ಹೊಸ ದಿಗಂತ ಆನ್ ಲೈನ್ ಡೆಸ್ಕ್:
ಕೋವಿಡ್-೧೯ರ ನಿರ್ವಹಣೆ ಹಾಗೂ ಈಗ ಭಾರತ ವಿಶ್ವದಲ್ಲೇ ವಿಶ್ವಾಸಾರ್ಹ ಕೋವಿಡ್ ಲಸಿಕೆಯನ್ನು ಶೋಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ವಿಶ್ವದ ಮೆಚ್ಚುಗೆ ಗಳಿಸಿರುವ ನಡುವೆಯೇ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಹೊಸ ಆರೋಪ ಹೊರಿಸಿದ್ದಾರೆ.
ಕೋವಿಡ್-೧೯ರ ವೇಳೆ ಪ್ರಧಾನಿ ಮೋದಿ ಜನರ ಜೊತೆಗೆ ನಿಲ್ಲಲಿಲ್ಲ ಎಂದು ದೂಷಿಸಿರುವ ರಾಹುಲ್, ಕೇಂದ್ರ ಸರಕಾರ ಈಗ ರೈತರ ನಾಶಕ್ಕೆ ಯತ್ನಿಸುತ್ತಿದೆ ಎಂದಾರೋಪಿಸಿದ್ದಾರೆ.
ತಮಿಳ್ನಾಡಿನ ಅವನಿಯಾಪುರಂನಲ್ಲಿ ಜಲ್ಲಿಕಟ್ಟು ಕಾರ್ಯಕ್ರಮವನ್ನು ವೀಕ್ಷಿಸಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ರಾಹುಲ್, ಕೇಂದ್ರ ಸರಕಾರ ಬಲವಂತವಾಗಿ ಮೂರು ಕೃಷಿ ಕಾನೂನುಗಳನ್ನು ಹಿಂಪಡೆಯುವಂತಾಗಬೇಕು.ನಾನು ರೈತರ ಜೊತೆಗಿದ್ದೇನೆ ಎಂದು ಹೇಳಿಕೊಂಡರು.
ಕೇಂದ್ರವು ರೈತರನ್ನು ನಿರ್ಲಕ್ಷಿಸುತ್ತಿದೆಯೇ ಎಂದು ಪತ್ರಕರ್ತನೊಬ್ಬ ಕೇಳಿದಾಗ , ನಿರ್ಲಕ್ಷಿಸುತ್ತಿರುವುದಲ್ಲ, ರೈತರ ನಾಶಕ್ಕೆ ಯತ್ನಿಸುತ್ತಿದೆ ಎಂದು ರಾಹುಲ್ ಹೇಳಿದರು.ಜೊತೆಗೆ ಚೀನೀ ಪಡೆಗಳು ಭಾರತದ ಗಡಿಯೊಳಕ್ಕೆ ಬಂದ ಬಗ್ಗೆ ಪ್ರಧಾನಿ ಮೋದಿ ವಿವರಣೆ ನೀಡಬೇಕೆಂದರು.
ಕುತ್ಸಿತ ಆರೋಪ:
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇಂದ್ರ ಸರಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ವಿಷಯುಕ್ತ ಮಾತುಗಳ ಮೂಲಕ ಕುತ್ಸಿತ ಆರೋಪ ಮಾಡುತ್ತಿದ್ದು, ದೇಶದಲ್ಲಿ ಅರಾಜಕತೆ ಸೃಷ್ಟಿಸಲು ಯತ್ನಿಸುತ್ತಿದ್ದಾರೆ. ಆದರೆ ದೇಶದ ಜನತೆ ಕಾಂಗ್ರೆಸ್ನ ಕುತ್ಸಿತ ಉದ್ದೇಶವನ್ನು ಅರ್ಥ ಮಾಡಿಕೊಂಡಿದ್ದರಿಂದಲೇ ದೇಶದೆಲ್ಲೆಡೆ ಕಾಂಗ್ರೆಸನ್ನು ತಿರಸ್ಕರಿಸುತ್ತಲೇ ಇದ್ದಾರೆ ಎಂಬುದಾಗಿ ಬಿಜೆಪಿ ಪ್ರತಿಕ್ರಿಯಿಸಿದೆ.