Monday, July 4, 2022

Latest Posts

ಪ್ರವಾಸಿ ತಾಣಗಳಲ್ಲಿ ಹೆಚ್ಚುತ್ತಿರುವ ಜನಜಂಗುಳಿ: ನಿಯಂತ್ರಣಕ್ಕೆ ಪರಿಸರ ಸಂಘಟನೆಗಳ ಮುಖಂಡರ ಆಗ್ರಹ

ಹೊಸ ದಿಗಂತ ವರದಿ, ಚಿಕ್ಕಮಗಳೂರು:

ಜಿಲ್ಲೆಯ ಚಂದ್ರದ್ರೋಣ ಪರ್ವತಶ್ರೇಣಿ ಸೇರಿದಂತೆ ಪ್ರವಾಸಿ ತಾಣಗಳಿಗೆ ಬರುವ ಜನ-ವಾಹನ ಭರಾಟೆ ಅಧಿಕವಾಗುತ್ತಿದ್ದು,
ಸೂಕ್ಷ್ಮ ಪ್ರದೇಶಗಳಲ್ಲಿ ಅಗತ್ಯ ನಿಯಂತ್ರಣಕ್ಕೆ ಜಿಲ್ಲಾಡಳಿತ ಮುಂದಾಗಬೇಕು ಎಂದು ಪರಿಸರ ಸಂಘಟನೆಗಳ ಮುಖಂಡರು ಆಗ್ರಹಿಸಿದ್ದಾರೆ.
ಭದ್ರಾ ವೈಲ್ಡ್‍ಲೈಫ್ ಕನ್ಸರ್ವೇಷನ್ ಟ್ರಸ್ಟ್‍ನ ಡಿ.ವಿ.ಗಿರೀಶ್, ವೈಲ್ಡ್‍ಕ್ಯಾಟ್-ಸಿ  ಸಂಘಟನೆಯ ಶ್ರೀದೇವ್ ಹುಲಿಕೆರೆ, ಹಾಗೂ ರಾಜ್ಯ ವನ್ಯಜೀವಿ ಮಂಡಳಿ ಮಾಜಿ ಸದಸ್ಯ ಸ.ಗಿರಿಜಾ ಶಂಕರ್ ಈ ಸಂಬಂಧ ಹೇಳಿಕೆ ನೀಡಿದ್ದಾರೆ.
ಕರೋನಾ ಸೋಂಕು ತಗ್ಗುತ್ತಿದ್ದಂತೆ ಜಿಲ್ಲೆಯ ಪ್ರವಾಸಿ ತಾಣಗಳಿಗೆ ಭೇಟಿ ನೀಡುವವರ ಸಂಖ್ಯೆ ಅತ್ಯಧಿಕವಾಗಿದೆ. ಈ ಪ್ರದೇಶಗಳ ಪರಿಸರ ಸೂಕ್ಷ್ಮತೆಯ ಹಿನ್ನೆಲೆಯಲ್ಲಿ ಜಿಲ್ಲಾಡಳಿತವೇ ಆ ಪ್ರದೇಶಗಳ ತಾಳಿಕೆ ಸಾಮಥ್ರ್ಯಕ್ಕನುಗುಣವಾಗಿ ಪ್ರವಾಸಿ ಸಂಖ್ಯೆಗೆ ಮಿತಿ ಹೇರಿ, ಹೋಗಿಬರುವ ಸಮಯ ನಿಗದಿ ಮಾಡಬಹುದಾಗಿದೆ ಎಂದು ಸಲಹೆ ಮಾಡಿದ್ದಾರೆ.

ಪ್ರವಾಸೋದ್ಯಮವನ್ನು ಸುವ್ಯವಸ್ಥಿತಗೊಳಿಸಲು ಮುಂದಾಗಬಹುದು
ಈ ಸಮಸ್ಯೆಗಳನ್ನು ನಿವಾರಿಸಲು ಹೊಸದಾಗಿ ಕಾನೂನು ರಚಿಸುವುದು ಅಗತ್ಯವಿಲ್ಲ. ಜಿಲ್ಲಾಡಳಿತವೇ ಈ ಪ್ರದೇಶಗಳ ಸೂಕ್ಷ್ಮತೆ, ಸ್ಥಳೀಯರಿಗೆ ಉಂಟಾಗುತ್ತಿರುವ ಕಿರಿಕಿರಿ ಇವುಗಳ ಹಿನ್ನೆಲೆಯಲ್ಲಿ ಪ್ರವಾಸೋದ್ಯಮವನ್ನು ಸುವ್ಯವಸ್ಥಿತಗೊಳಿಸಲು ಮುಂದಾಗಬಹುದು ಎಂದಿದ್ದಾರೆ.

ಪ್ರವಾಸಿ ತಾಣಕ್ಕೆ ಹೋಗಲು ಅಲ್ಲೇ ಟಿಕೆಟ್ ಕೌಂಟರ್ ತೆರೆಯಬಹುದು
ಜಿಲ್ಲಾಡಳಿತ ಈ ಗಿರಿಶ್ರೇಣಿಗೆ ಹೋಗುವ ಮುನ್ನ ಜನವಸತಿ ಇರುವ ಸೂಕ್ಷ್ಮವಲ್ಲದ ಸ್ಥಳಗಳಲ್ಲಿ ವ್ಯಾಪಾರ ವಿಭಾಗ(ಪ್ಲಾಜó) ತರೆಯಬಹುದು. ಅಲ್ಲೇ ತಲಾ 20 ಮಧ್ಯಮ ಮತ್ತು ಸಣ್ಣ ಅಂಗಡಿಗಳಿಗೂ ಅವಕಾಶ ಕಲ್ಪಿಸಬಹುದು. ಇಲ್ಲಿ 200 ವಾಹನಗಳ ನಿಲುಗಡೆಗೆ ಸ್ಥಳಾವಕಾಶ, ಶೌಚಾಲಯ, ತ್ಯಾಜ್ಯ ಸಂಗ್ರಹಣೆ ಘಟಕ, ಆಡಳಿತ ಕಛೇರಿ, ಥೀಮ್ ಪಾರ್ಕ್ಗಳನ್ನು ನಿರ್ಮಿಸಿ ಪ್ರವಾಸಿ ತಾಣಕ್ಕೆ ಹೋಗಲು ಅಲ್ಲೇ ಟಿಕೆಟ್ ಕೌಂಟರ್ ತೆರೆಯಬಹುದು ಎಂದು ಸಲಹೆ ಮಾಡಿದ್ದಾರೆ.

