ಬೀದರ: ಪ್ರತಿದಿನ ಜಿಲ್ಲೆಯಲ್ಲಿ ಸರಾಸರಿ ಶೇ.65ರಷ್ಟು ಕೋವಿಡ್-19 ಪಾಸಿಟಿವ್ ಪ್ರಕರಣಗಳು ದೃಢಪಡುತ್ತಿರುವುದು ಕಂಡು ಬರುತ್ತಿರುವುದರಿಂದ ಸೋಂಕಿತರೊಂದಿಗಿನ ಇತರರ ಸಂಪರ್ಕ ಪತ್ತೆ ಹಚ್ಚುವುದು ಅತ್ಯಂತ ದೊಡ್ಡಕಾರ್ಯವಾಗಿದೆ ಎಂದು ಜಿಲ್ಲಾಧಿಕಾರಿ ರಾಮಚಂದ್ರನ್ ಆರ್. ಅವರು ತಿಳಿಸಿದರು.
ವಾರ್ಡವಾರು ಮತ್ತು ಗ್ರಾಮ ಪಂಚಾಯತ್ ವಾರು ಕೋವಿಡ್-19 ಸಂಪರ್ಕ ಪತ್ತೆ ಹಚ್ಚುವ ಸಿಬ್ಬಂದಿಗಳಿಗೆ ಜಿಲ್ಲಾಡಳಿತದಿಂದ ಆಗಸ್ಟ್ 14ರಂದು ನಗರದ ಶ್ರೀ ಚನ್ನಬಸವ ಪಟ್ಟದ್ದೇವರು ಜಿಲ್ಲಾ ರಂಗಮಂದಿರದಲ್ಲಿ ನಡೆದ ತರಬೇತಿಯಲ್ಲಿ ಅವರು ಮಾತನಾಡಿದರು.
ಕೋರನಾ ವೈರಸ್ ಒಬ್ಬರಿಂದ ಇನ್ನೊಬ್ಬರಿಗೆ ತೀವ್ರ ಹರಡುವುದನ್ನು ತಡೆಯಲೆಂದೇ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕ ಪತ್ತೆ ಹಚ್ಚಲಾಗುತ್ತದೆ. ಈ ಸಂಪರ್ಕ ಪತ್ತೆ ಹಚ್ಚುವ ಕಾರ್ಯವನ್ನು ನಾಳೆ ಮಾಡಿದರೆ ಆಯಿತು ಎನ್ನುವುದಲ್ಲ. ಇದನ್ನು ಆಗಿಂದ್ದಾಗ್ಗೇನೆ ಮಾಡಬೇಕಿದೆ. ಹೀಗಾಗಿ ತಾವು ಈ ವಿಷಯಕ್ಕೆ ಹೆಚ್ಚಿನ ಗಮನ ಕೊಡಬೇಕು ಎಂದರು.
ಮಾರ್ಚನಿಂದ ಇಲ್ಲಿವರೆಗೆ ಕಳೆದು ಐದು ತಿಂಗಳಿನಿಂದ ನಾವೆಲ್ಲರೂ ಕೋವಿಡ್ ವಿರುದ್ಧದ ಹೋರಾಟದಲ್ಲಿ ಭಾಗಿಯಾಗಿದ್ದೇವೆ. ಸಂಪರ್ಕ ಪತ್ತೆ, ಗಂಟಲುದ್ರವದ ಪರೀಕ್ಷೆ, ಹೋಮ್ ಕ್ವಾರಂಟೈನ್, ಹಲವಾರು ಆಪ್ಗಳ ನಿರ್ವಹಣೆಯನ್ನು ಈಗಾಗಲೇ ಜಿಲ್ಲಾ ಆರೋಗ್ಯ ಇಲಾಖೆಯು ಮಾಡುತ್ತಿದೆ. ಇಂದು ತರಬೇತಿ ಪಡೆದ ತಾವುಗಳು ಈಗ ಸಂಪರ್ಕ ಪತ್ತೆ ಹಚ್ಚುವ ಕಾರ್ಯವನ್ನು ಜಿಲ್ಲೆಯಲ್ಲಿ ಅಚ್ಚುಕಟ್ಟಾಗಿ ಮಾಡಬೇಕು ಎಂದು ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಸಲಹೆ ಮಾಡಿದರು.
ಜೂನ್ ಮತ್ತು ಜುಲೈನಲ್ಲಿ ಕೋವಿಡ್ ಸೋಂಕಿತರ ಸಾವಿನ ಸಂಖ್ಯೆಯು ಜಿಲ್ಲೆಯಲ್ಲಿ ಏರುಗತಿಯಲ್ಲಿತ್ತು. ಈ ವೇಳೆ ಸಂಪರ್ಕ ಪತ್ತೆ ಹಚ್ಚುವ ಕಾರ್ಯಕ್ಕೆ ಹೆಚ್ಚಿನ ಒತ್ತು ಕೊಟ್ಟಿದ್ದರಿಂದ ಬಳಿಕ ತುಸು ನಿಯಂತ್ರಣಕ್ಕೆ ಬಂದಿತು. ಆದ್ದರಿಂದ ಸಂಪರ್ಕ ಪತ್ತೆ ಕಾರ್ಯವನ್ನು ತಾವು ಸಾಮಾಜಿಕ ಕಾರ್ಯವೆಂದು ಭಾವಿಸಿ ನಿರ್ವಹಿಸಬೇಕು. ಜಿಲ್ಲೆಯಲ್ಲಿ ಕೋವಿಡ್-19 ನಿಯಂತ್ರಣಕ್ಕೆ ತಮ್ಮೆಲ್ಲರ ಸಹಕಾರ ಅತೀ ಅವಶ್ಯವಿದೆ ಎಂದು ತಿಳಿಸಿದರು.
ಲಕ್ಷಣಗಳಿದ್ದರಷ್ಟೇ ಕೋವಿಡ್-19 ಇದೆ ಎಂದು ಯಾರೂ ತಿಳಿಯಬಾರದು. ಕಾಯಿಲೆ ಬರುವುದಕ್ಕಿಂತ ಮುಂಚೆಯೇ ನಾವು ಪರೀಕ್ಷೆ ನಡೆಸಿದಲ್ಲಿ ಅವಶ್ಯವಿರುವ ಚಿಕಿತ್ಸೆಯನ್ನು ಸಕಾಲಕ್ಕೆ ಪಡೆಯಲು ಸಾಧ್ಯವಾಗುತ್ತದೆ. ರ್ಯಾಟ್ ಮತ್ತು ಆರ್ಟಿಪಿಸಿಆರ್ ಪರೀಕ್ಷೆ ನಡೆಸುವ ಮೂಲಕ ಕೋವಿಡ್ ಹರಡುವುದನ್ನು ತಡೆಗಟ್ಟಲು ಒತ್ತು ಕೊಡಲಾಗುತ್ತಿದೆ. ಈ ಕಾಯಿಲೆಯಿಂದಾಗಿ ನಮ್ಮ ಹಿರಿಯರು ಕೋವಿಡ್-19 ಪಾಸಿಟಿವ್ ಆಗಿ ಸಾಯುತ್ತಿದ್ದಾರೆ. ಹೀಗಾಗಿ ಕೋವಿಡ್-19 ನಿಯಂತ್ರಣ ಕಾರ್ಯವನ್ನು ನಾವೆಲ್ಲರೂ ಗಂಭೀರವಾಗಿ ಪರಿಗಣಿಸಬೇಕು ಎಂದು ಜಿಲ್ಲಾಧಿಕಾರಿಗಳು ಇದೆ ವೇಳೆ ಸಲಹೆ ಮಾಡಿದರು.
ನಾವು ಇಲ್ಲಿವರೆಗೆ ಆರೋಗ್ಯದ ಬಗ್ಗೆ ಸಾಕಷ್ಟು ಮಾತನಾಡಿದ್ದೇವೆ. ಆದರೆ ನಾವುಗಳು ಹೀಗೆ ಬದುಕಲೇಬೇಕು ಎಂದು ಕಲಿಸಿದ್ದು ಈ ಕೋರೋನಾ. ದೇಹದ ಆರೋಗ್ಯ ಕಾಪಾಡಲು ಒತ್ತು ಕೊಡಬೇಕು. ಎಷ್ಟೇ ಒತ್ತಡ ಇದ್ದರೂ, ಏನೇ ಕೆಲಸ ಮಾಡಿದರೂ ದಿನಕ್ಕೆ ಲೀಟರ್ ನೀರು ಕುಡಿಯಬೇಕು. ಕನಿಷ್ಟ ಅರ್ಧಗಂಟೆಯಾದರೂ ವಾಕಿಂಗ್ ಮಾಡಬೇಕು. ಸಾಕಷ್ಟು ಬುದ್ಧಿವಂತರಾಗಿ ಚಿಕ್ಕವಯಸ್ಸಿನಲ್ಲೇ ಉಸಿರು ಹೋದರೆ ನಮ್ಮಿಂದ ಸಮಾಜಕ್ಕೆ ಕೊಡುಗೆ ಸಿಗುವುದಿಲ್ಲ. ಆದ್ದರಿಂದ ಸಮಾಜದಲ್ಲಿ ಎಲ್ಲರೂ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಇದೆ ವೇಳೆ ಜಿಲ್ಲಾಧಿಕಾರಿಗಳು, ಅಧಿಕಾರಿಗಳಿಗೆ ಸಲಹೆ ಮಾಡಿದರು.
ಕಾಂಟ್ಯಾಕ್ಟ್ ಟ್ರೇಸಿಂಗ್ ಆಪ್ ಬಳಸಿ ಸಂಪರ್ಕ ಪತ್ತೆ ಹಚ್ಚುವ ಕ್ರಮದ ಬಗ್ಗೆ ಇದೆ ವೇಳೆಯಲ್ಲಿ ಜಿಲ್ಲಾ ಮಾಸ್ಟರ್ ಟ್ರೇನರ್ ಹಾಗೂ ಪಶು ವೈದ್ಯಾಧಿಕಾರಿಗಳಾದ ಡಾ.ಗೌತಮ ಅರಳಿ ಅವರು ಸಮಗ್ರ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ರುದ್ರೇಶ ಗಾಳಿ ಇದ್ದರು.