ಮದ್ದೂರು: ಪೊಲೀಸರೇ ಚಾಲನೆ ಮಾಡುತ್ತಿದ್ದ ಎರಡು ಬೈಕ್ಗಳ ನಡುವೆ ಡಿಕ್ಕಿ ಹೊಡೆದ ಪರಿಣಾಮ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಸಿಬ್ಬಂದಿ ಸ್ಥಳದಲ್ಲೇ ಮೃತಪಟ್ಟು ಎಎಎಸ್ಐ ಗಾಯಗೊಂಡಿರುವ ಘಟನೆ ತಾಲೂಕಿನ ಕೆಸ್ತೂರು ಠಾಣೆ ವ್ಯಾಪ್ತಿಯ ತೊರೆಶೆಟ್ಟಹಳ್ಳಿ ಸಮೀಪ ಗುರುವಾರ ಬೆಳಗ್ಗೆ ಜರುಗಿದೆ.
ಮಂಡ್ಯ ಡಿಎಆರ್ ನಲ್ಲಿ ಪೊಲೀಸ್ ಸಿಬ್ಬಂದಿಯಾಗಿದ್ದ ಬಿ.ಎಂ. ಅರುಣ್ಕುಮಾರ್ (25) ಮೃತಪಟ್ಟವರಾಗಿದ್ದು, ತಲೆಗೆ ಬಿದ್ದ ಪೆಟ್ಟಿನಿಂದ ಉಂಟಾದ ತೀವ್ರ ರಕ್ತಸ್ತ್ರಾವದಿಂದ ಸ್ಥಳದಲ್ಲೇ ಅಸುನೀಗಿದ್ದಾರೆ.
ಮತ್ತೊಂದು ಬೈಕ್ ಚಾಲನೆ ಮಾಡುತ್ತಿದ್ದ ಕೆಸ್ತೂರು ಠಾಣೆ ಎಎಸ್ಐ ಕಾಳಯ್ಯ (57) ಅವರಿಗೆ ತೀವ್ರವಾಗಿ ಗಾಯಗಳಾಗಿದ್ದು, ಮಂಡ್ಯ ಜಿಲ್ಲಾ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನಂತರ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಮೂಲತ- ಚಿಕ್ಕಮಗಳೂರು ಜಿಲ್ಲೆ, ಕಡೂರು ತಾಲೂಕಿನ ಬೈರಗೊಂಡನಹಳ್ಳಿಯ ಅರುಣ್ಕುಮಾರ್ 2016ರಲ್ಲಿ ಪೊಲೀಸ್ ಇಲಾಖೆಗೆ ಸೇರಿದ್ದರು. ನಂತರ ಮಂಡ್ಯಡಿಎಆರ್ ನಲ್ಲಿ ಪೊಲೀಸ್ ಸಿಬ್ಬಂದಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಮದ್ದೂರು ತಾಲೂಕು ತೊಪ್ಪನಹಳ್ಳಿಯಲ್ಲಿ ಹಲವು ವರ್ಷಗಳಿಂದ ನಡೆದಿದ್ದ ಜೋಡಿ ಕೊಲೆ ಪ್ರಕರಣದ ದೂರುದಾರ ಹೊನ್ನಯ್ಯ ಅಲಿಯಾಸ್ ಚನ್ನೇಗೌಡ ಅವರಿಗೆ ಗನ್ಮ್ಯಾನ ಆಗಿ ನೇಮಕಗೊಂಡಿದ್ದರು. ಕಾರ್ಯನಿಮಿತ್ತ ಹೊನ್ನಯ್ಯ ತನ್ನ ಬೈಕ್ನಲ್ಲಿ ಕೆಸ್ತೂರು ತೆರಳುತ್ತಿದ್ದರು. ಆತನನ್ನು ಗನ್ಮ್ಯಾನ್ ಮತ್ತೊಂದು ಬೈಕ್ನಲ್ಲಿ ಹಿಂಬಾಲಿಸುತ್ತಿದ್ದರು. ತೊರೆಶೆಟ್ಟಹಳ್ಳಿ ಸಮೀಪದ ಪೆಟ್ರೋಲ್ ಬಂಕೊಂದರಲ್ಲಿ ಬೆಳಗ್ಗೆ 10 ಗಂಟೆ ಸುಮಾರಿಗೆ ಎಎಸ್ಐ ಕಾಳಯ್ಯ ಪೆಟ್ರೋಲ್ ಹಾಕಿಸಿಕೊಂಡು ಬರುತ್ತಿದ್ದರು. ಈ ವೇಳೆ ಮದ್ದೂರು ಕಡೆಯಿಂದ ಬೈಕ್ನಲ್ಲಿ ಹೋಗುತ್ತಿದ್ದ ಅರುಣ್ಕುಮಾರ್ ಬೈಕ್ ಕಾಳಯ್ಯ ಬೈಕ್ಗೆ ಡಿಕ್ಕಿ ಹೊಡೆದಿದೆ. ಅಡ್ಡಾದಿಡ್ಡಿಯಾಗಿ ಚಲಿಸಿದ ನಂತರ ರಸ್ತೆಗೆ ಉರುಳಿ ಬಿದ್ದಿದೆ. ಬೈಕ್ನಲ್ಲಿದ್ದ ಅರುಣ್ಕುಮಾರ್ ರಸ್ತೆ ಬದಿಯ ಕಲ್ಲಿಗೆ ಬಲವಾಗಿ ಹೊಡೆದ ಪರಿಣಾಮ ಸ್ಥಳದಲ್ಲೇ ಅಸುನೀಗಿದ್ದಾರೆ.