ಚಿತ್ರದುರ್ಗ: ಭಾರತವನ್ನು ವಿಶ್ವಕ್ಕೆ ಪರಿಚಯಿಸಿದ ದೇಶದ ಪ್ರಧಾನಿ ನರೇಂದ್ರ ಮೋದಿಯವರ ೭೦ ನೇ ಹುಟ್ಟುಹಬ್ಬದ ಅಂಗವಾಗಿ ಸೆ.17ರಿಂದ ಅ.2 ಗಾಂಧಿ ಜಯಂತಿಯವರೆಗೆ ಹದಿನಾರು ದಿನಗಳ ಕಾಲ ಜಿಲ್ಲೆಯಾದ್ಯಂತ ಸೇವಾ ಸಪ್ತಾಹ ಆಚರಿಸಲಾಗುವುದೆಂದು ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರಳಿ ತಿಳಿಸಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಪ್ರತಿ ವಿಧಾನಸಭಾ ಕ್ಷೇತ್ರದ ಎಲ್ಲಾ ಮಂಡಲಗಳಲ್ಲಿ ಸಸಿ ನೆಡುವುದು, ಸ್ವಚ್ಚತೆ, ರಕ್ತದಾನ, ಎಪ್ಪತ್ತು ಬಡ ಪುರುಷ ಮತ್ತು ಮಹಿಳೆಯರಿಗೆ ಉಚಿತ ಕನ್ನಡಕಗಳನ್ನು ನೀಡುವ ಮೂಲಕ ನರೇಂದ್ರಮೋದಿರವರ ಹುಟ್ಟು ಹಬ್ಬವನ್ನು ವಿಭಿನ್ನವಾಗಿ ಆಚರಿಸಲಾಗುವುದು. ಜಿಲ್ಲೆಯ ಆರು ತಾಲ್ಲೂಕಿನಲ್ಲಿರುವ ಸರ್ಕಾರಿ ಆಸ್ಪತ್ರೆಯಲ್ಲಿ ಬಡ ರೋಗಿಗಳಿಗೆ ಹಣ್ಣು, ಬ್ರೆಡ್ಗಳನ್ನು ವಿತರಿಸುವುದರ ಜೊತೆ ಕೋವಿಡ್ನಿಂದ ಗುಣಮುಖರಾದವರಿಂದ ಪ್ಲಾಸ್ಮ ಧಾನಕ್ಕೂ ತಯಾರಿ ನಡೆಸುತ್ತಿದ್ದು, ಈ ಸಂಬಂಧ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಜೊತೆ ಸಂಪರ್ಕದಲ್ಲಿರುವುದಾಗಿ ಹೇಳಿದರು.
ಒಂಬತ್ತು ಮಂಡಲಗಳಲ್ಲಿ ಪಕ್ಷದ ಕಾರ್ಯಕರ್ತರು ರಕ್ತದಾನ ಮಾಡಲಿದ್ದಾರೆ. ಪ್ರತಿ ಬೂತ್ನಲ್ಲಿ ಸಸಿ ನೆಡುವುದರ ಜೊತೆ ಆಸ್ಪತ್ರೆ, ಶಾಲೆಯನ್ನು ಸ್ವಚ್ಚಗೊಳಿಸಲಾಗುವುದು. ಒನ್ ಟೈಂ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸುವ ಕುರಿತು ಜನತೆಯಲ್ಲಿ ಜಾಗೃತಿ ಮೂಡಿಸುವ ಮೂಲಕ ಪರಿಸರ ಸಂರಕ್ಷಣೆಗೂ ಹೆಚ್ಚಿನ ಒತ್ತು ನೀಡಲಾಗುವುದು. ಇದೇ ತಿಂಗಳ ೨೫ ರಂದು ಪಂಡಿತ್ ದೀನ್ದಯಾಳ್ರವರ ಹುಟ್ಟುಹಬ್ಬವನ್ನು ವಿಭಿನ್ನವಾಗಿ ಆಚರಿಸಿ ವೆಬಿನಾರ್ ಮೂಲಕ ಅವರ ತತ್ವ ಸಿದ್ದಾಂತಗಳನ್ನು ಇಂದಿನ ಪೀಳಿಗೆಗೆ ಪರಿಚಯಿಸಲಾಗುವುದು ಎಂದರು.
ಸೆ.17 ರಂದು ಬೆಳಿಗ್ಗೆ 9 ಕ್ಕೆ ನೀಲಕಂಠೇಶ್ವರಿಸ್ವಾಮಿ ದೇವಸ್ಥಾನದಲ್ಲಿ ಸಹಸ್ರನಾಮ ಪಠಣ, ರುದ್ರಾಭಿಷೇಕ, 9.30 ಕ್ಕೆ ಕಬೀರಾನಂದಾಶ್ರಮದಲ್ಲಿನ ಅನಾಥರಿಗೆ ಹಣ್ಣುಗಳನ್ನು ವಿತರಿಸಲಾಗುವುದು, 10.30 ಕ್ಕೆ ಸರ್ಕಾರಿ ಕೋಟೆ ಪ್ರೌಢಶಾಲೆ ಆವರಣದಲ್ಲಿ ಸಸಿಗಳನ್ನು ನೆಡಲಾಗುವುದು. ಮಧ್ಯಾಹ್ನ 12.30 ಕ್ಕೆ ರೈತ ಮೋರ್ಚ ಹಾಗೂ ಗ್ರಾಮಾಂತರ ಮಂಡಲದಿಂದ ಕಾತ್ರಾಳು ಬಳಿಯಿರುವ ಗೋಶಾಲೆಯಲ್ಲಿ ಎಪ್ಪತ್ತು ಗೋವುಗಳಿಗೆ ಪೂಜೆ ಸಲ್ಲಿಸಿ ಎಪ್ಪತ್ತು ಪ್ರಗತಿಪರ ರೈತರನ್ನು ಸನ್ಮಾನಿಸಲಾಗುವುದು. ಗ್ರಾ.ಪಂ. ಸಹಾಯಕರು, ಜಾಡಮಾಡಲಿಗಳ ಸೇವೆಯನ್ನು ಗುರುತಿಸಿ ಸನ್ಮಾನಿಸುವ ಕಾರ್ಯವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸೇವಾ ಸಪ್ತಾಹದ ಅವಧಿಯಲ್ಲಿ ನಡೆಯುವ ವಿಭಿನ್ನ ಕಾರ್ಯಕ್ರಮಗಳ ಕುರಿತು ಎ.ಮುರಳಿ ಮಾಹಿತಿ ನೀಡಿದರು.
ಮೊಳಕಾಲ್ಮುರು ವಿಧಾನಸಭಾ ಕ್ಷೇತ್ರದ 35 ಕಡೆ ಏಳು ನೂರು ಗಿಡಗಳನ್ನು ನೆಡುವ ಗುರಿಯಿದೆ. ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಎಪ್ಪತ್ತು ಕಾರ್ಯಕರ್ತರು ಪ್ರಧಾನಿ ಮೋದಿರವರ ಹುಟ್ಟುಹಬ್ಬದ ಪ್ರಯುಕ್ತ ರಕ್ತದಾನ ಮಾಡುವರು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ, ವಿಭಾಗೀಯ ಪ್ರಭಾರಿ ಜಿ.ಎಂ.ಸುರೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಸಿದ್ದಾಪುರ, ರೈತ ಮೋರ್ಚ ಜಿಲ್ಲಾಧ್ಯಕ್ಷ ವೆಂಕಟೇಶ್ ಯಾದವ್, ನಗರಾಧ್ಯಕ್ಷ ಜೆ.ಶಶಿಧರ್, ಗ್ರಾಮಾಂತರ ಅಧ್ಯಕ್ಷ ನಂದಿ ನಾಗರಾಜ್, ವಕ್ತರರಾದ ನಾಗರಾಜ್ ಬೇದ್ರೆ, ದಗ್ಗೆ ಶಿವಪ್ರಕಾಶ್ ಉಪಸ್ಥಿತರಿದ್ದರು.