Sunday, August 14, 2022

Latest Posts

ಪ್ರಾಕೃತಿಕ ವಿಕೋಪಕ್ಕೆ ತುತ್ತಾಗಿ ನಷ್ಟ ಅನುಭವಿಸಿದ ಬೆಳೆಗಾರರ ಪುನಶ್ಚೇತನಕ್ಕೆ ಸೂಕ್ತ ಯೋಜನೆಗಳನ್ನು ಜಾರಿಗೆ ತರಲು ಆಗ್ರಹ

ಪೊನ್ನಂಪೇಟೆ: ಸತತ ಮೂರು ವರ್ಷಗಳಿಂದ ಪ್ರಾಕೃತಿಕ ವಿಕೋಪಕ್ಕೆ ತುತ್ತಾಗಿ ನಿರಂತರ ನಷ್ಟ ಅನುಭವಿಸಿರುವ ಬೆಳೆಗಾರರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಬೆಳೆಗಾರರ ಬದುಕಿಗೆ ಭರವಸೆ ಮೂಡಿಸುವ ನಿಟ್ಟಿನಲ್ಲಿ ಅವರ ಪುನಶ್ಚೇತನಕ್ಕೆ ಕೇಂದ್ರ ಹಾಗೂ ರಾಜ್ಯ ಸರಕಾರ ಸೂಕ್ತ ಯೋಜನೆಗಳನ್ನು ಜಾರಿಗೆ ತರಬೇಕೆಂದು ಕೊಡಗು ಬೆಳೆಗಾರರ ಒಕ್ಕೂಟ ಆಗ್ರಹಿಸಿದೆ.
ಒಕ್ಕೂಟದ ಅಧ್ಯಕ್ಷ ಕೈಬಿಲೀರ ಹರೀಶ್ ಅಪ್ಪಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಆಡಳಿತ ಮಂಡಳಿಯ ಸಭೆಯಲ್ಲಿ ಈ ಸಂಬಂಧ ಸರಕಾರಗಳನ್ನು ಒತ್ತಾಯಿಸುವ ನಿರ್ಣಯ ಕೈಗೊಳ್ಳಲಾಯಿತು.
ಪ್ರಸಕ್ತ ವರ್ಷ ಆಗಸ್ಟ್ ತಿಂಗಳ ಆರಂಭದಿಂದ ಸುರಿದ ಬಿರುಗಾಳಿ ಸಹಿತ ಧಾರಕಾರ ಮಳೆಗೆ ಕೊಡಗಿನ ಕಾಫಿ, ತೋಟಗಾರಿಕೆ ಮತ್ತು ಕೃಷಿ ಬೆಳೆಯ ಮೇಲೆ ನೇರವಾಗಿ ದುಷ್ಪರಿಣಾಮ ಬೀರಿದ್ದು, ಕಾಫಿ ತೋಟಗಳಲ್ಲಿ ಅಪಾರ ಪ್ರಮಾಣದಲ್ಲಿ ಮರಗಳು ಮುರಿದು ಬಿದ್ದಿವೆ. ಕಾಫಿ ಫಸಲು ನೆಲಕ್ಕಚ್ಚಿದೆ. ಅಡಿಕೆ ಮರ ಮತ್ತು ಕಾಳುಮೆಣಸಿಗೆ ಆಧಾರವಾಗಿದ್ದ ಮರಗಳು ಅಪಾರ ಪ್ರಮಾಣದಲ್ಲಿ ಧರೆಗುರುಳಿವೆ. ಅಲ್ಲದೆ ಮಳೆ ಮತ್ತು ಪ್ರವಾಹದಿಂದ ಭತ್ತ ಬೆಳೆ, ಕಾಫಿ, ಅಡಿಕೆ, ಬಾಳೆ ಇತ್ಯಾದಿ ಫಸಲು ಜಲಾವೃತವಾಗಿ ದೊಡ್ಡ ನಷ್ಟವಾಗಿದೆ.
2018 ಮತ್ತು 2019ರಲ್ಲಿಯೂ ಬಾರಿ ಮಳೆಗೆ ಬೆಳೆಗಾರರು ನಷ್ಟದಿಂದ ನಲುಗಿದ್ದಾರೆ. ಇದೀಗ ಸತತ ಮೂರನೇ ವರ್ಷವೂ ಗಾಳಿ ಮಳೆಯಿಂದ ದೊಡ್ಡ ಹೊಡೆತ ಬಿದ್ದಿದೆ. ಕಳೆದ 3 ವರ್ಷದಿಂದ ಬೆಳೆಗಾರರ ಆದಾಯ ಶೇಕಡಾ 70ರಷ್ಟು ಕುಸಿದಿದೆ. ಈ ನಷ್ಟದಿಂದ ಚೇತರಿಸಿಕೊಳ್ಳಲು ಬೆಳೆಗಾರರಿಗೆ ಸರಕಾರ ಸೂಕ್ತ ರೀತಿಯಲ್ಲಿ ಪರಿಹಾರ ಹಾಗೂ ವಿಶೇಷ ಪ್ಯಾಕೇಜ್ ಯೋಜನೆಗಳನ್ನು ರೂಪಿಸಬೇಕೆಂದು ಸರಕಾರಕ್ಕೆ ಮನವಿ ಮಾಡಲು ತೀರ್ಮಾನಿಸಲಾಯಿತು.
ಮುಖ್ಯವಾಗಿ ಬೆಳೆಗಾರರು ಎಲ್ಲಾ ಬ್ಯಾಂಕ್‍ಗಳಲ್ಲಿ ಹೊಂದಿರುವ ಎಲ್ಲಾ ಮಾದರಿಯ ಸಾಲಗಳನ್ನು ಸರಕಾರ ಮನ್ನಾ ಮಾಡಬೇಕು. ಕೃಷಿ ದಾಖಲೆ ವಿರಳವಾಗಿರುವ ರೈತರು ಆಭರಣ ಸಾಲ ಪಡೆದು ಕೃಷಿಯಲ್ಲಿ ತೊಡಗಿಕೊಂಡಿದ್ದು, ಬೆಳೆಗಾರರ ಆಭರಣ ಸಾಲವನ್ನು ಕೃಷಿ ಸಾಲವೆಂದು ಪರಿಗಣಿಸಿ ಮನ್ನಾ ಮಾಡಬೇಕು. ಸಣ್ಣ ಬೆಳೆಗಾರರನ್ನು ಬಿ.ಪಿ.ಎಲ್ ಪಟ್ಟಿಗೆ ಸೇರಿಸಿ ಸೌಲಭ್ಯ ನೀಡಬೇಕು. ಕಾಫಿ ಮತ್ತು ಕೃಷಿ ಚಟುವಟಿಕೆಗೆ ಪೂರಕವಾಗಿ ಮಹಾತ್ಮಗಾಂಧಿ ಉದ್ಯೋಗಖಾತ್ರಿ ಯೋಜನೆಯಡಿ ಸೌಲಭ್ಯ ವಿಸ್ತರಿಸಬೇಕು. ಇತರ ಬೆಳೆಗೆ ನೀಡುವಂತೆ ಕಾಫಿ ಬೆಳೆಗೆ 10 ಹೆಚ್.ಪಿವರೆಗಿನ ಪಂಪ್‍ಸೆಟ್‍ಗಳಿಗೆ ಉಚಿತ ವಿದ್ಯುತ್ತನ್ನು ನೀಡಬೇಕು. ನಿರಂತರ ಪ್ರಾಕೃತಿಕ ವಿಕೋಪಕ್ಕೆ ತುತ್ತಾಗಿರುವ ಕೊಡಗು ಜಿಲ್ಲೆಯ ಪ್ರತಿ ಗ್ರಾಮಗಳಲ್ಲಿ ಕೃಷಿ ಉತ್ಪನ್ನ ಮಾರಾಟ, ಸಂಸ್ಕರಣಾ ಘಟಕ, ಹೈನುಗಾರಿಕೆ ಸೇರಿದಂತೆ ಸ್ವಂತ ಉದ್ಯೋಗ ಮಾಡಲು ಸ್ವಸಹಾಯ ಸಂಘಗಳ ಸ್ಥಾಪನೆ ಮಾಡಿ ಅದಕ್ಕೆ ಕನಿಷ್ಟ ರೂ. 50 ಲಕ್ಷದವರೆಗೆ ಸರಕಾರ ರಿಯಾಯಿತಿ ದರದಲ್ಲಿ ಆರ್ಥಿಕ ನೆರವು ನೀಡುವ ಯೋಜನೆ ರೂಪಿಸಬೇಕೆಂದು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ಉತ್ಪಾದನಾ ವೆಚ್ಚ ಹೆಚ್ಚಳದೊಂದಿಗೆ ಪ್ರಾಕೃತಿಕ ವಿಕೋಪಕ್ಕೆ ಸತತವಾಗಿ ತುತ್ತಾಗಿರುವ ಕಾಫಿ ಬೆಳೆಗೆ ಕಾಫಿ ಮಂಡಳಿಯಿಂದ ನೀಡುತ್ತಿರುವ ಪೆÇ್ರೀತ್ಸಾಹ ಧನವನ್ನು ಸರಕಾರ ಸ್ಥಗಿತ ಮಾಡಿದ್ದು, ಇದನ್ನು ಮುಂದುವರೆಸಬೇಕು. ಪ್ರಾಕೃತಿಕ ವಿಕೋಪಕ್ಕೆ ತುತ್ತಾಗಿರುವ ಬೆಳೆ ನಷ್ಟಕ್ಕೆ ಎನ್.ಡಿ.ಆರ್.ಎಫ್ ಮಾನದಂಡವನ್ನು ಪರಿಷ್ಕರಿಸಿ ಹೆಚ್ಚುವರಿ ಪರಿಹಾರವನ್ನು ನೀಡಬೇಕು ಎಂದು ಸಭೆಯಲ್ಲಿ ಒತ್ತಾಯಿಸಿ ಈ ಬಗ್ಗೆ ಸರಕಾರಕ್ಕೆ ಮನವಿ ಸಲ್ಲಿಸಲು ತೀರ್ಮಾನಿಸಲಾಯಿತು.
ಪುಣ್ಯಕ್ಷೇತ್ರ ಕಾವೇರಿ ಉಗಮ ಸ್ಥಾನ ತಲಕಾವೇರಿಯಲ್ಲಿ ಭೂಕುಸಿತದಿಂದ ಸಾವಿಗೀಡಾಗಿರುವ ನಾರಾಯಣ ಆಚಾರ್ ಮತ್ತು ಅವರ ಕುಟುಂಬಕ್ಕೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ತಲಕಾವೇರಿ ಘಟನೆ ಬಗ್ಗೆ ಕೊಡಗಿನ ಪ್ರತಿಯೊಬ್ಬರಿಗೂ ಭಾವನಾತ್ಮಕವಾಗಿ ನೋವಿದೆ. ಈ ಧಾರ್ಮಿಕ ಕ್ಷೇತ್ರದ ಪಾವಿತ್ರ್ಯತೆಯನ್ನು ಸರಕಾರ ಮತ್ತು ಜನಪ್ರತಿನಿಧಿಗಳು ಕಾಪಾಡಬೇಕು. ಈ ಕ್ಷೇತ್ರದ ಸೂಕ್ಮ ಪರಿಸರವನ್ನು ಕಾಪಾಡಬೇಕೆಂದು ಬೆಳೆಗಾರರ ಒಕ್ಕೂಟದ ಸಭೆಯಲ್ಲಿ ಒತ್ತಾಯಿಸಲಾಯಿತು.
ಕೊಡಗು ಜಿಲ್ಲೆಯಲ್ಲಿ ಧಾರಕಾರ ಮಳೆಯಿಂದ ವಿದ್ಯುತ್ ಸಂಪರ್ಕ ಕಡಿತವಾಗಿದ್ದು, ಚೆಸ್ಕಾಂ ಇಲಾಖೆ ಹಾನಿಯಾಗಿರುವ ಮಾರ್ಗವನ್ನು ತ್ವರಿತವಾಗಿ ಸರಿಪಡಿಸಲು ಯಾವುದೇ ಪೂರ್ವ ತಯಾರಿ ಮಾಡಿಕೊಂಡಿಲ್ಲ. ಕೊಡಗಿನ ಬಹುತೇಕ ಗ್ರಾಮೀಣ ಪ್ರದೇಶದಲ್ಲಿ 10 ದಿನಕ್ಕೂ ಅಧಿಕ ಸಮಯದಿಂದ ವಿದ್ಯುತ್ ಕಡಿತವಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಬೆಳೆಗಾರರು ಚೆಸ್ಕಾಂ ಇಲಾಖೆಯೊಂದಿಗೆ ಮಾರ್ಗ ಸರಿಪಡಿಸುವ ಕಾರ್ಯದಲ್ಲಿ ತೊಡಿಸಿಕೊಂಡಿದ್ದರೂ, ವಿದ್ಯುತ್ ಕಂಬ, ಸಾಮಾಗ್ರಿ ಹಾಗೂ ಲೈನ್ ಮ್ಯಾನ್‍ಗಳ ಕೊರತೆಯಿಂದ ಸಮಸ್ಯೆಯನ್ನು ಶೀಘ್ರ ಸರಿಪಡಿಸಲು ಸಾಧ್ಯವಾಗುತ್ತಿಲ್ಲ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಕೂಡಲೇ ಹೆಚ್ಚುವರಿ ಲೈನ್‍ಮ್ಯಾನ್‍ಗಳನ್ನು ವಿದ್ಯುತ್ ಕಂಬ ಹಾಗೂ ಸಾಮಾಗ್ರಿಗಳನ್ನು ಒದಗಿಸಿ ಶೀಘ್ರವಾಗಿ ವಿದ್ಯುತ್ ಸಂಪರ್ಕ ನೀಡಲು ಕ್ರಮ ಕೈಗೊಳ್ಳಬೇಕೆಂದು ಸಭೆಯಲ್ಲಿ ಒತ್ತಾಯಿಸಲಾಯಿತು.
ಸಭೆಯಲ್ಲಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಅಣ್ಣೀರ ಹರೀಶ್ ಮಾದಪ್ಪ, ಜಂಟಿ ಕಾರ್ಯದರ್ಶಿ ಬಾಚಂಗಡ ದಾದ ದೇವಯ್ಯ, ಕಾರ್ಯದರ್ಶಿ ಬೊಳ್ಳೇರ ರಾಜಸುಬ್ಬಯ್ಯ, ಖಜಾಂಚಿ ಮಾಣೀರ ವಿಜಯ್‍ನಂಜಪ್ಪ ಹಾಗೂ ಒಕ್ಕೂಟದ ಸದಸ್ಯರಾದ ಕಾಫಿ ಮಂಡಳಿ ಮಾಜಿ ಉಪಾಧ್ಯಕ್ಷೆ ತಾರಾಅಯ್ಯಮ್ಮ, ಜಿ.ಪಂ. ಮಾಜಿ ಅಧ್ಯಕ್ಷೆ ಚೋಡುಮಾಡ ಶರಿಸುಬ್ಬಯ್ಯ, ಗೋಣಿಕೊಪ್ಪಲು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಉಪಾಧ್ಯಕ್ಷೆ ಬೊಳ್ಳಜ್ಜೀರ ಸುಶೀಲಾ ಆಶೋಕ್, ತಾ.ಪಂ. ಸದಸ್ಯೆ ಆಶಾಜೇಮ್ಸ್, ಅರಮಣಮಾಡ ಸತೀಶ್‍ದೇವಯ್ಯ, ನಿವೃತ್ತ ವಿಂಗ್ ಕಮಾಂಡರ್ ಚೇಂದಿರ ಅಪ್ಪಣ್ಣ, ಸ್ಮಿತಾ ಅಪ್ಪಣ್ಣ, ಕಾಳಿಮಾಡ ರಶಿಕ್, ಕರ್ತಮಾಡ ನಂದಾ, ಚೇಂದಂಡ ಸುಮಿ ಸುಬ್ಬಯ್ಯ, ಮಿದೇರಿರ ಕವಿತಾರಾಮು ಅವರು ಮಾತನಾಡಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss