ಮಂಗಳೂರು: ಆಕೆಯದ್ದು ಹರಕು ಮುರುಕು ಪುಟ್ಟ ಗುಡಿಸಲು.. ಮನೆ ರಿಪೇರಿಗೆಂದು ಪೈಸೆ ಪೈಸೆ ಸೇರಿಸಿ 30,000 ಸಾವಿರ ರೂ. ಒಟ್ಟುಗೂಡಿಸಿದ್ದರು. ಆದರೆ, ಈಗ ತನ್ನಲ್ಲಿರುವ ಹಣವನ್ನು ವಿನಿಯೋಗಿಸಿದ್ದು ಬಡವರಿಗೆ ಅಕ್ಕಿ ನೀಡಲು…
ಇದು ಮಲ್ಪೆಯ ಮೀನುಗಾರಿಕಾ ಮಹಿಳೆಯೊಬ್ಬರ ಸೇವೆಯ ನೈಜ ಕಥೆ. ತಾನು ಬಡತನದ ಬೇಗೆಯಲ್ಲಿ ಬೇಯುತ್ತಿದ್ದರೂ, ಕೊರೋನಾ ಲಾಕ್ಡೌನ್ನಿಂದ ಸಂಕಷ್ಟಕ್ಕೆ ಒಳಗಾದ ಬಡವರಿಗೆ ಇವರ ಮನ ಮಿಡಿಯಿತು. ಯಾವುದೇ ಪ್ರಚಾರವಿಲ್ಲದೆ ತಾನು ಕೂಡಿಟ್ಟ ಹಣದಿಂದ 140 ಮನೆಗೆ ಅಕ್ಕಿ ಹಂಚಿ ಮಾನವೀಯತೆಯ ನೈಜ ದರ್ಶನ ಮಾಡಿಯೇ ಬಿಟ್ಟಿದ್ದಾರೆ ಈ ತಾಯಿ. ಸೇವೆ ಎಂಬ ಪದಕ್ಕೆ ಯಥಾರ್ಥ ಕಲ್ಪಿಸಿದ ಈ ಮಹಾತಾಯಿಯ ಹೆಸರು ಶಾರದಾ.
ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ಮೀನು ಮಾರಿ ಪುಟ್ಟ ಗುಡಿಸಲಲ್ಲಿ ಜೀವನ ಸಾಗಿಸುತ್ತಿರುವ ಶಾರದ ಅವರು ಮಲ್ಪೆ ವಡಭಾಂಡೇಶ್ವರ ವಾರ್ಡ್ ನೆರ್ಗಿಯಲ್ಲಿ ಒಟ್ಟು 140 ಮನೆಗಳಿಗೆ ತಲಾ 5 ಕೆಜಿ ಯಂತೆ 700 ಕೆಜಿ ಅಕ್ಕಿ ಹಂಚಿ ಯಾವುದೇ ಪ್ರಚಾರವಿಲ್ಲದೆ ಗುಡಿಸಲು ಸೇರಿಕೊಂಡಿದ್ದಾರೆ. ತನಗೆ ನ್ಯಾಯಬೆಲೆ ಅಂಗಡಿಯಲ್ಲಿ ದೊರೆತ ಅಕ್ಕಿಯನ್ನೂ ಕೂಡ ತನ್ನ ಮನೆ ವಠಾರದ ಕೂಲಿ ಕಾರ್ಮಿಕರಿಗೆ ಹಂಚಿ ಸೇವೆ ಪದಕ್ಕೆ ಅರ್ಥ ತಂದು ಕೊಟ್ಟಿದ್ದಾರೆ. ‘ನನ್ನ ಕೈಯಲ್ಲಿ ಇರುವ ಎಲ್ಲ ಹಣ ಬಡವರಿಗಾಗಿ ಅಕ್ಕಿ ನೀಡಿ ಖಾಲಿಯಾಗಿದೆ, ಸಾಧ್ಯವಾದರೆ ಕೊರೋನಾದಂತಹ ಕಷ್ಟದ ಸಮಯದಲ್ಲಿ ಮತ್ತಷ್ಟು ಮಂದಿಗೆ ಅಕ್ಕಿ ದಾನ ನೀಡುವೆ’ ಎನ್ನುವ ಅವರ ಮಾತು ಮಾನವೀಯತೆ, ಸಂಸ್ಕಾರದ ಮಹೋನ್ನತ ಉದಾಹರಣೆಯಾಗಿದೆ.
ಕೊರೋನಾ ಲಾಕ್ಡೌನ್ ಅವಯಲ್ಲಿ ಧನಿಕರೆನಿಸಿಕೊಂಡವರು ಬಡವರಿಗೆ ಆಹಾರ ಕಿಟ್, ಅಕ್ಕಿ ನೀಡಿ, ಪಡೆದವರ ಜತೆ ಫೋಟೊ ತೆಗೆಸಿಕೊಂಡು ಸಾಮಾಜಿಕ ಜಾಲತಾಣ, ಪತ್ರಿಕೆಯಲ್ಲಿ ಹಾಕಿಸಿ ಹೆಮ್ಮೆ ಪಟ್ಟುಕೊಳ್ಳುತ್ತಿದ್ದಾರೆ. ನಮ್ಮ ಸಂಸ್ಥೆ ದಾನ ನೀಡಿದೆ, ಆದರೆ, ನಮಗೆ ಪ್ರಚಾರ ಬೇಡ, ದಾಖಲೆಗಾಗಿ ಮಾತ್ರ ಫೋಟೊ ತೆಗೆದಿದ್ದೇವೆ ಎಂದು ಹೇಳಿಕೊಳ್ಳುವ ದಾನ ಶೂರರ ಮುಂದೆ ಮಲ್ಪೆಯ ಶಾರದಾ ಅವರು ನೈಜವಾದ ಸೇವಾ ಮನೋಭಾವ ಹೊಂದಿರುವ ಮಹಾದಾನಿಯಾಗಿ ಗೋಚರಿಸುತ್ತಾರೆ.