Tuesday, August 9, 2022

Latest Posts

ಪ್ರೀತಿಯಲ್ಲಾದ ವಂಚನೆಗೆ ನಿಮ್ಮಲ್ಲಿಯೇ ಶಿಕ್ಷೆಯಿದೆ…! ಪ್ರೀತಿಯಲ್ಲಿ ಮೋಸ ಹೋದವರು ಕೊರಗುತ್ತ ಕೂರಬೇಡಿ ಇದನ್ನು ಓದಿ..

ಬೆನ್ನಿಗೆ ಚೂರಿ ಹಾಕಿದರೂ ಸಾವರಿಸಿಕೊಳ್ಳಬಹುದು. ಅದೇ ಹೃದಯಕ್ಕೆ ಹಾಕಿ ಇರಿದರೆ? ಒಮ್ಮೆ ಬದುಕು ನೆಲ ಕಚ್ಚಿ ಬಿಡುತ್ತದೆ. ನಾನು ತುಂಬಾನೇ ಪ್ರಾಕ್ಟಿಕಲ್ ಮನುಷ್ಯ, ಪ್ರೀತಿಯಲ್ಲಿ ಆದ ಮೋಸವನ್ನು ನಾನು ಮರೆತು ಬಿಡುತ್ತೇನೆಂದು ಎದೆ ಉಬ್ಬಿಸಿದರೂ ಕೆಲವು ದಿನಗಳ ಮಟ್ಟಿಗಾದರೂ ತಮ್ಮನ್ನು ತಾವು ಮರೆತು ಮೂಲೆ‌ ಸೇರುತ್ತಾರೆ. ಇನ್ನೊಂದಿಷ್ಟು ಮಂದಿ ಬದಿಕಿನುದ್ದಕ್ಕೂ ಪ್ರೀತಿಯನ್ನೇ‌ ದ್ವೇಷಿಸುತ್ತಾರೆ. ಮತ್ತೊಂದಿಷ್ಟು ಮಂದಿ ಮೋಸದ ಮುಂದೆ ಬದುಕನ್ನೇ ಜಿದ್ದಿಗೆ ಕಟ್ಟುತ್ತಾರೆ.

ಸೇರಿ ಹೆಣೆದ ಕನಸುಗಳನ್ನು ಕತ್ತರಿಸಿ, ಬೆನ್ನು ಹಾಕಿ ಹೊರಟ‌ ಪ್ರೀತಿಯನ್ನು ಒತ್ತಾಯ ಪೂರ್ವಕವಾಗಿ ಉಳಿಸಿಕೊಳ್ಳ ಹೊರಟರೆ, ಅದು ಅಮೃತವಾಗುವುದಿಲ್ಲ, ವಿಷವಾಗುತ್ತದೆ. ಪ್ರೀತಿಯಾಗಿ ಜೀವನ ನಗಿಸುವುದಿಲ್ಲ, ನಗೆಪಾಟಲುಗೀಡಾಗುವಂತೆ ಮಾಡುತ್ತದೆ.
ಅದಕ್ಕಾಗಿ ಹೃದಯದೂರಿನಿಂದ ಹೋರಟವರನ್ನು ಸುಮ್ಮನೆ ಕಳುಹಿಸಿಬಿಡಿ. ಅದು ನಿಮಗೂ ಒಳ್ಳೆಯದು, ಅವರಿಗೂ ಒಳ್ಳೆಯದು.
ಈ ಮೋಸ ಮಾಡುವವರಲ್ಲೂ ಬೇರೆ ಬೇರೆ ತರಹದ ಮಂದಿ ಇರುತ್ತಾರೆ.

ತಮ್ಮನ್ನು ತಾವೇ ಶಿಕ್ಷಿಸಿ ಕೊಳ್ಳುವವರು

ನಿಮ್ಮನ್ನು ಜೀವಕ್ಕೆ ಜೀವಾ ಎಂದು ಪ್ರೀತಿಸುತ್ತಾರೆ. ಪ್ರತಿ ನಿಮ್ಮ ಹೆಜ್ಜೆಯೊಂದಿಗೆ ಹೆಜ್ಜೆಯಾಗ ಬಯಸಿರುತ್ತಾರೆ. ಅಪೇಕ್ಷೆಗಳಿಲ್ಲದೇ ಪ್ರೇಮಿಸಿರುತ್ತಾರೆ. ನಿಮ್ಮ ಕನಸುಗಳನ್ನು ಹಂಚಿಕೊಂಡು‌ ಜೀವನದ ಸಂಗಾತಿಯಾಗ ಬಯಸಿರುತ್ತಾರೆ. ಆದರೆ ಯಾವುದೋ ಅನಿವಾರ್ಯಕ್ಕೆ ಸಿಲುಕಿ‌ ಅಥವಾ ಮನೆಯವರ ಒತ್ತಾಯಕ್ಕೆ ನಿಮ್ಮನ್ನು ಬಿಡಲು ನಿರ್ಧರಿಸುತ್ತಾರೆ. ಅಂಥವರು ನಿಜಕ್ಕೂ ನಿಮಗಿಂತ ಜಾಸ್ತಿ ಕಣ್ಣೀರಾಗಿರುತ್ತಾರೆ. ಮತ್ತೊಬ್ಬರೊಂದಿಗೆ ಬದುಕು ಕಟ್ಟಿಕೊಂಡರೂ ನಿಮ್ಮೆಡೆಗೆ ಅವರದೊಂದು ನಿರ್ಮಲ ಪ್ರೀತಿ ಇರುತ್ತದೆ. ಅಂಥವರಿಗೆ ನಿಮ್ಮಿಂದ ಯಾವುದೇ ಶಿಕ್ಷೆ ಬೇಡ. ತಮ್ಮನ್ನು ತಾವೇ ಶಿಕ್ಷಿಸಿಕೊಳ್ಳುತ್ತಾರೆ.

ಇವರಿಗೆ ವಂಚನೆಯೇ ಧರ್ಮ
ಕೆಲವೊಬ್ಬರು ನಿಮ್ಮ ಶ್ರೀಮಂತಿಕೆ, ಬುದ್ಧಿವಂತಿಕೆ ನೋಡಿಕೊಂಡು ಬಣ್ಣ ಬಣ್ಣದ ಮಾತುಗಳನ್ನಾಡುತ್ತಾ ಹೃದಯ ಬಾಗಿಲು ತಟ್ಟುತ್ತಾ ಬರುತ್ತಾರೆ. ಅಂಥವರು ಜಾಸ್ತಿ ದಿನ ಉಳಿಯುವುದಿಲ್ಲ. ಬಣ್ಣದ ಮಾತು, ಜೇಬು ಖಾಲಿಯಾಗುತ್ತಿದ್ದ ಹಾಗೇ ವಂಚಿಸಿ‌ ಹೊರಡಲು ನೆಪ ಹುಡುಕುತ್ತಾರೆ. ಮಾಡಿದ ಯವುದೋ ಸಣ್ಣ ತಪ್ಪನ್ನೇ ಇಟ್ಟುಕೊಂಡು ಪದೇ ಪದೇ ಹಂಗಿಸುತ್ತಾರೆ. ದೂರ ಆಗುವ ಮಾತನ್ನಾಡಿ ಹೆದರಿಸುತ್ತಾರೆ. ಅಂಥವರನ್ನು ಹೊರಡಲು‌ಬಿಟ್ಟು ಬಿಡಿ.

ಅವರು ನಿಮ್ಮಿಂದ ನೀನು ಇಲ್ಲದಿದ್ದರೆ ನಾನು ಬದುಕುವುದಿಲ್ಲ, ನನ್ನ ಬಿಟ್ಟು ಹೋಗಬೇಡ ಚಿನ್ನಾ ಎಂಬ ನಿಮ್ಮ ಗೋಳಾಟ, ಕೂಗನ್ನು ನಿರೀಕ್ಷಿಸಿರುತ್ತಾರೆ. ಆದರೆ ಪ್ಲಾನ್ ತಲೆಕೆಳಗಾದಾಗ ಅವರು ದಂಗಾಲಾಗಿ ಬಿಡುತ್ತಾರೆ. ಯಾರನ್ನೋ‌ ವಂಚಿಸಿದೆ ಎಂದು ಖುಷಿ ಪಡಬಾರದು ಹಾಗೇ ಮಾಡಿ. ಅವರಿಗೆ ಅದೇ ದೊಡ್ಡ ಶಿಕ್ಷೆ ಯಾಗುತ್ತದೆ.

ಸಾಕ್ಷಿ ಉಳಿಸದವರು
ಪ್ರೀತಿಯಲ್ಲಿ ವಂಚಿಸಲೇ ಬೇಕು ಎಂದು‌ ನಿರ್ಧರಿಸಿದರವರು ಯಾವುದೇ ಸಾಕ್ಷಿ, ಆಧಾರಗಳನ್ನು ಉಳಿಸಿ ಹೋಗಲು ಇಷ್ಟಪಡುವುದಿಲ್ಲ. ಹಾಗಿದ್ದಲ್ಲಿ ಅವರು ಪ್ರಿತಿಯ ದಿನಗಳಲ್ಲಿ ಕೊಟ್ಟಂತ ಗಿಫ್ಟ್ ಲೆಟರ್ಸ್, ಎಲ್ಲವನ್ನು ಅವರು ಕೇಳುವ ಮೊದಲೇ ಅವರಿಗೆ ಕೊಟ್ಟುಬಿಡಿ. ಪ್ರೀತಿಯೇ ಮುಗಿದ ಮೇಲೆ ಇವೆಲ್ಲಾ ಯಾಕೆ. ನೀನೇ ತೆಗೆದುಕೋ ಎಂದು ಸುಮ್ಮನಾಗಿ. ಇದನ್ನು ಅವರು ನಿಮ್ಮಿಂದ ನಿರೀಕ್ಷಿಸಿರುವುದಿಲ್ಲ. ಮಾನಸಿಕವಾಗಿ ಕುಸಿದು ಬಿಡುತ್ತಾರೆ.

ನಾವು ಮನುಷ್ಯರೇ ಅಲ್ಲವೇ? ನಮಗೂ ಸಿಟ್ಟು‌ ಬರತ್ತದೆ. ವಂಚಿಸಿ ಹೋದವರ ಬಾಳು ಹಾಳಾಗಲೆಂದು ಶಾಪ ಹಾಕುತ್ತೇವೆ. ಅದರ ಬದಲು ಅವರು ಎಲ್ಲಿಯಾದರೂ ಸಿಕ್ಕಾಗ‌‌ ಒಂದು ಸಣ್ಣ‌ ನಗೆ‌ ಚೆಲ್ಲಿರಿ. ಅವರು ಇದನ್ನು ನಿಮ್ಮಿಂದ ನಿರೀಕ್ಷಿಸಿರುವುದಿಲ್ಲ. ದ್ವೇಷಿಸುತ್ತೀರಿ ಎಂದುಕೊಂಡಿರುತ್ತಾರೆ. ತಲೆಕೆಳಗಾಗಿ ನಿಂತರೂ ಆ ನಗುವಿನ ಅರ್ಥ ಅವರಿಗೆ ತಿಳಿಯುವುದಿಲ್ಲ. ನಿಮ್ಮ ನಗುವೆಂಬ ಆಯುಧ ಅವರನ್ನು ಕ್ಷಣ ಕ್ಷಣಕ್ಕೂ ಇರಿಯುತ್ತದೆ.

ಅವರು ಬಿಟ್ಟು ಹೋದಮೇಲೆ ನೀವೇ ನಿಮ್ಮ ಶಿಸ್ತಿನ ಬದುಕನ್ನು ಅವರ ನೆನಪಲ್ಲಿ ಹಾಳುಮಾಡಿಕೊಳ್ಳುತ್ತೀರಿ. ಒಂಟಿಯಾಗಿ ಇರುವುದನ್ನೇ ಇಷ್ಟ ಪಡುತ್ತೀರಿ. ಕೆಲವೊಬ್ಬರು ಹುಚ್ಚರಂತಾಡುತ್ತಾರೆ. ಚಟಕ್ಕೆ ಬಲಿಯಾಗುತ್ತೀರಿ. ಇವುಗಳನ್ನು ಮಾಡುವುದರಿಂದ ನಿಮಗಾದ ಮೋಸದ ಪರ್ಸಂಟೇಜ್ ಕಡಿಮೆಯಾಗುತ್ತದೆಯೇ? ಬಿಟ್ಟು ಹೋದವರು ನಿಮ್ಮನ್ನು ನೋಡಿ ಅಯ್ಯೋ ಎನ್ನುತ್ತಾರೆಯೇ? ಖಂಡಿತ ಇಲ್ಲ. ಅಂದ ಮೇಲೆ ನೀವೇಕೆ ಅವರ ನೆನಪಲ್ಲಿ ಕೊರಗುತ್ತೀರಿ? ನಿಮ್ಮ ಬಿಟ್ಟು ಅವರೇ ಆರಾಮವಾಗಿರುವಾಗ ನಿಮ್ಮಿಂದ ಏಕಾಗುವುದಿಲ್ಲ? ನೀವು ಅವರಂತೆಯೇ ಆರಾಮಾಗಿ ಬದುಕಿ ತೋರಿಸಿ.

ನೀನೂ ಹೋಗುವುದು ಹೋಗು ಅಲ್ಲಿ ನಿನಗೇನಾದರೂ ತೊಂದರೆಯಾದರೆ ಬಂದುಬಿಡು ಎಂದೂ ನಿನಗಾಗಿ ಕಾಯುತ್ತಿರುತ್ತೇನೆ ಎಂಬ ಮಾತುಗಳನ್ನು ಎಂದಿಗೂ ಆಡಬೇಡಿ. ಪ್ರೀತಿಗೆ ಮಸಿ ಬಳಿದು ಹೋದವರು ಬಣ್ಣದ ಬದುಕನ್ನು ಬದುಕುತ್ತಿರುತ್ತಾರೆ. ನೀವೇಕೆ ಮೋಸಗಾರರಿಗಾಗಿ‌ ನಿಮ್ಮ ಸುಂದರ ಬದುಕನ್ನು ಸುಡುಗಾಡು ಮಾಡಿಕೊಳ್ಳುತ್ತೀರಿ? ಅವರಿಗಿಂತ ಹೆಚ್ಚು ಖುಷಿಯಿಂದ ಬದುಕಿ ತೋರಿಸಿರಿ. ಅವರು ನಿಮ್ಮನ್ನು ನೋಡಿ ಹೊಟ್ಟೆಉರಿದು ಕೊಳ್ಳಬೇಕು. ಇಂಥವರನ್ನು ನಾನೇಕೆ‌ ದೂರಮಾಡಿಕೊಂಡೆ? ಎಂದು ಜೀವನದ ಕೊನೆಯವರೆಗೂ ಕೊರಗ ಬೇಕು. ಇದೇ ಅವರಿಗೆ‌ ದೊಡ್ಡ‌ ಶಿಕ್ಷೆ.

-ಕಾವ್ಯಾ ಜಕ್ಕೊಳ್ಳಿ

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss