Tuesday, June 28, 2022

Latest Posts

ಪ್ರಧಾನಿ ಮೋದಿಯವರಿಂದ ಗ್ರಾಮಗಳ ಅಭಿವೃದ್ಧಿ, ದೇಶದ ಭದ್ರತೆ ಸಾಕಾರ: ಸಚಿವೆ ಶಶಿಕಲಾ ಜೊಲ್ಲೆ

ಹೊಸ ದಿಗಂತ ವರದಿ, ಹಾವೇರಿ:

ನರೇಂದ್ರ ಮೋದಿ ಅವರು ಪ್ರಧಾನಿ ಆದ ಕೇವಲ ಆರು ವರ್ಷಗಳಲ್ಲಿ ಗ್ರಾಮಗಳಿಗೆ ಅನೇಕ ಸೌಲಭ್ಯಗಳನ್ನು ನೀಡುವಲ್ಲಿ ಹಾಗೂ ದೇಶದ ಭದ್ರತೆಯಲ್ಲಿ ಯಾವುದೇ ರಾಜಿಯನ್ನು ಮಾಡಿಕೊಳ್ಳದೇ ಮುನ್ನಡೆಯುತ್ತಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.
ಜಿಲ್ಲೆಯ ಹಿರೇಕೆರೂರು ಪಟ್ಟಣದ ಗುರುಭವನದಲ್ಲಿ ಸೋಮವಾರ ಆಯೋಜಿಸಿದ್ದ ಹಿರೇಕೆರೂರು, ರಾಣೆಬೇನ್ನೂರು ಹಾಗೂ ಬ್ಯಾಡಗಿ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯ ಗ್ರಾಮ ಸ್ವರಾಜ್ಯ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು. ಕಾಂಗ್ರೆಸ್ ಆರು ದಶಕಗಳಿಗೂ ಹೆಚ್ಚು ಕಾಲ ಆಳ್ವಿಕೆ ಮಾಡಿದರೂ ಗ್ರಾಮೀಣ ಭಾಗಗಳಲ್ಲಿನ ಕನಿಷ್ಟ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಸಾಧ್ಯವಾಗಲಿಲ್ಲಿ. ದೇಶದ ಅನೇಕ ಹಳ್ಳಿಗಳಿಗೆ ವಿದ್ಯುತ್ ನೀಡದೇ ಕತ್ತಲಲ್ಲಿ ಇಟ್ಟಿತ್ತು. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರು ಹಳ್ಳಿಗಳ ಅಭಿವೃದ್ಧಿ ಹೆಚ್ಚಿನ ಆದ್ಯೆತ ನೀಡುವುದರೊಂದಿಗೆ ಕತ್ತಲಲ್ಲಿದ್ದ ಎಲ್ಲ ಹಳ್ಳಿಗಳಿಗೆ ವಿದ್ಯುತ್ ಕಲ್ಪಿಸುವ ಮೂಲಕ ಅವರನ್ನು ಕತ್ತಲೆಯಿಂದ ಬೆಳಕಿನೆಡೆಗೆ ಕರೆತಂದಿರುವರು ಎಂದರು.
ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರಕಾರ ವಿರುವುದರಿಂದ ಗ್ರಾಮಗಳ ಅಭಿವೃದ್ಧಿಗೆ ಬೇಕಾದ ಅನುದಾನವನ್ನು ಪಡೆದುಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ ಈ ಹಿನ್ನಲೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆ ಮಾಡುವ ಕೆಲಸವನ್ನು ಪ್ರತಿಯೊಬ್ಬ ಕಾರ್ಯಕರ್ತರು ಮಾಡಬೇಕಾಗಿದೆ ಎಂದು ಹೇಳಿದರು.
ಶತಮಾನಗಳಷ್ಟು ಕಾಲ ಭಾರತ ವಿದೇಶಿಗರ ಆಳ್ವಿಕೆ ಮತ್ತು ದಬ್ಬಾಳಿಕೆಗೆ ಒಳಗಾಗಿದ್ದರೂ ಸಹ ಭಾರತಾಂಬೆಯ ಮಕ್ಕಳು ಮಾತ್ರ ಬೇರೆ ದೇಶದವರ ಸಂಸ್ಕೃತಿಯನ್ನು ತಮ್ಮ ಜೀವನದಲ್ಲಿ ಅಳವಡಿಕೊಳ್ಳದಿರುವುದಕ್ಕೆ ಪ್ರಮುಖ ಕಾರಣ ಇಲ್ಲಿನ ಸಂಸ್ಕೃತಿಯ ಬಗ್ಗೆ ಭಾರತಿಯ ಮಹಿಳೆಯರಲ್ಲಿರುವ ಅಚಲವಾದ ನಂಬಿಕೆ ಎಂದರು.
ಒಂದು ದೇಶದವರು ಇನ್ನೊಂದು ದೇಶದ ಮೇಲೆ ಆಕ್ರಮಣ ಮಾಡಿ, ಅಲ್ಲಿ ಅವರು ಪ್ರಭುತ್ವವನ್ನು ಸಾಧಿಸಿದ ಮೇಲೆ ಆಕ್ರಮಿಸಿದ ನೆಲದಲ್ಲಿಯೂ ಅವರು ತಮ್ಮ ದೇಶದ ಸಂಸ್ಕೃತಿಯ ಛಾಪನ್ನು ಮೂಡಿಸುತ್ತಿದ್ದರು. ಆದರೆ ಭಾರತದಲ್ಲಿ ಮಾತ್ರ ಅಂತಹ ಸಂಸ್ಕೃತಿಯ ಆಕ್ರಮಣಕ್ಕೆ ಒಳಗಾಗಲೇ ಇಲ್ಲ. ಆದ್ದರಿಂದ ಇಂದಿನವರೆಗೂ ಭಾರತದಲ್ಲಿ ಭಾರತೀಯ ಪುರಾತನ ಸಂಸ್ಕೃತಿ ನಶಿಸದೇ ಹಾಗೇ ಉಳಿಯುವದಕ್ಕೆ ಕಾರಣವಾಗಿದೆ ಎಂದರು.
ಸಚಿವರಾದ ಬಸವರಾಜ ಬೊಮ್ಮಾಯಿ, ಬಿ.ಸಿ.ಪಾಟೀಲ, ಸಂಸದ ಶಿವಕುಮಾರ ಉದಾಸಿ, ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ.ಬಣಕಾರ, ಶಾಸಕರಾದ ವಿರುಪಾಕ್ಷಪ್ಪ ಬಳ್ಳಾರಿ, ಅರುಣಕುಮಾರ ಗುತ್ತೂರ, ವಿಪ ಸದಸ್ಯ ಆರ್.ಶಂಕರ ಸೇರಿದಂತೆ ಅನೇಕರು ಮಾತನಾಡಿದರು.
ವೇದಿಕೆಯಲ್ಲಿ ರಾಜ್ಯ ಬಿಜೆಪಿ ಉಪಾಧ್ಯಕ್ಷ ಎಂ.ರಾಜೆಂದ್ರ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ಯುವ ಮೊರ್ಚಾ ಅಧ್ಯಕ್ಷ ಸಂದೀಪ್, ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದರಾಜ ಕಲಕೋಟಿ, ಮಾಜಿ ಶಾಸಕ ಶಿವರಾಜ ಸಜ್ಜನರ, ಸೇರಿದಂತೆ ಮತ್ತಿತ್ತರರು ಪಾಲ್ಗೊಂಡಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss