ಧಾರವಾಡ: ಪೇಡಾ ನಗರಿ ಖ್ಯಾತಿಯ ಧಾರವಾಡ ಜಿಲ್ಲೆಯಲ್ಲಿ ಯಾವುದೇ ಡ್ಯಾಮ್ ಅಥವಾ ನದಿಗಳು ಹರಿದಿಲ್ಲ. ಆದಾಗ್ಯೂ ಮಳೆ ಬಂದಾಗೊಮ್ಮೆ ಜಿಲ್ಲೆಯ ರೈತರು ಒಂದಲ್ಲೊoದು ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ. ಇದಕ್ಕೆ ಜಿಲ್ಲೆಯಲ್ಲಿ ಹರಿಯುವ ಬೆಣ್ಣೆಹಳ್ಳ ಹಾಗೂ ತುಪ್ಪರಿಹಳ್ಳವೇ ಕಾರಣ.
ಹೌದು, ಈಗ ತುಪ್ಪರಿಹಳ್ಳದ ಪ್ರವಾಹದ ಸುಳಿಗೆ ಸಿಲುಕಿದ ನವಗಲೂದ ತಾಲೂಕಿನ ವಿವಿಧ ರೈತರ ಸುಮಾರ 90 ಹೆಕ್ಟರ್ ಪ್ರದೇಶದ ಪೇರ ತೋಟಗಳು ನೀರು ಪಾಲಾಗಿವೆ. ಇದರಿಂದ ಲಕ್ಷಾಂತರ ರೂಪಾಯಿ ವ್ಯಯಿಸಿ ತೋಟ ಮಾಡಿದ ರೈತರ ಬದುಕು ಅಕ್ಷರಶಃ ಚಿಂತಾಜನಕವಾಗಿದೆ.
ಅನಾವೃಷ್ಟಿಗೆ ಬೇಸತ್ತ ನವಲಗುಂದ ತಾಲೂಕಿನ ಆಯಟ್ಟಿ, ಶಿರೂರು, ಹಾರೋಬೆಳವಡಿ ಬಹುತೇಕ ರೈತರು ನೂರಾರು ಎಕರೆಯಲ್ಲಿ ಪೇರಲ ತೋಟ ಮಾಡಿದ್ದರು. ಆದರೆ, ಕಳೆದ ಭಾರಿ ಹಾಗೂ ಈ ಸಲವೂ ಅತಿವೃಷ್ಟಿಯಿಂದ ಪೇರಲು ನೀರು ಪಾಲಾಗಿದೆ ಎಂದು ಅಳಲು ತೊಡಿಕೊಂಡರು.
ಕಳೆದ ಸಲದ ಅತಿವೃಷ್ಟಿ ಮರೆತು ಬೇಸಿಗೆಯಲ್ಲಿ ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದ ಬೆಳೆಗಾರರಿಗೆ ಕೊರೋನಾ ಮಹಾಮಾರಿ ವಕ್ಕರಿಸಿ ಲಾಕ್ಡೌನ್ ಘೋಷಣೆಯಾಯಿತು. ಇದೀಗ ಲಾಕ್ಡೌನ್ ತೆರವುಗೊಳಿಸಿದ ನಂತರ ವರುಣ ದೇವನ ಅವಕೃಪೆ ರೈತರ ಮೇಲೆ ಬಿದ್ದಿರುವುದು ದುರದುಷ್ಟಕರ ಸಂಗತಿ.
ಅತಿವೃಷ್ಟಿಯಿoದ ನೀರು ಪೇರಲು ತೋಟಗಳಿಗೆ ನುಗ್ಗಿದೆ. ಮಳೆ ತಗ್ಗಿದರೂ, ನೀರಿನ ಹರಿವು ನಿಂತಿಲ್ಲ. ಇದರ ಪರಿಣಾಮ ಪೇರಲ ಬೆಳೆ ಹಾಳಾಗಿದೆ. ಲಕ್ಷಾಂತರ ರೂಪಾಯಿ ಸಾಲಸೂಲ ಮಾಡಿ ಪೇರಲ ಬೆಳೆದ ರೈತರು ತಲೆ ಮೇಲೆ ಕೈಹೊತ್ತು ಕುಳಿತುಕೊಳ್ಳುವ ಸಂದಿಗ್ಧತೆ ಎದುರಾಗಿದೆ.
ಜಿಲ್ಲೆಯಲ್ಲಿ ಅತಿವೃಷ್ಟಿ ಹಾಗೂ ಅನಾವೃಷ್ಟಿ ಏನೇ ಸಂಭವಿಸಿದರೂ, ನವಲಗುಂದ ತಾಲೂಕಿನ ರೈತರೇ ಅತಿ ಹೆಚ್ಚಿನ ಪ್ರಮಾಣದಲ್ಲಿ ತೊಂದರೆಗೆ ಒಳಗಾಗುವರು. ಸುಮಾರು 90 ಹೆಕ್ಟರ್ ಪೇರಲ ತೋಟ ಹಾನಿಯಾಗಿದ್ದು, ರೈತರಿಗೆ ಪರಿಹಾರ ನೀಡುವಂತೆ ಬೆಳೆಗಾರರು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.