ಮಿನಿಬಸ್‍ಗಳಿಗೆ ಪರವಾನಗಿ ನೀಡಿ
ಜಿಲ್ಲಾಡಳಿತ ಪ್ರವಾಸಿಗರ ಸ್ವಂತ ವಾಹನಗಳನ್ನು ಪ್ರವಾಸಿತಾಣಗಳಿಗೆ ಬಿಡದೆ, ಅವುಗಳ ಬದಲಿಗೆ ಈಗ ಪ್ರವಾಸಿಗರನ್ನು ಕೊಂಡೊಯ್ಯುತ್ತಿರುವ ಜೀಪ್ ಗಳಿಗೆ 20 ರಿಂದ 25 ಜನ ಕೂರುವ ಮಿನಿಬಸ್‍ಗಳಿಗೆ ಪರವಾನಗಿ ನೀಡಿ, ಒಂದು ಸುತ್ತಿನ ಪ್ರವಾಸವೆಂದು ಮುಖ್ಯ ಪ್ರವಾಸಿ ತಾಣಗಳನ್ನು ಸಂದರ್ಶಿಸಲು ಅನುಕೂಲ ಮಾಡಿಕೊಟ್ಟರೆ ಸ್ಥಳೀಯರಿಗೆ ಉದ್ಯೋಗ, ಆದಾಯವೂ ದೊರೆಯುವುದಲ್ಲದೆ, ತ್ಯಾಜ್ಯ ಸೇರಿದಂತೆ ಹಲವು ಸಾರ್ವಜನಿಕ ಕಿರಿಕಿರಿಗೂ ತಡೆಹಾಕಬಹುದು ಎಂದು ತಿಳಿಸಿದ್ದಾರೆ.
ಪ್ರತಿ ಪ್ರವಾಸಿಗೆ ಒಂದು ದಿನಕ್ಕೆ 500ರೂ. ರಂತೆ ಗಿರಿಶ್ರೇಣಿಯ ಪ್ರವಾಸಿ ತಾಣಗಳಿಗೆ ಹೋಗಲು ಅವಕಾಶ ನೀಡಿದರೆ, ದಿನವೊಂದಕ್ಕೆ 600ಮಂದಿ ಪ್ರವಾಸಿಗಳಿಗೆ, ಬೆಳಗ್ಗೆ 8ರಿಂದ ಸಂಜೆ 4ರವರೆಗೆ ಹೋಗಲು ಅವಕಾಶ ಅನುಮತಿ ನೀಡಿದರೂ ದಿನಕ್ಕೆ 3ಲಕ್ಷ ರೂ.ಆದಾಯ ಗಳಿಸಬಹುದು.

1.50ಕೋಟಿ ರೂ.ವಾರ್ಷಿಕ ವೆಚ್ಚ ಬರುತ್ತದೆ
ಬರೀ ವಾರಾಂತ್ಯದಲ್ಲಿ ಇಷ್ಟು ಮಂದಿ ಹೋಗಿಬಂದರೂ ಒಂದು ವರ್ಷಕ್ಕೆ 3ಕೋಟಿ ರೂ. ಹಣ ಗಳಿಸಬಹುದು. ಇದರ ಜೊತೆಗೆ ಅಂಗಡಿ,ವಾಹನ ನಿಲುಗಡೆ ಸೇರಿದಂತೆ ಬರುವ ಆದಾಯವನ್ನೂ ವಾರ್ಷಿಕವಾಗಿ ಪರಿಗಣಿಸಿದರೆ 75ಲಕ್ಷರೂ.ಗಳಿಂದ 1ಕೋಟಿರೂ. ಆದಾಯ ಪಡೆಯಬಹುದಾಗಿದೆ. ಇನ್ನು ಚಾಲಕರ ಸಂಬಳ,ಮಾರ್ಗದರ್ಶಿಗಳ, ನಿರ್ವಹಣಾ ಸಿಬ್ಬಂದಿ ವೆಚ್ಚ ಸೇರಿದರೆ ಒಟ್ಟು 1.50ಕೋಟಿ ರೂ.ವಾರ್ಷಿಕ ವೆಚ್ಚ ಬರುತ್ತದೆ ಎಂದು ತಿಳಿಸಿದ್ದಾರೆ.
ಜಿಲ್ಲಾಡಳಿತ ಈ ಪ್ರದೇಶಗಳನ್ನು ಎರ್ರಾಬಿರ್ರಿ ಪ್ರವಾಸೋದ್ಯಮಕ್ಕೆ ಅನುವು ಮಾಡಿಕೊಡುವ ಮೂಲಕ ಹಾಳುಗೆಡವಿ, ಆ ಸೂಕ್ಷ್ಮ ತಾಣಗಳು ತ್ಯಾಜ್ಯದ ಗುಂಡಿಗಳಾಗದಂತೆ ರಕ್ಷಿಸಬೇಕು ಎಂದು ಒತ್ತಾಯಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss