೀರುವುದರಿಂದ ಕಾಯಿಯಲ್ಲಿ ಕಪ್ಪು ಚುಕ್ಕಿ ಕಾಣಿಸುತ್ತದೆ. ಇದಲ್ಲದೆ ಹಣ್ಣು ಮಾಗಿದರೆ ಅದರಲ್ಲಿರುವ ಕೀಟ ಹಣ್ಣಲ್ಲಿ ರಂದ್ರವನ್ನು ಮಾಡಿಕೊಂಡು ಹೊರಕ್ಕೆ ಬರುವುದರಿಂದ ಹಣ್ಣು ಕೆಡುತ್ತದೆ.
ಇನ್ನು ಅಧಿಕ ಮಳೆ ಆದರೆ, ಹೆಚ್ಚಿನ ಪ್ರಮಾಣದಲ್ಲಿ ಜಮೀನಿಗೆ ನೀರನ್ನು ಉಣಿಸಿದರೆ ಇಲ್ಲವೆ ಗಿಡಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಯೂರಿಯಾ ಗೊಬ್ಬರವನ್ನು ನೀಡಿದರೂ ಹಣ್ಣು ಸೀಳುತ್ತದೆ ಎನ್ನುತ್ತಾರೆ ತೋಟಗಾರಿಕೆ ಉಪ ನಿರ್ದೇಶಕ ಪ್ರದೀಪ.ಎಲ್.

೨೫-೩೦ ಹೆಕ್ಟೇರದಲ್ಲಿನ ಪೇರಲಕ್ಕೆ ಕೀಟ
ಜಿಲ್ಲೆಯಲ್ಲಿ ಒಟ್ಟು ೧೨೦.೩೪ ಹೆಕ್ಟೇರಿನಲ್ಲಿ ಪೇರಲವನ್ನು ಬೆಳೆಯಲಾಗುತ್ತಿದೆ. ಇದರಲ್ಲಿ ಹಾವೇರಿ ತಾಲೂಕು ಸೇರಿದಂತೆ ಜಿಲ್ಲೆಯ ಕೆಲ ತಾಲೂಕುಗಳಲ್ಲಿ ಅಧಿಕ ಮಳೆ ಆದ ತಾಲೂಕುಗಳಲ್ಲಿನ ಕಪ್ಪು ಜಮೀನಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ತೇವಾಂಶ ಆಗಿರುವುದರಿಂದ ಪೇರಲ ಹಣ್ಣು ಹಾನಿಗೊಳಗಾಗಿದೆ. ಜಿಲ್ಲೆಯಲ್ಲಿ ಅಂದಾಜು ೨೫-೩೦ ಹೆಕ್ಟೇರದಲ್ಲಿನ ಪೇರಲಕ್ಕೆ ಕೀಟ ಬಾಧೆ ಆಗಿದೆ.

ಬೆಳೆ ಸಂಪೂರ್ಣವಾಗಿ ಹಾಳು 
ಫಸಲು ಅಧಿಕ ಪ್ರಮಾಣದಲ್ಲಿ ಬಂದಿತ್ತು ಆದರೆ ಕಪ್ಪು ಚುಕ್ಕಿ ರೋಗ ಹಾಗೂ ಹಣ್ಣು ಸೀಳಿದ್ದರಿಂದ ವ್ಯಾಪಾರಿಗಳು ಮತ್ತು ಜನತೆ ಕೊಳ್ಳದೇ ಇದ್ದುದರಿಂದ ಕಾಯಿ ಮತ್ತು ಹಣ್ಣನ್ನು ಹರಿದು ನೆಲಕ್ಕೆ ಹಾಕುವಂತಾಗಿದೆ. ಇದರಿಂದ ಒಂದು ಬೆಳೆ ಸಂಪೂರ್ಣವಾಗಿ ಹಾಳಾದಂತಾಗಿದೆ.
ಮುತ್ತಣ್ಣ ಹೆಬ್ಬಾಳಮಠ
ಪೇರಲ ಬೆಳೆದ ಹಾಲಗಿ ರೈತ

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss