Monday, August 8, 2022

Latest Posts

ಪ್ರತಿ ತಿಂಗಳು ನಗರಪಾಲಿಕೆ ವ್ಯಾಪ್ತಿಯಲ್ಲಿ ನೀರಿನ ಅದಾಲತ್: ದಿವಾಕರ ಪಾಂಡೇಶ್ವರ ಮೇಯರ್

ಮಂಗಳೂರು: ಮಂಗಳೂರು ಮಹಾ ನಗರಪಾಲಿಕೆಯ ಮೇಯರ್ ದಿವಾಕರ ಪಾಂಡೇಶ್ವರ ನೀರಿನ ಬಿಲ್ಲುಗಳ ಮೇಲಿರುವ ಗೊಂದಲಗಳನ್ನು ನಿವಾರಿಸಲು ತಿಂಗಳಿಗೊಮ್ಮೆ ‘ನೀರಿನ ಅದಾಲತ್’ ನಡೆಸುವ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಇದರಿಂದ
ಬೇಕಾಬಿಟ್ಟಿ ಬರುವ ನೀರಿನ ಬಿಲ್ಲು, ಪರಿಹಾರಕ್ಕಾಗಿ ಜನರ ಓಡಾಟ ಇವೆಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ಸಾಧ್ಯವಾಗಲಿದೆ ಎಂದವರು ಹೇಳಿದ್ದಾರೆ.
ಮಂಗಳವಾರ ಮಂಗಳೂರು ಮಹಾ ನಗರಪಾಲಿಕೆಯ ಮಾಸಿಕ ಸಾಮಾನ್ಯ ಸಭೆ ನಡೆಯಿತು. ಮೇಯರ್ ದಿವಾಕರ ಪಾಂಡೇಶ್ವರ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಮಹಾ ನಗರಪಾಲಿಕೆಯ ಪ್ರತಿಪಕ್ಷ ಸದಸ್ಯ ನವೀನ್ ಡಿಸೋಜ ನೀರಿನ ಬಿಲ್ಲುಗಳ ಗೊಂದಲದ ಬಗ್ಗೆ ಸಭೆಯ ಗಮನ ಸೆಳೆದು ಪರಿಹಾರಕ್ಕಾಗಿ ಆಗ್ರಹಿಸಿದರು. ಬಡವರೇ ಇದರಿಂದ ಹೆಚ್ಚು ತೊಂದರೆಗೆ ಒಳಗಾಗುತ್ತಿದ್ದಾರೆ ಎಂದು ಅವರು ಹೇಳಿದರು. ಎಂ.ಶಶಿಧರ ಹೆಗ್ಡೆ, ಲ್ಯಾನ್ಸಿಲಾಟ್ ಪಿಂಟೊ, ಸುಧೀರ್ ಶೆಟ್ಟಿ ಮೊದಲಾದವರು ನೀರಿನ ಬಿಲ್ಲುಗಳಲ್ಲಿ ಕಂಡು ಬರುವ ವ್ಯತ್ಯಯಗಳು ಮತ್ತು ಅವುಗಳ ಪರಿಹಾರಕ್ಕಾಗಿ ಮೇಯರ್ ಅವರನ್ನು ಆಗ್ರಹಿಸಿದರು.
ಸುಧೀರ್ ಶೆಟ್ಟಿ ಕಣ್ಣೂರು ಮಾತನಾಡಿ, ನೀರಿನ ಬಿಲ್ಲುಗಳ ಗೊಂದಲ ಬಹಳ ಸಮಯದಿಂದ ಇದೆ. ನೀರಿನ ಬಿಲ್ಲು ಕೊಡುವವರು ಎಂಪಿಡಬ್ಲ್ಯು ವರ್ಕರ್‍ಸ್. ಅವರಿಗೆ ವಾರ್ಡುಗಳ ಪೂರ್ಣ ಪರಿಚಯ ಇಲ್ಲ. ೩-೪ ತಿಂಗಳಿಗೊಮ್ಮೆ ಬಿಲ್ಲು ಕೊಡುತ್ತಾರೆ. ಆಗ ದೊಡ್ಡ ಮೊತ್ತವನ್ನು ಪಾವತಿಸುವುದು ಗ್ರಾಹಕರಿಗೆ ಸಾಧ್ಯ ಆಗುವುದಿಲ್ಲ. ಕನಿಷ್ಟ ಎರಡು ತಿಂಗಳಿಗೊಮ್ಮೆ ನೀರಿನ ಬಿಲ್ಲು ಗ್ರಾಹಕರ ಕೈಸೇರಬೇಕು ಎಂದರು.
