Monday, August 8, 2022

Latest Posts

ಪ್ಯಾಸೆಂಜರ್ ರೈಲುಗಳ ಓಡಾಟಕ್ಕೆ ಕೇರಳ ಸರಕಾರದ ಶೀಘ್ರ ಅನುಮತಿಗೆ ಶ್ರೀಕಾಂತ್ ಒತ್ತಾಯ

ಹೊಸ ದಿಗಂತ ವರದಿ, ಕಾಸರಗೋಡು:

ಕರ್ನಾಟಕದಲ್ಲಿ ವಿದ್ಯಾರ್ಥಿಗಳಿಗೆ ತರಗತಿ ಆರಂಭಗೊಂಡ ಹಿನ್ನೆಲೆಯಲ್ಲಿ ಚೆರ್ವತ್ತೂರು – ಮಂಗಳೂರು, ಕಣ್ಣೂರು – ಮಂಗಳೂರು ಪ್ಯಾಸೆಂಜರ್ ರೈಲುಗಳಿಗೆ ಸಂಚರಿಸಲು ಶೀಘ್ರದಲ್ಲಿ ಅನುಮತಿ ನೀಡಬೇಕೆಂದು ಬಿಜೆಪಿ ಕಾಸರಗೋಡು ಜಿಲ್ಲಾಧ್ಯಕ್ಷ , ನ್ಯಾಯವಾದಿ ಕೆ.ಶ್ರೀಕಾಂತ್ ಒತ್ತಾಯಿಸಿದ್ದಾರೆ.
ಈ ಬಗ್ಗೆ ಕೇರಳ ಸರಕಾರವು ಅನುಮತಿ ನೀಡಿದರೆ ರೈಲು ಸಂಚಾರಕ್ಕೆ ಒಪ್ಪಿಗೆ ನೀಡಬಹುದೆಂದು ದಕ್ಷಿಣ ರೈಲ್ವೇ ತಿಳಿಸಿದೆ. ಕರ್ನಾಟಕದಲ್ಲಿ ಮತ್ತು ತಮಿಳುನಾಡಿನಲ್ಲಿ ರೈಲು ಸಂಚಾರಕ್ಕೆ ಹಸಿರು ನಿಶಾನೆ ಲಭಿಸಿದೆ. ಕಣ್ಣೂರು, ಕಾಸರಗೋಡು ಜಿಲ್ಲೆಗಳ ವಿದ್ಯಾರ್ಥಿಗಳಿಗೆ, ಉದ್ಯೋಗಿಗಳಿಗೆ, ರೋಗಿಗಳಿಗೆ ಏಕೈಕ ಆಶ್ರಯವೇ ಪ್ಯಾಸೆಂಬರ್ ರೈಲುಗಳು. ಆದರೆ ಪ್ರಸ್ತುತ ಈ ಮಾರ್ಗದಲ್ಲಿ ಸಂಚರಿಸುವ ರೈಲುಗಳಿಗೆ ಜನರಲ್ ಕಂಪಾರ್ಟ್ ಮೆಂಟ್ ಇಲ್ಲದಿರುವುದು ಹಾಗೂ ಕೆಲವು ಸ್ಟೇಷನ್‌ಗಳಲ್ಲಿ ನಿಲುಗಡೆ ಇಲ್ಲದಿರುವುದು ಪ್ರಯಾಣಿಕರಿಗೆ ತೊಂದರೆಯಾಗಿದೆ. ಮುಂಗಡ ಟಿಕೆಟ್ ಲಭಿಸದ ಕಾರಣ ಹಲವಾರು ವಿದ್ಯಾರ್ಥಿಗಳು ಹಾಸ್ಟೆಲ್‌ಗಳಲ್ಲಿ ವಾಸಿಸಬೇಕಾಗಿ ಬಂದಿದೆ. ಬಹುಪಾಲು ಬಡ ಮತ್ತು ಸಾಮಾನ್ಯ ವಿದ್ಯಾರ್ಥಿಗಳಿಗೆ ಬಸ್ ಪ್ರಯಾಣ ಮತ್ತು ಹಾಸ್ಟೆಲ್ ವೆಚ್ಚವನ್ನು ಭರಿಸಲಾಗುವುದಿಲ್ಲ ಎಂದವರು ತಿಳಿಸಿದ್ದಾರೆ.
ದೀರ್ಘ ದೂರದ ಎ.ಸಿ. ಮತ್ತು ನೋನ್ ಎ.ಸಿ. ಬಸ್ ಸೇವೆಗಳನ್ನು ಈಗಾಗಲೇ ಆರಂಭಿಸಲಾಗಿದೆ. ಆದರೆ ರೈಲು ಸಂಚಾರ ಮಾತ್ರ ಸ್ಥಗಿತಗೊಂಡಿರುವುದು ಜನರ ಅಕ್ರೋಶಕ್ಕೆ ಕಾರಣವಾಗಿದೆ ಎಂದು ಕೆ.ಶ್ರೀಕಾಂತ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss