Thursday, August 11, 2022

Latest Posts

ಪ್ರಧಾನಿ ಮೋದಿ ಹುಟ್ಟುಹಬ್ಬ;ವಿಶಿಷ್ಟ ಸೇವಾ ಕಾರ್ಯಕ್ರಮಗಳ ಮೂಲಕ ಆಚರಿಸುತ್ತಿರುವುದು ಅರ್ಥಪೂರ್ಣ: ತಿಪ್ಪಾರೆಡ್ಡಿ

ಚಿತ್ರದುರ್ಗ: ಪ್ರಧಾನಿ ನರೇಂದ್ರ ಮೋದಿ ಅವರ ೭೦ನೇ ಹುಟ್ಟು ಹಬ್ಬವನ್ನು 70 ವಿಶಿಷ್ಟ ಸೇವಾ ಕಾರ್ಯಕ್ರಮಗಳ ಮೂಲಕ ಆಚರಿಸುತ್ತಿರುವುದು ಅರ್ಥಪೂರ್ಣವಾಗಿದೆ ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಅಭಿಪ್ರಾಯಪಟ್ಟರು.
ಬಿಜೆಪಿ ರೈತ ಮೋರ್ಚಾ ಹಾಗೂ ಗ್ರಾಮಾಂತರ ಮಂಡಲದ ವತಿಯಿಂದ ಪ್ರಧಾನಿ ನರೇಂದ್ರ ಮೋದಿ ಅವರ ೭೦ನೇ ಜನ್ಮದಿನದ ಅಂಗವಾಗಿ ನಗರದ ಹೊರವಲಯದ ಕಾತ್ರಾಳ್ ಬಳಿಯ ಗೋಶಾಲೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಗೋಮಾತ ಪೂಜೆ ಹಾಗೂ ೭೦ ಮಂದಿ ಪ್ರಗತಿಪರ ರೈತರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟು ಹಬ್ಬದ ಅಂಗವಾಗಿ ದೇಶದ ಉದ್ದಗಲಕ್ಕೂ ಬಿಜೆಪಿ ವತಿಯಿಂದ ವಿವಿಧ ರೀತಿಯ ಸೇವಾ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ ಎಂದರು.
ಪ್ರಧಾನಿಗಳಾದವರಲ್ಲಿ ಕೆಲವರು ವಿದೇಶಗಳಿಗೆ ತೆರಳಿ ಅದ್ದೂರಿಯಾಗಿ ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳುತ್ತಾರೆ. ಆದರೆ ಪ್ರಧಾನಿ ನರೇಂದ್ರ ಮೋದಿಯವರು ಅವರ ತಾಯಿಯ ಆಶೀರ್ವಾದ ಪಡೆಯುತ್ತಾರೆ. ಅವರ ತಾಯಿ ಆಶೀರ್ವಾದ ಮಾಡುವ ಜೊತೆಗೆ ತಾವು ಕೂಡಿಟ್ಟ ಹಣವನ್ನು ಮೋದಿಯವರಿಗೆ ನೀಡಿ ದೇಶ ಸೇವೆಗೆ ವಿನಿಯೋಗಿಸುವಂತೆ ಸೂಚಿಸುತ್ತಾರೆ. ಅಲ್ಲದೇ ಮೋದಿಯವರು ಮುಖ್ಯಮಂತ್ರಿ, ಪ್ರಧಾನ ಮಂತ್ರಿ ಆದ ಸಂದರ್ಭದಲ್ಲಿ ಬಂದಿದ್ದ ಅನೇಕ ಉಡುಗೊರೆಗಳನ್ನು ಹರಾಜು ಮಾಡಿ ಅದರಲ್ಲಿ ಬಂದ ಹಣವನ್ನು ಬಡವರ ಸೇವೆಗೆ ವಿನಿಯೋಗಿಸುತ್ತಿದ್ದಾರೆ ಎಂದು ಹೇಳಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರುಳಿ ಮಾತನಾಡಿ, ಪ್ರತಿ ಕ್ಷೇತ್ರದ ಅಭಿವೃದ್ಧಿಯಾದಲ್ಲಿ ದೇಶದ ಅಭಿವೃದ್ಧಿ ಆಗುತ್ತದೆ ಎಂದು ನಂಬಿರುವ ಪ್ರಧಾನಿ ಮೋದಿ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿದ್ದಾರೆ. ಅದರಲ್ಲೂ ಕೃಷಿ ಕ್ಷೇತ್ರದ ಅಭಿವೃದ್ಧಿಗೆ ವಿಶೇಷ ಒತ್ತು ನೀಡಿದ್ದಾರೆ. ಇದಕ್ಕಾಗಿ ಅನೇಖ ರೈತಪರ ಯೋಜನೆಗಳನ್ನು ಜಾರಿ ಮಾಡಿದ್ದಾರೆ. ಅಂದು ಆ ನರೇಂದ್ರ ಚಿಕಾಗೋ ನಗರದಲ್ಲಿ ಭಾರತದ ಸಂಸ್ಕೃತಿಯನ್ನು ಎತ್ತಿಹಿಡಿದರು. ಇಂದು ಪ್ರಧಾನಿ ನರೇಂದ್ರ ಮೋದಿ ಭಾರತದ ಕೀರ್ತಿಯನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ದಿದ್ದಾರೆ ಎಂದರು.
ವಿಭಾಗೀಯ ಪ್ರಭಾರಿ ಜಿ.ಎಂ.ಸುರೇಶ್ ಮಾತನಾಡಿ, ಬೃಹತ್ ಗಾತ್ರದ ಕೇಕ್ ಕತ್ತರಿಸಿ, ಸಿಹಿ ಹಂಚಿ ಸಂಭ್ರಮಿಸುವುದೇ ಹುಟ್ಟು ಹಬ್ಬವಲ್ಲ. ಸೇವೆಯ ಮೂಲಕ ಸಂಘಟನೆಯ ಮೂಲಕ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಹುಟ್ಟುಹಬ್ಬ ಆಚರಿಸಿಕೊಳ್ಳುವುದು ವಿಶೇಷ. ಇಂತಹ ಕೆಲವನ್ನು ಬಿಜೆಪಿ ಇಂದು ಮಾಡುತ್ತಿದೆ. ದುರ್ಬಲರು, ಬಡವರು, ರೈತರು, ವಿಶಿಷ್ಟ ಚೇತನರು ಸೇರಿದಂತೆ ವಿವಿಧ ವರ್ಗಗಳ ಜನರ ಸೇವೆ ಮಾಡುವ ಮೂಲಕ ಹುಟ್ಟುಹಬ್ಬ ಆಚರಣೆ ಮಾಡುತ್ತಿರುವುದು ಸ್ತುತ್ಯಾರ್ಹ ಎಂದು ನುಡಿದರು.
ತುಮಕೂರು ಸಂಘಟನಾ ಉಸ್ತುವಾರಿ ಟಿ.ಜಿ.ನರೇಂದ್ರನಾಥ್ ಮಾತನಾಡಿದರು.
ರಾಜ್ಯ ಓಬಿಸಿ ಉಪಾಧ್ಯಕ್ಷ ಸಿದ್ದೇಶ್ ಯಾದವ್ ಮಾತನಾಡಿದರು. ರೈತ ಮೋರ್ಚಾ ಜಿಲ್ಲಾಧ್ಯಕ್ಷ ವೆಂಕಟೇಶ್ ಯಾದವ್ ಅಧ್ಯಕ್ಷತೆ ವಹಿಸಿದ್ದರು. ಗ್ರಾಮಾಂತರ ಅಧ್ಯಕ್ಷ ನಂದಿ ನಾಗರಾಜ್, ಕಲ್ಲೇಶಯ್ಯ, ತಿಪ್ಪೇಸ್ವಾಮಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು. ಕಾರ್ಯಕ್ರಮದಲ್ಲಿ ಹಾಜರಿದ್ದ ನೂರಾರು ಸಂಖ್ಯೆಯ ರೈತರನ್ನು ಸನ್ಮಾನಿಸಿ ಗೌರವಿಸಲಾಯಿತು. ಇದಕ್ಕೂ ಮೊದಲು ಗೋವುಗಳಿಗೆ ಪೂಜೆ ಸಲ್ಲಿಸಲಾಯಿತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss