ಬೆಂಗಳೂರು: ಪ್ರೀತಿ ನಿರಾಕರಿಸಿದ್ದಕ್ಕಾಗಿ ಪ್ರೀತಿಸಿದವಳಿಗೆ ಬೆಂಕಿ ಹಚ್ಚಿ ಕೊಲೆ ಮಾಡಿರುವ ಘಟನೆ ಆಂಧ್ರಪ್ರದೇಶದ ವಿಜಯವಾಡದ ಗುಂಟೂರಿನಲ್ಲಿ ನಡೆದಿದೆ. ಸಾವನ್ನಪ್ಪಿದ ಯುವತಿಯನ್ನು ಚಿನ್ನಾರಿ ಎಂದು ಗುರುತಿಸಲಾಗಿದ್ದು, ಬೆಂಕಿ ಹಚ್ಚಿರುವ ಪಾಗಲ್ ಪ್ರೇಮಿಯನ್ನು ನಾಗಭೂಷಣ್ ಎಂದು ಗುರುತಿಸಲಾಗಿದೆ.
ಪ್ರೀತ್ಸೂ ಪ್ರೀತ್ಸೂ ಎಂದು ಅವಳ ಹಿಂದೆ ಬಿದ್ದಿದ್ದ. ಆದರೆ ಅವಳು ಅವನನ್ನು ನಿರಾಕರಿಸಿದ್ದಳು. ನಿರಾಕರಿಸಿದ್ದಕ್ಕಾಗಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಿದ್ದ. ಬೆಂಕಿ ಹಚ್ಚಿರುವ ಘಟನೆಯಲ್ಲಿ ನಾಗಭೂಷಣ್ ತೀವ್ರಗಾಯಗೊಂಡಿದ್ದು, ಗುಂಟೂರು ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಹಿಂದೆಯೂ ನಾಗಭೂಷಣ್ ಪ್ರೀತಿಸುವಂತೆ ಕಾಟಕೊಡುತ್ತಿದ್ದ. ಕಾಟ ತಾಳಲಾರದೆ ಚಿನ್ನಾರಿ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದರು. ಆಗ ಠಾಣೆಗೆ ಕರೆಸಿ ರಾಜಿ ಪಂಚಾಯಿತಿ ಮಾಡಿ ಯುವತಿಯ ತಂಟೆಗೆ ಹೋಗದಂತೆ ಎಚ್ಚರಿಕೆ ನೀಡಿದ್ದರು. ಆದರೂ ಅವನು ನಿನ್ನೆ ಚಿನ್ನಾರಿ ಮನೆಗೆ ಬಂದು ತನ್ನನ್ನು ಪ್ರೀತಿಸುವಂತೆ ಒತ್ತಾಯ ಮಾಡಿದ್ದ. ಒಪ್ಪಿಕೊಳ್ಳದಿದ್ದಾಗ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ.
ಈ ಘಟನೆಯಲ್ಲಿ ಚಿನ್ನಾರಿ ಸಾವನ್ನಪ್ಪಿದ್ದು, ನಾಗಭೂಷಣ್ ಘಟನೆಯಲ್ಲಿ ಗಾಯಗೊಂಡಿದ್ದು, ಪೊಲೀಸರು ಆಸ್ಪತ್ರಗೆ ದಾಖಲಿಸಿ ಮುಂದಿನ ಕ್ರಮ ಜರುಗಿಸಿದ್ದಾರೆ.