Saturday, July 2, 2022

Latest Posts

ಫಲಿತಾಂಶದ ಹಿನ್ನಡೆಗೆ ಶಿಕ್ಷಕರಷ್ಟೆ ಕಾರಣರೆ?

ಶಿಕ್ಷಣದ ಉದ್ದೇಶ, ಗುರಿಗಳು ಯಾವತ್ತೂ ಏಕಮುಖವಾಗಿ ಯಶಸ್ವಿಯಾಗಲು ಸಾಧ್ಯವಿಲ್ಲ. ವಿದ್ಯಾರ್ಥಿಗಳ ಜೀವನದಲ್ಲಿ ಎಸ್‌ಎಸ್‌ಎಲ್‌ಸಿ ಪ್ರಮುಖ ಘಟ್ಟವೇನೋ ಸರಿ. ಆದರೆ ಅದನ್ನು ಫಲಿತಾಂಶದ ಮೂಲಕವೇ ಅಳೆಯುವಂತದ್ದು ಎಷ್ಟು ಸರಿ? ನಮ್ಮ ಸಮಾಜದಲ್ಲಿ ವಿದ್ಯಾರ್ಥಿಗಳ ಪರೀಕ್ಷೆಯ ಫಲಿತಾಂಶ ಕುರಿತು ಒಂದು ಮಾತಿದೆ. ಪರೀಕ್ಷೆಯಲ್ಲಿ ಉನ್ನತ ದರ್ಜೆಯಲ್ಲಿ ಸ್ಥಾನ ಪಡೆದರೆ, “ಯಾರು ಹೆತ್ತ ಪುಣ್ಯಾತ್ಮನಪ್ಪ ನೀನು” ಅಂತಾರೆ; ಅದೇ ಮಗು ಫೇಲಾದರೆ “ಯಾರಲೇ ನಿನಗೆ ಪಾಠ ಮಾಡಿದ್ದು ಅಂತಾರೆ” ಈ ಮಾತು ತಮಾಷೆ ಎನಿಸಿದರೂ ವಾಸ್ತವಕ್ಕೆ ತುಂಬಾ ಹತ್ತಿರವಿದೆ. ಯಶಸ್ಸಿಗೆ ತಂದೆ ತಾಯಿ ಕಾರಣ, ವಿಫಲತೆಗೆ ಬಡಪಾಯಿ ಮೇಷ್ಟ್ರು ಕಾರಣ ಎನ್ನುವ ಮನೋಭಾವ ಕೆಲವರಲ್ಲಿದೆ. ಇದು ನಮ್ಮ ಸಮಾಜದ ವ್ಯವಸ್ಥೆಗೆ ಹಿಡಿದ ಕೈಗನ್ನಡಿ.

ಮಾರ್ಚ್, ಏಪ್ರಿಲ್ ಬಂತೆಂದರೆ ಎಲ್ಲೆಲ್ಲಿಯೂ ಪರೀಕ್ಷೆಯ ಒತ್ತಡ. ನಂತರ ಫಲಿತಾಂಶದ ಉದ್ವೇಗ. ಈ ಪರೀಕ್ಷೆ ಸಂದರ್ಭದಲ್ಲಿ ಶಿಕ್ಷಕರು, ವಿದ್ಯಾರ್ಥಿಗಳು, ಪೋಷಕರ ಮನೋಭಾವ ಮತ್ತು ಇಲಾಖೆಯ ನಿಯಮಾವಳಿಗಳ ಹಿನ್ನೆಲೆಯಲ್ಲಿ ಒಂದಿಷ್ಟು ಅವಲೋಕನ.
ಜಿಲ್ಲಾವಾರು ಮೊದಲ ಸ್ಥಾನ ಬರಲು ಜಿಲ್ಲೆಯ ಸಚಿವರು, ಶಾಸಕರು, ಜಿಲ್ಲಾ ಪಂಚಾಯಿತಿಯ ಅಧ್ಯಕ್ಷರು ಮೊದಲಾದ ಅಧಿಕಾರಿಗಳು ಉಪನಿರ್ದೇಶಕರ ಮೇಲೆ ಒತ್ತಡ ಹಾಕುತ್ತಾರೆ. ಉಪನಿರ್ದೇಶಕರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೇಲೆ ಒತ್ತಡ ಹಾಕುತ್ತಾರೆ.

ಶಿಕ್ಷಣಾಧಿಕಾರಿಗಳು ಶಿಕ್ಷಕರ ಮೇಲೆ ಒತ್ತಡ ಹಾಕುತ್ತಾರೆ. ಕೊನೆಗೆ ಶಿಕ್ಷಕರು ಮಕ್ಕಳ ಮೇಲೆ ಒತ್ತಡ ಹಾಕುತ್ತಾರೆ…. ಹೀಗೆ ಒಬ್ಬರ ಮೇಲೆ ಒಬ್ಬರು ಒತ್ತಡ ಹಾಕುವುದರಿಂದ ವಿವಿಧ ಮನೋಸಾಮರ್ಥ್ಯವನ್ನು, ಬುದ್ಧಿಶಕ್ತಿಯನ್ನು ಹೊಂದಿರುವ ಮಕ್ಕಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಮನೋವಿಜ್ಞಾನದ ಪ್ರಕಾರ ಪ್ರತೀ ಮಗುವೂ ತನ್ನದೇ ಆದ ಬೌದ್ಧಿಕ ಶಕ್ತಿಯನ್ನು ಹೊಂದಿರುತ್ತದೆ. ಕೆಲವರ ಅನುವಂಶೀಯ ಕಾರಣದಿಂದ ಮತ್ತು ಮನೆಯ ಪರಿಸರದ ಕಾರಣದಿಂದ ಮಕ್ಕಳ ಕಲಿಕಾ ಸಾಮರ್ಥ್ಯಗಳು ಬದಲಾಗುತ್ತವೆ. ಒಂದೇ ತರಗತಿಯಲ್ಲಿ ಓದುವ ಸಮಾನ ವಯಸ್ಕರಾದ ಮಾತ್ರಕ್ಕೆ ಎಲ್ಲಾ ಮಕ್ಕಳು ಸಮಾನ ಬುದ್ಧಿಶಕ್ತಿಯನ್ನು ಹೊಂದಿರಲು ಸಾಧ್ಯವಿಲ್ಲ.

ಇನ್ನು ಆಂಗ್ಲ ಮಾಧ್ಯಮದ ವಿದ್ಯಾರ್ಥಿಗಳು ಹಾಗೂ ಕನ್ನಡ ಮಾಧ್ಯಮ ವಿದ್ಯಾರ್ಥಿಗಳ ನಡುವೆ ಒಂದೇ ರೀತಿಯ ಫಲಿತಾಂಶವನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಆಂಗ್ಲ ಮಾಧ್ಯಮದ ಶಾಲೆಗಳ ಫಲಿತಾಂಶ ಸಹಜವಾಗಿಯೇ ಶೇಕಡಾ 90ಕ್ಕಿಂತ ಹೆಚ್ಚಿರುತ್ತದೆ. ಪೋಷಕರು ತಮ್ಮ ಮಕ್ಕಳು ಅಭ್ಯಾಸದಲ್ಲಿ ಮುಂದಿದ್ದಾನೆ ಎಂದರೆ ಅವನನ್ನು ಆಂಗ್ಲ ಮಾಧ್ಯಮಕ್ಕೆ ಪ್ರವೇಶ ಮಾಡಿಸುತ್ತಾರೆ. ಇಲ್ಲಿ ವಿದ್ಯಾರ್ಥಿಗಳ ಪೋಷಕರೂ ಸಹ ಹೆಚ್ಚಿನ ಜವಾಬ್ದಾರಿಯನ್ನು ವಹಿಸಿಕೊಂಡು ತಮ್ಮ ಮಕ್ಕಳ ಭವಿಷ್ಯಕ್ಕೆ ಶ್ರಮ ವಹಿಸುತ್ತಾರೆ. ಉನ್ನತ ಸ್ಥಾನದಲ್ಲಿ ಉತ್ತೀರ್ಣರಾದ ಆಂಗ್ಲ ಮಾಧ್ಯಮದ ಶಾಲೆ (ಮುಖ್ಯವಾಗಿ ಅನುದಾನರಹಿತಶಾಲೆ) ಯ ಮಕ್ಕಳ ಫಲಿತಾಂಶ ನೋಡಿದಾಗ ಸಮಾಜವೂ ಆ ಶಾಲೆಯನ್ನು ಪ್ರಶಂಸಿಸುತ್ತದೆ. ಅದೇ ಸರ್ಕಾರಿ, ಅನುದಾನಿತ ಶಾಲೆಯ ಕನ್ನಡ ಮಾಧ್ಯಮದ ಮಕ್ಕಳು ಉನ್ನತ ದರ್ಜೆಯಲ್ಲಿ ಉತ್ತೀರ್ಣರಾದರೆ ಅದರ ಸಂಪೂರ್ಣ ಕ್ರೆಡಿಟ್ ಮಕ್ಕಳಿಗೆ ಮಾತ್ರ. ಶಾಲೆಗಳಿಗಲ್ಲ. ‘ಕನ್ನಡ ಮಾಧ್ಯಮದ ಶಾಲೆಗಳಲ್ಲಿ ಓದಿ ಎಷ್ಟು ಅಂಕ ತೆಗೆದಿದ್ದಾನೆ, ನೋಡಿ!’ ಎಂಬ ವಿಶೇಷ ಪ್ರಶಂಸೆ ಆ ವಿದ್ಯಾರ್ಥಿಗೆ. ಶಾಲೆ, ಶಿಕ್ಷಕರು ಇಲ್ಲಿ ನಗಣ್ಯ. ಇದರರ್ಥ ಕನ್ನಡ ಮಾಧ್ಯಮದಲ್ಲಿ ಎಲ್ಲವೂ ಕಳಪೆ, ಅದರ ನಡುವೆ ನಮ್ಮ ಮಕ್ಕಳು ಗೆದ್ದರು ಎನ್ನುವ ಮನೋಭಾವವನ್ನು ಇಂದಿನ ಸಮಾಜದಲ್ಲಿ ನೋಡುವಂತಾಗಿದೆ.
ಖಾಸಗಿ ಶಾಲೆಗಳಲ್ಲಿ ಕಟ್ಟಡದ ಆಕರ್ಷಣೆ, ಡಿಜಿಟಲ್ ಕ್ಲಾಸ್, ಸ್ಮಾರ್ಟ್‌ಕ್ಲಾಸ್, ಆಕರ್ಷಕ ಡ್ರೆಸ್‌ಕೋಡ್, ಬಸ್‌ಗಳ ವ್ಯವಸ್ಥೆ, ಅದ್ದೂರಿ ವಾರ್ಷಿಕೋತ್ಸವ ಸಮಾರಂಭ, ಇವೆಲ್ಲದರಿಂದ ಪೋಷಕರು ಸಹಜವಾಗಿ ಆಕರ್ಷಕರಾಗುತ್ತಾರೆ. ಹಾಗಂತ ಖಾಸಗಿ ಶಾಲೆಗಳಲ್ಲಿ ಬೋಧನೆ ಪರಿಣಾಮಕಾರಿ ಆಗಿರುವುದಿಲ್ಲ ಎಂದಲ್ಲ. ಇಲ್ಲಿಗೆ ಸೇರುವ ಮಕ್ಕಳೇ ಓದಿನಲ್ಲಿ ಚುರುಕಾಗಿರುವುದರಿಂದ ಶಾಲೆಯಲ್ಲಿ ಸ್ವಲ್ಪವೇ ಬೋಧನೆಯ ಟಿಪ್ಸ್ ಸಿಕ್ಕರೆ ಸಾಕು ತಮ್ಮಷ್ಟಕ್ಕೇ ತಾವೇ ಫಲಿತಾಂಶದ ಪ್ರಗತಿಗೆ ಶ್ರಮಿಸುತ್ತಾರೆ. ಬಹುತೇಕ ಖಾಸಗಿ ಆಂಗ್ಲ ಮಾಧ್ಯಮದ ಶಾಲೆಗಳಲ್ಲಿ ಸಾಧಾರಣ ಬುದ್ಧಿವಂತಿಕೆಗಿಂತ ಕೆಳಮಟ್ಟದ ವಿದ್ಯಾರ್ಥಿಗಳಿಗೆ ಪ್ರವೇಶವನ್ನು ನೀಡುವುದಿಲ್ಲ. ಶಾಲಾ ಪ್ರವೇಶ ಪರೀಕ್ಷೆಯಲ್ಲಿ ಅರ್ಹತೆ ಇದ್ದರೆ ಮಾತ್ರ ದಾಖಲಾತಿ. ಇಲ್ಲಿ ಓದಲೇಬೇಕೆಂದು ಯಾರಾದರೂ ವಿದ್ಯಾರ್ಥಿ ಒತ್ತಡ ತಂದರೆ ಕೆಲವು ಷರತ್ತುಗಳು ಅನ್ವಯವಾಗುತ್ತವೆ. ಸಾಕಷ್ಟು ಡೊನೇಷನ್ ಪಡೆದ ಶಾಲೆ ಆ ವಿದ್ಯಾರ್ಥಿಯ ಪ್ರಗತಿ ಒಂದು ವರ್ಷದಲ್ಲಿ ಸುಧಾರಣೆ ಆಗದಿದ್ದರೆ ವರ್ಗಾವಣೆ ಪತ್ರವನ್ನು ಕೊಟ್ಟು ಬೇರೆ ಶಾಲೆಗೆ ಕಳಿಸುವಂತಹ ನಿಯಮ. ಹೀಗಾಗಿ ಬುದ್ಧಿವಂತ ಮಕ್ಕಳನ್ನೇ ಸೇರಿಸಿಕೊಂಡು ಶೇ. 100ರಷ್ಟು ಫಲಿತಾಂಶ. ಎಲ್ಲರೂ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣ!

ಆದರೆ ಕನ್ನಡ ಮಾಧ್ಯಮಕ್ಕೆ ಬರುವ ಮಕ್ಕಳ ಸ್ಥಿತಿ ಇದಕ್ಕೆ ಭಿನ್ನವಾಗಿರುತ್ತದೆ. ಓದುವ ಮಕ್ಕಳಲ್ಲಿ ಶೇಕಡಾ 90ರಷ್ಟು ಆಂಗ್ಲ ಮಾಧ್ಯಮದ ಖಾಸಗಿ ಶಾಲೆಗಳ ಪಾಲು. ಉಳಿದ ಶೇಕಡಾ 10ರಷ್ಟು ಮಕ್ಕಳು ಹಾಗೂ ಕಲಿಕೆಯಲ್ಲಿ ಹಿಂದುಳಿದ ಮಕ್ಕಳು, ಸಮಸ್ಯಾತ್ಮಕ ಮಕ್ಕಳು, ಆಂಗ್ಲ ಮಾಧ್ಯಮದಲ್ಲಿ ತಿರಸ್ಕೃತಗೊಂಡ ಮಕ್ಕಳು ಕನ್ನಡ ಮಾಧ್ಯಮದ ಪಾಲು. ಹೀಗಿದ್ದರೂ ಇದನ್ನು ಸವಾಲಾಗಿ ಸ್ವೀಕರಿಸಿರುವ ಶಿಕ್ಷಕ ಸಮೂಹ ಯಾವುದೇ ಸಮಸ್ಯೆಗಳ ನೆಪ ಹೇಳಿ ಹಿಮ್ಮೆಟ್ಟಿಲ್ಲ. ಇರುವ ವ್ಯವಸ್ಥೆಯಲ್ಲೇ ಮಾಹಿತಿ ತಂತ್ರಜ್ಞಾನ ಬಳಸಿ, ಮಕ್ಕಳಿಂದ ನಿರಂತರ ಕಲಿಕೆ ಪ್ರಯತ್ನ ಮಾಡಿ ಮುನ್ನುಗ್ಗುವ ಪ್ರಯತ್ನದಲ್ಲಿದ್ದಾರೆ. ಇಲ್ಲಿ ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುವುದನ್ನು ಬಿಟ್ಟರೆ ತಮ್ಮ ಮಕ್ಕಳ ವಿದ್ಯಾಭ್ಯಾಸದ ಪ್ರಗತಿಯ ಬಗ್ಗೆ ಹೆಚ್ಚಿನ ಗಮನ ಹರಿಸುವುದು ತುಂಬಾ ವಿರಳ. ಹೀಗಿದ್ದಾಗ ಎಲ್ಲಾ ಶಾಲೆಯ ಮಕ್ಕಳನ್ನು ಒಂದೇ ಹಂತದಲ್ಲಿ ಇಟ್ಟು ನೋಡುವುದು ಎಷ್ಟು ಸರಿ?

ಹಾಗಂತ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳೆಲ್ಲಾ ದಡ್ಡರು ಅಂತಲ್ಲ. ಆಂಗ್ಲ ಮಾಧ್ಯಮದ ವಿದ್ಯಾರ್ಥಿಗಳಿಗೆ ಹೋಲಿಸಿದರೆ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳು ಮನೆಯ ಪರಿಸರ, ನಿರಾಸಕ್ತಿ, ಪೋಷಕರ ನಿರ್ಲಕ್ಷದಿಂದ ಕಲಿಕೆಯಲ್ಲಿ ಹಿಂದುಳಿಯುವಂತಹ ಪರಿಸ್ಥಿತಿ ಹೆಚ್ಚಾಗುತ್ತಿದೆ. ಈ ಎಲ್ಲಾ ಕಾರಣದಿಂದ ಎಸ್‌ಎಸ್‌ಎಲ್‌ಸಿ ಫಲಿತಾಂಶವನ್ನು ರಾಜ್ಯದಾದ್ಯಂತ ಒಂದೇ ಅಳತೆಗೋಲಿನಿಂದ ನೋಡುವುದು ಸರಿಯಲ್ಲ. ಜಗತ್ತಿನಲ್ಲಿ ಯಾವುದೇ ವಿಷಯವನ್ನು ತೆಗೆದುಕೊಂಡರೂ ಶೇಕಡಾ ನೂರರಷ್ಟು ಪರಿಪೂರ್ಣತೆ ಸಿಗಲಾರದು. ಹಾಗಿದ್ದೂ ವಿದ್ಯಾರ್ಥಿಗಳ ಫಲಿತಾಂಶದ ವಿಷಯದಲ್ಲಿ ಮಾತ್ರ ಶೇಕಡಾ ನೂರರಷ್ಟು ಸಾಧನೆ ಎನ್ನುವುದು ಸರಿಯಲ್ಲವೇನೋ? ಇಷ್ಟೆಲ್ಲಾ ಭಿನ್ನತೆಗಳ ನಡುವೆ ಪ್ರತೀ ಬಾರಿಯೂ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶಕ್ಕೆ ನೇರವಾಗಿ ಶಿಕ್ಷಕರನ್ನು ಹೊಣೆಗಾರರನ್ನಾಗಿ ಮಾಡಲಾಗುತ್ತಿದೆ. ಈ ಮೂಲಕ ಅಧಿಕಾರಿಗಳು, ಇಲಾಖೆ ಶಿಕ್ಷಕರ ತೇಜೋವಧೆ ಮಾಡುವುದು ಎಷ್ಟು ಸರಿ? ಒಂದು ಪ್ರಾಣಿ ನೀರು ಕುಡಿಯಬೇಕೆಂದರೆ ಅದನ್ನು ನೀರಿನ ಬಳಿ ಕರೆದುಕೊಂಡು ಹೋಗಬಹುದೇ ಹೊರತು, ಆ ಪ್ರಾಣಿಯ ಬದಲು ಕರೆದುಕೊಂಡು ಹೋದವರು ನೀರು ಕುಡಿಯಲು ಆಗದು. ಕನಿಷ್ಟ ಆ ಪ್ರಾಣಿ ನೀರು ಕುಡಿಯುವ ಪ್ರಯತ್ನವನ್ನಾದರೂ ಮಾಡಬೇಕಾದ್ದು ಅನಿವಾರ್ಯ. ಹಾಗೆಯೇ ವಿದ್ಯಾರ್ಥಿಗಳ ಉತ್ತಮ ಕಲಿಕಗೆ ಶಕ್ತಿ ಮೀರಿ ಶ್ರಮಿಸುತ್ತಿದ್ದಾರೆ ಬಹಳಷ್ಟು ಶಿಕ್ಷಕರು. ಬೆರಳೆಣಿಕೆಯಷ್ಟು ಶಿಕ್ಷಕರು ಶಾಲಾ ಕರ್ತವ್ಯವನ್ನು ಬಿಟ್ಟು ಚೀಟಿ, ಬಡ್ಡಿ, ತೋಟ, ಸೈಟ್, ಮನೆ, ವ್ಯವಹಾರ, ರಾಜಕೀಯ… ಹೀಗೆ ವಿವಿಧ ಕೆಲಸಗಳಲ್ಲಿಯೇ ಬಹುತೇಕ ಸಮಯವನ್ನು ಕಳೆಯುಂತಹ ಇರಬಹುದು! ಇಂತಹವರಿಂದ ಕೆಲವು ಶಾಲೆಗಳಲ್ಲಿ ಮಕ್ಕಳ ಫಲಿತಾಂಶದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿರುವುದು ವಾಸ್ತವ ಸಂಗತಿ.

ಇನ್ನು ಸರ್ಕಾರ ಕನ್ನಡ ಮಾಧ್ಯಮದ ಶಾಲೆಗಳ ಉಳಿವಿಗೆ ಹತ್ತು ಹಲವು ಉಚಿತ ಯೋಜನೆಗಳನ್ನು ಜಾರಿಗೆ ತಂದಿದೆ. ಬಿಗಿಯಾಗಿ ಶಿಸ್ತು ಜಾರಿಗೆ ತರಲು ತೊಡಕಾಗುವ ಮತ್ತು ಶಿಕ್ಷಕರ ಮೇಲೆ ಪೋಷಕರಿಗೆ ಅಗೌರವ ಮೂಡಿಸುವ ಕೆಲವು ನಿಯಮಗಳು. ಸಾಮಾನ್ಯವಾಗಿ ಸಮಾಜದ ಬಹುತೇಕ ಜನರಿಗೆ ಸುಲಭವಾಗಿ, ಅಗ್ಗವಾಗಿ ಸಿಗುವ ಯಾವ ವಸ್ತುಗಳ ಬಗ್ಗೆಯೂ ಗೌರವಕ್ಕಿಂತ ಅಸಡ್ಡೆಯೇ ಹೆಚ್ಚು. ಕನ್ನಡ ಮಾಧ್ಯಮದ ಶಾಲೆಗಳ ಉಚಿತ ವ್ಯವಸ್ಥೆಗಳನ್ನು ಶಾಲೆಗಳ ಗುಣಾತ್ಮಕತೆಯೊಂದಿಗೆ ಹೋಲಿಸಿ ನೋಡುವ ಪರಿಪಾಟ ಬೆಳೆದು ನಿಂತಿದೆ. ಆದರೆ ಈ ಯಾವುದೇ ಸೂಕ್ಷ್ಮಗಳನ್ನು ಗಮನಿಸದ ಸಮಾಜ ಮತ್ತು ಇಲಾಖೆ ಎಲ್ಲದಕ್ಕೂ ಬೋಧಕ ವರ್ಗವನ್ನೇ ಹೊಣೆ ಮಾಡುತ್ತಿದೆ. ಬುದ್ಧಿವಂತರನ್ನು ಆಯ್ಕೆ ಮಾಡಿಕೊಂಡು ಶೇ. 100ರಷ್ಟು ಫಲಿತಾಂಶ ಪಡೆಯುವ ಶಾಲೆಗಳ ನಡುವೆ ಸಾಧಾರಣ, ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳೊಂದಿಗೆ ಶೇ. 50ರಷ್ಟು ಫಲಿತಾಂಶ ನೀಡುವ ಶಾಲೆಗಳು ಹೆಚ್ಚು ಗೌರವಕ್ಕೆ ಪಾತ್ರವಾಗುತ್ತವೆ ಎನ್ನುವುದು ನನ್ನ ಅನಿಸಿಕೆ. ಇಂತಹ ಹಲವಾರು ಭಿನ್ನತೆಯ ಅಂಶಗಳ ಬಗ್ಗೆ ಇಲಾಖೆಯು ಚಿಂತಿಸಿ ಅದಕ್ಕೆ ತಕ್ಕಂತೆ ಫಲಿತಾಂಶದ ನಿಯಮಾವಳಿಗಳನ್ನು ರೂಪಿಸುವುದು ಅಗತ್ಯವಿದೆ ಎನಿಸುತ್ತದೆ.

-ಗಿರಿಜಾಶಂಕರ್ ಜಿ.ಎಸ್.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss