Monday, July 4, 2022

Latest Posts

ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿ 78 ಕೋ.ರೂ.ಬಿಡುಗಡೆ: ಮಡಿಕೇರಿ ಕ್ಷೇತ್ರ ವ್ಯಾಪ್ತಿಯ ಕಾಮಗಾರಿಗಳಿಗೆ ಚಾಲನೆ

ಮಡಿಕೇರಿ : ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ಕೊಡಗು ಜಿಲ್ಲೆಗೆ ರಸ್ತೆ ಕಾಮಗಾರಿಗಳಿಗೆ 78 ಕೋಟಿ ರೂ. ಬಿಡುಗಡೆಯಾಗಿದ್ದು, ಮಡಿಕೇರಿ ವಿಧಾನಸಭಾ ಕ್ಷೇತ್ರದ ರಸ್ತೆ ಕಾಮಗಾರಿಗಳಿಗೆ ಸಂಸದ ಪ್ರತಾಪ್ ಸಿಂಹ ಮತ್ತು ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಅವರು ಬುಧವಾರ ಚಾಲನೆ ನೀಡಿದರು.
ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ, ಜಿ.ಪಂ.ಅಧ್ಯಕ್ಷ ಬಿ.ಎ.ಹರೀಶ್, ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಸದಸ್ಯ ಮುರಳಿ ಕರುಂಬಮ್ಮಯ್ಯ, ತಾ.ಪಂ.ಅಧ್ಯಕ್ಷೆ ತೆಕ್ಕಡೆ ಶೋಭಾ ಮೋಹನ್, ಪ್ರಮುಖರಾದ ರಾಬಿನ್ ದೇವಯ್ಯ, ಅಧಿಕಾರಿಗಳು ಮತ್ತು ಸ್ಥಳೀಯ ಮುಖಂಡರು ಇದ್ದರು.
ಮಡಿಕೇರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಲಮುರಿ-ಹೊದವಾಡ ಶಾಲೆ ಮಾರ್ಗದ ಹೊದ್ದೂರು ರಸ್ತೆ ಅಭಿವೃದ್ಧಿ, ಸುಂಟಿಕೊಪ್ಪ ಅಯ್ಯಪ್ಪ ದೇವಸ್ಥಾನದಿಂದ ಕಾನ್‌ಬೈಲು-ಬೈಚನಹಳ್ಳಿ- ನಾಕೂರು ಶಿರಂಗಾಲ ಮಾರ್ಗ ರಸ್ತೆ, ಅಂದಗೋವೆ-ಮೆಟ್ನಳ್ಳ-ಕಂಬಿಬಾಣೆ ರಸ್ತೆ, ಕರ್ಕಳ್ಳಿಯಿಂದ ಎಸ್‌ಎಚ್ ರಸ್ತೆ-ಕುಶಾಲನಗರ ಮಾರ್ಗದ ರಸ್ತೆ, ಸುಂಟಿಯಿಂದ-ಬಸವನಕೊಪ್ಪ-ಶಾಂತವೇರಿ-ಗೋಂದಳ್ಳಿ ಮಾರ್ಗದ ರಸ್ತೆ, ಒಂದನೇ ಕೂಡ್ಲೂರಿನಿಂದ ಹಂಡ್ಲಿ ಗ್ರಾಮದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಸಂಸದರು ಮತ್ತು ಶಾಸಕರು ಚಾಲನೆ ನೀಡಿದರು.
ಪ್ರತೀ ತಾಲೂಕಿನಲ್ಲಿ ಐದು ಕಾಮಗಾರಿ : ಬಲಮುರಿಯಲ್ಲಿ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಸಂಸದ ಪ್ರತಾಪ್ ಸಿಂಹ ಅವರು, ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ಪ್ರತೀ ತಾಲೂಕಿನಲ್ಲಿ 5 ಕಡೆಗಳಲ್ಲಿ ರಸ್ತೆ ಕಾಮಗಾರಿ ಕೈಗೊಳ್ಳಲು ಅವಕಾಶವಿದೆ ಎಂದು ತಿಳಿಸಿದರು.
ಕೇಂದ್ರದಿಂದ ಶೇ.60 ರಷ್ಟು ಮತ್ತು ರಾಜ್ಯದಿಂದ ಶೇ.40 ರಷ್ಟು ಸಂಯುಕ್ತವಾಗಿ ರಸ್ತೆ ಕಾಮಗಾರಿಗೆ ಹಣ ವಿನಿಯೋಗಿಸಲಾಗುತ್ತದೆ. ಕಾಮಗಾರಿ ನಂತರ ಐದು ವರ್ಷದವರೆಗೆ ರಸ್ತೆ ಕಾಮಗಾರಿಯನ್ನು ಗುತ್ತಿಗೆದಾರರು ನಿರ್ವಹಿಸುತ್ತಾರೆ. ಉತ್ತಮ ಹಾಗೂ ಗುಣಮಟ್ಟದ ರಸ್ತೆ ನಿರ್ಮಾಣ ಮಾಡಲಾಗುತ್ತದೆ ಎಂದು ಅವರು ಹೇಳಿದರು.
ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಅವರು ಮಾತನಾಡಿ, ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ 31 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಬಲಮುರಿ, ಸುಂಟಿಕೊಪ್ಪ, ಅಂದಗೋವೆ, ಕರ್ಕಳ್ಳಿ, ಸುಂಟಿಯಿಂದ ಗೋಂದಳ್ಳಿ ಹಾಗೂ 1ನೇ ಕೂಡ್ಲೂರು ಹಂಡ್ಲಿ ಮಾರ್ಗದ ರಸ್ತೆ ಕಾಮಗಾರಿಗೆ ಚಾಲನೆ ನೀಡಲಾಗುತ್ತದೆ ಎಂದು ಳಿಸಿದರು.
ಗುಣಮಟ್ಟದ ರಸ್ತೆ ನಿರ್ಮಾಣಕ್ಕೆ ಸಾರ್ವಜನಿಕರು ಸಹಕರಿಸಬೇಕಿದೆ. ಆ ನಿಟ್ಟಿನಲ್ಲಿ ರಸ್ತೆಯ ಎರಡು ಬದಿ ತಲಾ 16 ಅಡಿ ಜಾಗ ಬಿಟ್ಟು ಕೊಡಬೇಕಿದೆ ಎಂದು ಶಾಸಕರು ಕೋರಿದರು.
ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನಾ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಕೆ.ಟಿ.ಪ್ರಭು, ಸಹಾಯಕ ಅಭಿಯಂತರ ಪಿ.ಬಿ.ಪೂವಯ್ಯ, ಅಶೋಕ್ ರೆಡ್ಡಿ ಇತರರು ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss