Wednesday, August 17, 2022

Latest Posts

ಗೋವಧೆ ನಿಷೇಧ ಪ್ರಬಲ ಕಾಯ್ದೆ ಜಾರಿಗೆ ವಿಹಿಂಪ ಆಗ್ರಹ: ಶಾಸಕರ ಮೂಲಕ ಮುಖ್ಯಮಂತ್ರಿಗೆ ಮನವಿ

ಮಂಗಳೂರು: ರಾಜ್ಯದ ಮುಂದಿನ ವಿಧಾನ ಮಂಡಲದ ಅಧಿವೇಶದಲ್ಲಿ ಪ್ರಬಲವಾದ ಕರ್ನಾಟಕ ಗೋವಧೆ ನಿಷೇಧ ಕಾಯ್ದೆ ಮಂಡಿಸಿ, ಜಾರಿಗೊಳಿಸಬೇಕು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ವಿಶ್ವಹಿಂದು ಪರಿಷತ್ ಮನವಿ ಸಲ್ಲಿಸಿದೆ.
ನಗರದಲ್ಲಿ ಗುರುವಾರ ಶಾಸಕರಾದ ಡಾ. ವೈ. ಭರತ್ ಶೆಟ್ಟಿ ಮತ್ತು ವೇದವ್ಯಾಸ ಕಾಮತ್ ಅವರ ಮೂಲಕ ಸಿಎಂಗೆ ಮನವಿ ಸಲ್ಲಿಸಲಾಯಿತು.
ರಾಜ್ಯದಲ್ಲಿ ಈಗ ಕರ್ನಾಟಕ ಗೋಹತ್ಯೆ ನಿಷೇಧ ಹಾಗೂ ಜಾನುವಾರು ಸಂರಕ್ಷಣಾ ಕಾಯ್ದೆ ೧೯೬೪ ಜಾರಿಯಲ್ಲಿದೆ. ಆದರೆ, ಈ ಕಾಯ್ದೆ ಅತ್ಯಂತ ದುರ್ಬಲವಾಗಿದ್ದು, ನಿರಂತರವಾಗಿ ಅಕ್ರಮ ಗೋಹತ್ಯೆ ಆಗುತ್ತಲೇ ಇರುವುದು ನಮಗೆಲ್ಲರಿಗೂ ದುಃಖ ತರುತ್ತಿದೆ. ಅಕ್ರಮ ಗೋಸಾಗಾಟದಲ್ಲಿ ಗೋವುಗಳಿಗೆ ನೀಡುತ್ತಿರುವ ಹಿಂಸೆ ಅತ್ಯಂತ ಕ್ರೂರವಾಗಿದ್ದು, ಗೋವಿನ ಆಕ್ರಂದನ ರಾಜ್ಯ ಅಭಿವೃದ್ಧಿಯಾಗದಂತೆ ಪ್ರಜೆಗಳ ನೆಮ್ಮದಿ, ಆರೋಗ್ಯ ಹಾಳಾಗುವಂತೆ ಶಾಪಗ್ರಸ್ಥವಾಗಿದೆ.
ನಮಗೆ ದನ ಮತ್ತು ಕರು ಎಷ್ಟು ಪೂಜನೀಯವೋ ಎತ್ತು, ಹೋರಿ, ನಂದಿ, ಅಷ್ಟೇ ಪೂಜನೀಯ. ಈ ಹಿನ್ನೆಲೆಯಲ್ಲಿ ದನ, ಕರು, ಎತ್ತು, ನಂದಿ, ಹೋರಿಗಳ ವಧೆಯನ್ನು ಸಂಪೂರ್ಣವಾಗಿ ನಿಷೇಧಿಸಿ, ಅಕ್ರಮವಾಗಿ ವಧಿಸಿದರೆ ೧೪ ವರ್ಷ ಕಠಿಣ ಶಿಕ್ಷೆ ಹಾಗೂ ೧೦ ಲಕ್ಷ ರೂ. ದಂಡ ವಿಧಿಸಬೇಕು.
ಗೋವಧೆ ನಿಷೇಧ ಪೂರ್ಣವಾಗಿ ಕಾರ್ಯಗತವಾಗಲು ಎಮ್ಮೆ, ಕೋಣ ವಧೆಯನ್ನು ಸಂಪೂರ್ಣವಾಗಿ ನಿಷೇಧಿಸಬೇಕು. ರಾಜ್ಯದಲ್ಲಿ ಜೈವಿಕ ಗೊಬ್ಬರದ ಕೊರತೆಯಿದ್ದು, ರಾಸಾಯನಿಕ ಗೊಬ್ಬರದಿಂದ ಜನರ ಆರೋಗ್ಯ ಹಾನಿಯಾಗುತ್ತದೆ. ಅದಕ್ಕಾಗಿ ಎಲ್ಲ ಜಾನುವಾರುಗಳ ವಧೆ ಸಂಪೂರ್ಣವಾಗಿ ನಿಷೇಧಿಸುವ ಮೂಲಕ ತಮ್ಮ ಸರಕಾರವೇ ಪಾಸ್ ಮಾಡಿದ ಕರ್ನಾಟಕ ಜಾನುವಾರು ವಧೆ ನಿಷೇಧ ಹಾಗೂ ಸಂರಕ್ಷಣಾ ಕಾಯ್ದೆ ೨೦೧೦ನ್ನು ಇನ್ನಷ್ಟು ಪ್ರಬಲಗೊಳಿಸಿ ಕಾಯ್ದೆಯನ್ನು ಜಾರಿಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಸಂರಕ್ಷಿಸಲ್ಪಟ್ಟ ಜಾನುವಾರುಗಳನ್ನು ಯೋಗ್ಯ ರೀತಿಯಲ್ಲಿ ಉಪಯೋಗವಾಗುವಂತೆ ಜವಾಬ್ದಾರಿ ವಹಿಸಲು ‘ಗೋಸೇವಾ ಆಯೋಗ’ ಸ್ಥಾಪಿಸಬೇಕು ಎಂದು ವಿನಂತಿಸಲಾಗಿದೆ.
ಮನವಿ ಸಲ್ಲಿಸಿದ ನಿಯೋಗದಲ್ಲಿ ವಿಹಿಂಪ ವಿಭಾಗ ಕಾರ್ಯದರ್ಶಿ ಶರಣ್ ಪಂಪ್‌ವೆಲ್, ಜಿಲ್ಲಾಧ್ಯಕ್ಷ ಗೋಪಾಲ ಕುತ್ತಾರ್, ಜಿಲ್ಲಾ ಕಾರ್ಯದರ್ಶಿ ಶಿವಾನಂದ ಮೆಂಡನ್, ಬಜರಂಗದಳ ಜಿಲ್ಲಾ ಸಂಚಾಲಕ ಪುನೀತ್ ಅತ್ತಾವರ, ಜಿಲ್ಲಾ ಗೋರಕ್ಷಾ ಪ್ರಮುಖ್ ಪ್ರದೀಪ್ ಪಂಪ್‌ವೆಲ್, ಗುರುಪ್ರಸಾದ್ ಉಳ್ಳಾಲ ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!