Thursday, August 18, 2022

Latest Posts

ಪ್ರಧಾನಿ ಮೋದಿ 70ನೇ ಹುಟ್ಟುಹಬ್ಬ: ನೀಲಕಂಠೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ

ಚಿತ್ರದುರ್ಗ: ಪ್ರಧಾನಿ ನರೇಂದ್ರ ಮೋದಿ ಅವರ ೭೦ನೇ ಹುಟ್ಟು ಹಬ್ಬದ ಅಂಗವಾಗಿ ಬಿಜೆಪಿ ಜಿಲ್ಲಾ ಘಟಕದ ವತಿಯಿಂದ ನಗರದ ನೀಲಕಂಠೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಸಹಸ್ರನಾಮ ಪಠಣ, ರುದ್ರಾಭಿಷೇಕ ಸೇರಿದಂತೆ ವಿವಿಧ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಲಾಯಿತು. ಆ ಮೂಲಕ ಪ್ರಧಾನಿ ಮೋದಿ ಅವರಿಗೆ ಆಯುರಾರೋಗ್ಯ ವೃದ್ಧಿಸುವಂತೆ ಪ್ರಾರ್ಥನೆ ಸಲ್ಲಿಸಲಾಯಿತು. ಬಳಿಕ ಬಿಜೆಪಿ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ನೆರೆದಿದ್ದ ಜನರಿಗೆ ಸಿಹಿ ಹಂಚಿ ಸಂಭ್ರಮಿಸಿದರು.
ಬಳಿಕ ಕಬೀರಾನಂದಾಶ್ರಮದ ವೃದ್ಧಾಶ್ರಮಕ್ಕೆ ತೆರಳಿ ಅಲ್ಲಿನ ವೃದ್ಧರಿಗೆ ಹಣ್ಣುಗಳನ್ನು ವಿತರಿಸಲಾಯಿತು. ನಂತರ ನಗರದ ಸರ್ಕಾರಿ (ಕೋಟೆ) ಪ್ರೌಢಶಾಲೆ ಬಳಿಯ ಆವರಣದಲ್ಲಿ ಸಸಿಗಳನ್ನು ನೆಡಲಾಯಿತು. ಈ ಎಲ್ಲ ಕಾರ್ಯಕ್ರಮದಲ್ಲಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ, ಜಿಲ್ಲಾಧ್ಯಕ್ಷ ಮುರುಳಿ, ವಿಭಾಗೀಯ ಪ್ರಭಾರಿ ಜಿ.ಎಂ.ಸುರೇಶ್, ಓಬಿಸಿ ರಾಜ್ಯ ಉಪಾಧ್ಯಕ್ಷ ಸಿದ್ದೇಶ್ ಯಾದವ್, ತುಮಕೂರು ಜಿಲ್ಲಾ ಸಂಘಟನಾ ಉಸ್ತುವಾರಿ ಟಿ.ಜಿ.ನರೇಂದ್ರನಾಥ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಟಿ.ಸುರೇಶ್ ಭಾಗವಹಿಸಿದ್ದರು.
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಬದ್ರಿನಾಥ್, ಸದಸ್ಯೆ ಎ.ರೇಖಾ, ರೈತ ಮೋರ್ಚಾ ಜಿಲ್ಲಾಧ್ಯಕ್ಷ ವೆಂಕಟೇಶ್ ಯಾದವ್, ತಿಪ್ಪೇಸ್ವಾಮಿ, ಕಲ್ಲೇಶಯ್ಯ, ಗ್ರಾಮಾಂತರ ಮಂಡಲ ಅಧ್ಯಕ್ಷ ನಂದಿ ನಾಗರಾಜ್, ನಗರ ಘಟಕದ ಅಧ್ಯಕ್ಷ ಶಶಿಧರ್, ನಗರಸಭೆ ಸದಸ್ಯರಾದ ಹರೀಶ್, ಸುರೇಶ್, ಮುಖಂಡ ಶಿವಣ್ಣಾಚಾರ್, ವಕ್ತಾರರಾದ ನಾಗರಾಜ್ ಬೇದ್ರೆ, ದಗ್ಗೆ ಶಿವಪ್ರಕಾಶ್, ಶಾಂತಮ್ಮ, ಚಂದ್ರಿಕಾ ಲೋಕನಾಥ್, ಬಸಮ್ಮ ಸೇರಿದಂತೆ ಬಿಜೆಪಿ ಪಕ್ಷದ ವಿವಿಧ ಹಂತದ ಪದಾಧಿಕಾರಿಗಳು ಭಾಗವಹಿಸಿದ್ದರು.
ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಮಾತನಾಡಿ, ಇಂದು ಪ್ರಧಾನಿ ನರೇಂದ್ರ ಮೋದಿ ಅವರ ೭೦ನೇ ಹುಟ್ಟು ಹಬ್ಬದ ಕಾರ್ಯಕ್ರಮ. ಇದನ್ನು ಅರ್ಥಪೂರ್ಣವಾಗಿ ಆಚರಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿನಡ್ಡಾ ಅವರ ಆದೇಶದ ಮೇರೆಗೆ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಸೇವೆಯೇ ಸಂಘಟನೆ ಎಂಬುದು ಪ್ರಧಾನಿ ನರೇಂದ್ರ ಮೋದಿಯವರ ಧ್ಯೇಯವಾಗಿದೆ. ಹಾಗಾಗಿ ಅವರ ಹುಟ್ಟುಹಬ್ಬವನ್ನು ಪಕ್ಷದ ಕಾರ್ಯಕರ್ತರು ಜನರ ಸೇವೆ ಮಾಡುವ ಮೂಲಕ ಆಚರಿಸುತ್ತಿರುವುದು ವಿಶೇಷ ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರ ಹೆಸರಿನಲ್ಲಿ ನೀಲಕಂಠೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಗಿದೆ. ನಂತರ ವೃದ್ಧಾಶ್ರಮದ ನಿವಾಸಿಗಳಿಗೆ ಹಣ್ಣು ವಿತರಿಸಲಾಗಿದೆ. ಅದರಂತೆ ಜನರಲ್ಲಿ ಪರಿಸರ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಇಲ್ಲಿ ಗಿಡಗಳನ್ನು ನೆಡಲಾಗುತ್ತಿದೆ. ನರೇಂದ್ರ ಮೋದಿ ಅವರ ಹುಟ್ಟು ಹಬ್ಬವನ್ನು ಆಡಂಬರದಿಂದ ಆಚರಿಸುವ ಬದಲು ಇಂದಿನಿಂದ ಗಾಂಧಿ ಜಯಂತಿವರೆಗೆ ಸೇವಾ ಸಪ್ತಾಹ ಆಚರಿಸಲಾಗುತ್ತದೆ. ಈ ಅವಧಿಯಲ್ಲಿ ಅನೇಕ ಸೇವಾ ಕಾರ್ಯಕ್ರಮಗಳನ್ನು ನಡೆಸಲಾಗುವುದು ಎಂದು ತಿಳಿಸಿದರು.
ಇದರ ಜೊತೆಯಲ್ಲಿ ಜನಸಂಘ ಅಸ್ಥಿತ್ವಕ್ಕೆ ಬರಲು ಕಾರಣರಾದ ಪಂಡಿತ್ ದೀನ್ ದಯಾಳ್ ಉಪಾಧ್ಯ ಅವರ ಹುಟ್ಟು ಹಬ್ಬವನ್ನೂ ಆಚರಿಸಲಾಗುವುದು. ಅಂತ್ಯೋದಯ ಎಂಬ ಅವರ ಪರಿಕಲ್ಪನೆಯಂತೆ ಬಡವರು, ದುರ್ಬಲರು, ಮಹಿಳೆಯರು, ವಿಶಿಷ್ಟಚೇತನರು, ಸೇರಿದಂತೆ ಅನೇಕ ಜನರಿಗೆ ನೆರವು ನೀಡುವ ಕಾರ್ಯಕ್ರಮ ನಡೆಸಲಾಗುವುದು. ಬೂತ್ ಮಟ್ಟದಿಂದ ಹಿಡಿದು ಹಳ್ಳಿಗಳವರೆಗೆ ಸ್ವಚ್ಛತಾ ಕಾರ್ಯಕ್ರಮ, ರಕ್ತದಾನ ಶಿಬಿರ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ನಡೆಸಲಾಗುವುದು ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!