ಹೊಸ ದಿಗಂತ ವರದಿ, ಕೊಪ್ಪಳ:
ತೆಲಂಗಾಣದ ಕರೀಂನಗರದ ತೆಲುಗು ಆರ್ಟ್ ಫೋಟೋಗ್ರಫಿ ಸಂಸ್ಥೆಯಿಂದ ಏರ್ಪಡಿಸಲಾಗಿದ್ದ ಟಿ.ಎ.ಪಿ ರಾಷ್ಟ್ರಮಟ್ಟದ ಛಾಯಾಚಿತ್ರ ಸ್ಪರ್ಧೆಯಲ್ಲಿ ಕೊಪ್ಪಳದ ಛಾಯಾಗ್ರಾಹಕ ಪ್ರಕಾಶ ಕಂದಕೂರ ಅವರಿಗೆ ಟಿ.ಎ.ಪಿ ವಿಶೇಷ ಪದಕ ಲಭಿಸಿದೆ.
ಸ್ಪರ್ಧೆಯ ಫೋಟೋಜರ್ನಲಿಸಂ ವಿಭಾಗದಲ್ಲಿ ಪ್ರಕಾಶ ಕಂದಕೂರರ ನೀರಿಗಾಗಿ ಹರಸಾಹಸ…(ವೆಂಚರ್ ಫಾರ್ ವಾಟರ್) ಶೀರ್ಷಿಕೆಯ ಚಿತ್ರ ಈ ಪುರಸ್ಕಾರಕ್ಕೆ ಭಾಜನವಾಗಿದೆ. ನೂರಾರು ಜನರು ನೀರಿಗಾಗಿ ಟ್ಯಾಂಕೊಂದನ್ನು ಏರಿ ಸಾಹಸಪಡುತ್ತಿರುವ ಈ ಚಿತ್ರ ಮನುಷ್ಯ ನೀರಿನ ಮಹತ್ವ ಅರಿಯದಿದ್ದರೆ ಮುಂದೊಂದು ದಿನ ಎದುರಿಸಬೇಕಾದ ಸಮಸ್ಯೆಯನ್ನು ಮನನ ಮಾಡಿಸುವಂತಿದೆ. ಈವರೆಗೆ ಒಟ್ಟು 3 ರಾಷ್ಟ್ರಮಟ್ಟದ ಬಹುಮಾನಗಳನ್ನು ಈ ಚಿತ್ರ ಪಡೆದುಕೊಂಡಿರುವುದು ವಿಶೇಷ.
ದೇಶದ ನಾನಾ ರಾಜ್ಯಗಳ 184 ಛಾಯಾಗ್ರಾಹಕರ ಸುಮಾರು 3,842 ಛಾಯಾಚಿತ್ರಗಳು ಸ್ಪರ್ಧೆಗೆ ಆಗಮಿಸಿದ್ದವು. ಖ್ಯಾತ ಛಾಯಾಗ್ರಾಹಕರಾದ ಕೆ.ವಿಶ್ವೇಂದರ್ ರೆಡ್ಡಿ, ತಮ್ಮಾ ಶ್ರೀನಿವಾಸ ರೆಡ್ಡಿ, ಬಂಡಿ ವಿ. ರಮಣ, ವಿ.ಶ್ರೀನಿವಾಸ ಚಾರಿ, ಭಾರ್ಗವ್ ಹರ್ಗೆ, ಕೆ.ವೆಂಕಟೇಶ್ವರುಲು ಸ್ಪರ್ಧೆಯ ತೀರ್ಪುಗಾರರಾಗಿದ್ದರು.
ಫೆಬ್ರವರಿ-2021ರ ಅಂತ್ಯಕ್ಕೆ ಕರೀಂನಗರದಲ್ಲಿ ಛಾಯಾಚಿತ್ರಗಳ ಪ್ರದರ್ಶನ ಹಾಗೂ ಪ್ರಶಸ್ತಿ ವಿತರಣೆ ಸಮಾರಂಭ ನಡೆಯಲಿದೆ ಎಂದು ಸಂಸ್ಥೆಯ ಅಧ್ಯಕ್ಷ ರಾಧರಾಪು ಕುಮಾರಸ್ವಾಮಿ ತಿಳಿಸಿದ್ದಾರೆ.