ಜೊತೆಗೆ ಇಡೀ ಪಾಲಿಕೆಗೆ ಒಬ್ಬರೇ ಮೀಟರ್ ಇನ್‌ಸ್ಪೆಕ್ಟರ್ ಇದ್ದಾರೆ. ಇನ್ನೂ ಮೂರು-ನಾಲ್ಕು ಮಂದಿ ಮೀಟರ್ ಇನ್‌ಸ್ಪೆಕ್ಟರ್‌ಗಳನ್ನು ನೇಮಕ ಮಾಡಬೇಕು. ಆಗ ಬಹುಮಟ್ಟಿಗೆ ಗೊಂದಲಗಳು ನಿವಾರಣೆಯಾಗಲಿವೆ ಎಂದು ಸುಧೀರ್ ಶೆಟ್ಟಿ ಕಣ್ಣೂರು ಹೇಳಿದರು.
ಮೇಯರ್ ದಿವಾಕರ ಪಾಂಡೇಶ್ವರ ನೀರಿನ ಬಿಲ್ಲು ವ್ಯವಸ್ಥೆಯಲ್ಲಿ ಸುಧಾರಣೆ ತರುವುದಾಗಿ ಪರಿಷತ್ತಿಗೆ ತಿಳಿಸಿದರು.
ಇತ್ತೀಚೆಗೆ ಪಂಪುವೆಲ್‌ನಲ್ಲಿ ಕುಡಿಯುವ ನೀರು ಪೂರೈಕೆಯ ಪೈಪ್‌ಲೈನ್ ಲೀಕೇಜ್ ಆಗಿ ದುರಸ್ಥಿ ಪಡಿಸುತ್ತಿರುವ ವೇಳೆ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ತಡೆದಿದ್ದಾರೆ. ಇನ್ನೂ ಆ ಕಾಮಗಾರಿ ಪೂರ್ಣಗೊಂಡಿಲ್ಲ, ಪರಿಣಾಮವಾಗಿ ಪಾಲಿಕೆಯ ಆರು ವಾರ್ಡುಗಳಿಗೆ ನೀರಿನ ಸಮಸ್ಯೆ ಉಂಟಾಗಿದೆ ಎಂದು ಶಶಿಧರ ಹೆಗ್ಡೆ ಹೇಳಿದರು.
ಉತ್ತರಿಸಿದ ಮಹಾ ನಗರಪಾಲಿಕೆಯ ಆಯುಕ್ತ ಅಕ್ಷಯ ಶ್ರೀಧರ್, ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ಬಳಿಕ ಕರೆ ಮಾಡಿ ವಿಷಾದ ವ್ಯಕ್ತ ಪಡಿಸಿದ್ದಾರೆ. ನಂತರದ ದಿನಗಳಲ್ಲಿ ಭಾರಿ ಮಳೆ ಸುರಿದ ಕಾರಣ ಕಾಮಗಾರಿ ಮುಗಿಸುವುದು ಸಾಧ್ಯವಾಗಿಲ್ಲ. ತೊಂದರೆಯನ್ನು ನಿವಾರಿಸುವ ಕಾಮಗಾರಿ ಪ್ರಗತಿಯಲ್ಲಿದೆ. ಮುಂದೆ ತಿಂಗಳಿಗೊಮ್ಮೆ ವಿವಿಧ ಇಲಾಖೆಗಳ ಅಧಿಕಾರಿಗಳ ಸಮನ್ವಯ ಸಭೆಯನ್ನು ನಡೆಸಿ ಅಭಿವೃದ್ಧಿ ಕೆಲಸ ಕಾರ್ಯಗಳು ಸುಗಮವಾಗಲು ಕ್ರಮ ವಹಿಸಲಾಗುವುದು ಎಂದರು.
ತಲಾ ರೂ.25 ಲಕ್ಷ ಅನುದಾನ
ಸಭೆಯಲ್ಲಿ ಮಹಾ ನಗರಪಾಲಿಕೆಯ ಮೇಯರ್ ದಿವಾಕರ ಪಾಂಡೇಶ್ವರ ಪ್ರತಿಯೊಬ್ಬ ಸದಸ್ಯರಿಗೆ ತಲಾ ರೂ.೨೫ ಲಕ್ಷ ಅಭಿವೃದ್ಧಿ ಅನುದಾನವನ್ನು ಪ್ರಕಟಿಸಿದರು. ರೂ.೧೫ ಲಕ್ಷದಲ್ಲಿ ಚರಂಡಿ ಮತ್ತು ರಸ್ತೆ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬಹುದು. ರೂ.೧೦ ಲಕ್ಷವನ್ನು ದಾರಿದೀಪ, ಯುಜಿಡಿ ಮತ್ತು ಕುಡಿಯುವ ನೀರಿಗಾಗಿ ಖರ್ಚು ಮಾಡಬಹುದು ಎಂದು ಅವರು ಹೇಳಿದರು.
ಮಾಜಿ ಮೇಯರ್ ಭಾಸ್ಕರ ಕೆ. ಅನುದಾನ ಒದಗಿಸಿರುವುದಕ್ಕಾಗಿ ಮೇಯರ್ ಅವರನ್ನು ಅಭಿನಂದಿಸಿದರು. ಗ್ರಾಮೀಣ ಭಾಗದ ಅಭಿವೃದ್ಧಿಗೆ ರೂ.೨೫ ಲಕ್ಷ ಏನೇನೂ ಸಾಲದು, ಹೆಚ್ಚು ಅನುದಾನ ನೀಡಬೇಕು ಎಂದು ಹೇಳಿದರು. ಪ್ರವೀಣ್ ಆಳ್ವ ಕೂಡಾ ಇದೇ ಅಭಿಪ್ರಾಯ ವ್ಯಕ್ತ ಪಡಿಸಿದರು. ಎ.ಸಿ.ವಿನಯರಾಜ್ ಮಾತನಾಡಿ, ಪಾಲಿಕೆಯಲ್ಲಿ ಅನುದಾನವೇ ಇಲ್ಲ. ಹಿಂದೆ ನಡೆಸಿದ ಕಾಮಗಾರಿಗಳ ಬಿಲ್ಲು ಇನ್ನೂ ಪಾವತಿಯಾಗಿಲ್ಲ ಎಂದು ನುಡಿದರು.
ಪಾಲಿಕೆಯ ಸದಸ್ಯರ ಆಗ್ರಹವನ್ನು ಮೇಯರ್ ಪರಿಗಣಿಸಿ ಅನುದಾನ ಪ್ರಕಟಿಸಿದ್ದಾರೆ. ಹಿಂದಿನ ಆಡಳಿತಾವಧಿಯಲ್ಲಿ ಕೂಡಾ ಕಾಮಗಾರಿಗಳ ಬಿಲ್ಲು ಪೆಂಡಿಂಗ್ ಇತ್ತು, ಅದೇನು ಹೊಸ ವಿಷಯ ಅಲ್ಲ. ಸಂಪನ್ಮೂಲ ಸಂಗ್ರಹಕ್ಕೆ ಅಗತ್ಯ ಕ್ರಮವನ್ನು ಮೇಯರ್ ಮತ್ತು ಆಯುಕ್ತರು ಕೈಗೊಳ್ಳುವರು ಎಂದು ಸಚೇತಕ ಪ್ರೇಮಾನಂದ ಶೆಟ್ಟಿ ಚರ್ಚೆಯಲ್ಲಿ ಪಾಲ್ಗೊಳ್ಳುತ್ತಾ ಅಭಿಪ್ರಾಯ ಪಟ್ಟರು.
ಉಪ ಮೇಯರ್ ವೇದಾವತಿ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಕಿರಣ್‌ಕುಮಾರ್, ಪೂರ್ಣಿಮಾ ಮತ್ತು ಶರತ್‌ಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss