ಮುಂಬೈ: ರಾಜ್ಯದಲ್ಲಿ ಮಳೆಯಿಂದಾಗಿ ತೊಂದರೆ ಅನುಭವಿಸಿರುವ ಪ್ರದೇಶಗಳ ಅಭಿವೃದ್ಧಿಗೆ ಮಹಾರಾಷ್ಟ್ರ ಸರ್ಕಾರ 10 ಸಾವಿರ ಕೋಟಿ ಪರಿಹಾರ ಪ್ಯಾಕೇಜ್ ಘೋಷಿಸಿದೆ.
ಸೋಲಾಪುರ್, ಸಾಂಗ್ಲಿ, ಕೊಲ್ಹಾಪುರ್, ಸತಾರಾ, ಉಸ್ಮಾನಾಬಾದ್, ಬೀಡ್, ಔರಂಗಾಬಾದ್ ಹಾಗೂ ಲಾತುರ್ನಲ್ಲಿ ರೈತರು ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದರು, ಆದರೆ ರೈತರ ಕನಸು ನುಚ್ಚುನೂರಾಗಿದೆ.
ಈ ಪರಿಹಾರ ಮೊತ್ತ ದೀಪಾವಳಿಗೆ ಮುನ್ನ ಹಂಚಿಕೆ ಮಾಡಲಾಗುವುದು ಎಂದು ಸಿಎಂ ತಿಳಿಸಿದ್ದಾರೆ. ಪ್ರವಾಹ ಪೀಡಿತ ಪ್ರದೇಶದಲ್ಲಿ ಇಂದು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಪರಿಸ್ಥಿತಿ ಅವಲೋಕನ ನಡೆಸಿದರು. ಈ ವೇಳೆ ಜನ-ಜೀವನ, ಬೆಳೆ ಹಾನಿ ಕುರಿತು ಅವರು ಸಮೀಕ್ಷೆ ನಡೆಸಿದರು. ಪ್ರವಾಹ ಪೀಡಿತ ಸ್ಥಳಗಳಿಗೆ ಅವರು ಭೇಟಿ ನೀಡಿದ ಬಳಿಕ ಈ ಘೋಷಣೆ ಮಾಡಲಾಗಿದೆ.
ಪಶ್ಚಿಮ ಮತ್ತು ಮಧ್ಯ ಮಹಾರಾಷ್ಟ್ರದ 10 ಜಿಲ್ಲೆಗಳು ಪ್ರವಾಹಕ್ಕೆ ಒಳಗಾಗಿದೆ. ಇದರಲ್ಲಿ ಸುಮಾರು 7 ಲಕ್ಷ ಹೆಕ್ಟೇರ್ ಪ್ರದೇಶದ ಬೆಳೆಗಳು ಕೊಚ್ಚಿ ಹೋಗಿವೆ. ಮಳೆಯಿಂದಾಗಿ ಸೋಯಾಬೀನ್ಮ ಹತ್ತಿ, ಬೆಳೆ, ಕಬ್ಬು ದಾಳೆಂಬೆ ಹಾನಿಯಾಗಿದೆ, ಅದರಲ್ಲಿಯೂ ವಾಣಿಜ್ಯ ಬೆಳೆಗಳಾದ ಕಬ್ಬು, ಹತ್ತಿ, ಸೋಯಾ ಹೆಚ್ಚಿನ ಹಾನಿಗೆ ಒಳಗಾಗಿದೆ, ಸೊಲ್ಲಾಪುರ ಮತ್ತು ಒಸ್ಮನಬಾದ್ ಪ್ರದೇಶ ಹೆಚ್ಚು ಪ್ರವಾಹಕ್ಕೆ ಒಳಗಾಗಿದೆ.
ಪ್ರವಾಹ ಪೀಡಿತ ಪ್ರದೇಶದಲ್ಲಿ ಪರಿಹಾರ ಹಣ ಬಿಡುಗಡೆಗಾಗಿ ಶೀಘ್ರವಾಗಿ ಹಾನಿ ಸಮೀಕ್ಷೆ ನಡೆಸಿ , ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿಗಳು ಮತ್ತು ವಿಭಾಗೀಯ ಆಯುಕ್ತರಿಗೆ ನಿರ್ದೇಶಿಸಲಾಗಿದೆ.
ಕಳೆದ ವಾರ ಮಳೆಯಿಂದಾಗಿಕನಿಷ್ಠ 29 ಮಂದಿ ಮೃತಪಟ್ಟಟಿದ್ದರು. ಜೂನ್ನಲ್ಲಿ ನಿಸರ್ಗ ಚಂಡಮಾರುತದಿಂದ ಕೊಂಕಣ ಪ್ರದೇಶದಲ್ಲಿ ಬೆಳೆ ಹಾನಿಯಾಗಿತ್ತು ಹಾಗೂ ವಿದರ್ಭ ಆಗಸ್ಟ್ ನಲ್ಲಿ ಸುರಿದ ಮಳೆಗೆ 1.80 ಲಕ್ಷ ಹೆಕ್ಟೇರ್ ಪ್ರದೇಶ ನೀರಿನಲ್ಲಿ ಕೊಚ್ಚಿ ಹೋಗಿತ್ತು. ಇದೀಗ 10 ಸಾವಿರ ಕೋಟಿ ರೂ. ಪರಿಹಾರ ಘೋಷಿಸಿದ್ದಾರೆ. ಮಹಾರಾಷ್ಟ್ರದ ಪಶ್ಚಿಮ ಮತ್ತು ಮಧ್ಯಭಾಗದ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಸುಮಾರು 7 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಷ್ಟ ಉಂಟಾಗಿದೆ.