Tuesday, July 5, 2022

Latest Posts

ಫಲ ನೀಡಿತ್ತು ಪಕ್ಷಿಕೆರೆ ಯುವಕರಿಂದ ಕಿಂಡಿ ಅಣೆಕಟ್ಟು ನಿರ್ಮಾಣ: ಈಗ ಬೆಳೆಗಳಿಗೆ ಹರಿಯುತ್ತಿದೆ ಭರಪೂರ ನೀರು!

ಮೂಲ್ಕಿ: ಸಮಾನ ಮನಸ್ಕ ಯುವಕರು ಒಗ್ಗಟ್ಟಾಗಿ ಯಾವುದೇ ಸಮಸ್ಯೆಯನ್ನು ಕೂಡ ಸುಲಭದಲ್ಲಿ ಪರಿಹರಿಸಿ ಗ್ರಾಮವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಬಹುದು ಎಂದು ಮೂಲ್ಕಿ ಪಕ್ಷಿಕೆರೆ ಶ್ರೀ ವಿನಾಯಕ ಮಿತ್ರ ಮಂಡಳಿ ಸದಸ್ಯರು ಸಾಧಿಸಿ ತೋರಿಸಿದ್ದಾರೆ.

ನೀರಿನ ಮಟ್ಟವನ್ನು ಹೆಚ್ಚಳ: ನವೆಂಬರ್- ಡಿಸೆಂಬರ್ ತಿಂಗಳು ಬಂತೆಂದರೆ ಗ್ರಾಮೀಣ ಪ್ರದೇಶದಲ್ಲಿನ ರೈತರು ಸುಗ್ಗಿ ಕೊಳಕೆ ಬೆಳೆಗೆ ಸಿದ್ಧರಾಗುತ್ತಾರೆ. ಈ ತಿಂಗಳಲ್ಲಿ ನೀರಿನ ಮಟ್ಟ ಕಡಿಮೆಯಾಗುವುದರಿಂದ ಕಿಂಡಿ ಅಣೆಕಟ್ಟಿಗೆ ಹಲಗೆ ಹಾಕಿ ನೀರಿನ ಮಟ್ಟವನ್ನು ಹೆಚ್ಚಿಸಿ ಕೃಷಿ ಭೂಮಿಗೆ ನೀರುಣಿಸುವ ಕಾರ್ಯದಲ್ಲಿ ತೊಡಗುತ್ತಾರೆ.

ಎಸ್ ಕೋಡಿ ಕಂಬಳಬೆಟ್ಟು ಪರಿಸರದಿಂದ ಹರಿದು ಬರುತ್ತಿರುವ ತೋಡು ನೀರು 10ನೇ ತೋಕೂರು ಗ್ರಾಮದ ಲೀಲಾ ಮನೆ ಬಳಿ ಪರಂಬೋಕು ತೋಡಿನಲ್ಲಿ ನೀರು ಸರಿಯಾಗಿ ಶೇಖರಣೆ ಆಗದೆ ಕಳೆದ ಒಂದು ದಶಕದಿಂದ ಇಲ್ಲಿನ ಕೃಷಿ ಆಧಾರಿತ ಕುಟುಂಬಗಳು ನೀರಿಗಾಗಿ ಬವಣೆ ಪಡುವಂತಾಗಿತ್ತು. ಸುಮಾರು ಮೂವತ್ತು ವರ್ಷಗಳ ಹಿಂದೆಯೇ ರೈತಾಪಿ ವರ್ಗದವರು ಸೇರಿ ತಮ್ಮ ಸ್ವಂತ ಖರ್ಚಿನಿಂದ ಕಾವೇರಿ ಸಂಕ್ರಮಣದ ದಿನದಂದು ಸಂಪ್ರದಾಯ ಬದ್ಧವಾಗಿ ಕಟ್ಟ ಕಟ್ಟುತ್ತಿದ್ದರು. ಕೃಷಿಕರಿಂದಲೇ ತುಂಬಿರುವ ಗ್ರಾಮಕ್ಕೆ ನೀರಿನ ಆಸರೆ ಇದುವೇ ಆಗಿತ್ತು. ಜನರ ಬವಣೆಯನ್ನು ಅರಿತ ಪಂಚಾಯತ್ ಆಡಳಿತ ಗ್ರಾಮಸ್ಥರ ಆಶಯದಂತೆ ಸಾರ್ವಜನಿಕರ ಸಹಕಾರ ಹಾಗೂ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಿಂದ ಪರಂಬೋಕು ತೋಡಿಗೆ ನಾಲ್ಕು ಲಕ್ಷ ತೊಂಬತ್ತಾರು ಸಾವಿರ  ವೆಚ್ಚದಲ್ಲಿ ಕಾಮಗಾರಿ ನಡೆದು ಲೋಕಾರ್ಪಣೆಗೊಂಡಿದೆ.

ಹೆಚ್ಚಾದ ರೈತರ ಆತ್ಮವಿಶ್ವಾಸ: ಪಂಚಾಯತ್ ಮನವಿ ಮತ್ತು ಸಹಕಾರದಲ್ಲಿ ಪಕ್ಷಿಕೆರೆ ಶ್ರೀ ವಿನಾಯಕ ಮಿತ್ರ ಮಂಡಳಿ ಸದಸ್ಯರು ತೋಕೂರು ಗ್ರಾಮದ ಈ ಪ್ರಮುಖ ಕಿಂಡಿ ಅಣೆಕಟ್ಟು ನಿರ್ಮಾಣ ಹಾಗೂ ಹಲಗೆ ಹಾಕಿ ಶ್ರಮದಾನ ನಡೆಸಿ, ರೈತಾಪಿ ಕುಟುಂಬಗಳಲ್ಲಿ ಆತ್ಮವಿಶ್ವಾಸ ಭರಿಸುವ ಕೆಲಸ ಮಾಡಿದ್ದಾರೆ.

ಅಣೆಕಟ್ಟು ರಚಿಸಿ ನೀರು ಸಂಗ್ರಹ: ಜಲಸಾಕ್ಷರತೆಗೆ ಪಣತೊಟ್ಟ ಪಕ್ಷಿಕೆರೆಯ ಶ್ರೀ ವಿನಾಯಕ ಮಿತ್ರ ಮಂಡಳಿ ಸದಸ್ಯರು ಕೂಲಿಯಾಳಾಗಿ ಶ್ರಮದಾನ ಮಾಡಿದ್ದು, ಹತ್ತಿರದ ಗ್ರಾಮಗಳಲ್ಲಿ ಅಲ್ಲಲ್ಲಿ ಶ್ರಮದಾನದ ಮೂಲಕ ಅಣೆಕಟ್ಟು ರಚಿಸಿ ಜಲಸಾಕ್ಷರತೆಯಲ್ಲಿ ತೊಡಗಿಕೊಂಡಿದ್ದಾರೆ. 56 ಮಂದಿ ಸದಸ್ಯರಿದ್ದು ಇದರಲ್ಲಿ ಮೂವತ್ತರಷ್ಟು ತರುಣರು ಶಾಲಾ ಕಾಲೇಜು ವಿದ್ಯಾರ್ಥಿಗಳಾಗಿದ್ದಾರೆ. ತಮ್ಮೂರಿನ ಜನರ ಮೇಲಿನ ಅಪಾರ ಕಾಳಜಿಯಿಂದ ಕಟ್ಟ ಕಟ್ಟಿ ನೀರು ಸೋರಿ ಹೋಗದಂತೆ ಚಾಕಚಕ್ಯತೆಯಿಂದ ಹಾಕಲಾದ ಕಟ್ಟ, ಮಳೆಗಾಲದಲ್ಲಿ ಹಲಗೆಗಳನ್ನು ತೆಗೆಯುವವರೆಗೂ ಹಾಗೆಯೇ ಗಟ್ಟಿಯಾಗಿ ಇರುತ್ತದೆ ಎಂಬ ವಿಶ್ವಾಸವನ್ನು ಗ್ರಾಮಸ್ಥರು ವ್ಯಕ್ತಪಡಿಸಿದ್ದಾರೆ.

ಜಲಕ್ಷಾಮ ನಿವಾರಣೆ: ಪಡುಪಣಂಬೂರು ಗ್ರಾ. ಪಂ.ವ್ಯಾಪ್ತಿಯಲ್ಲಿ ಆರು ಕಿಂಡಿ ಅಣೆಕಟ್ಟುಗಳು ನಿರ್ಮಾಣವಾಗಿದೆ. ಸಮೃದ್ಧ ನೀರಿನ ಒರತೆ ಹೊಂದಿರುವ ಜಲಮೂಲಗಳಲ್ಲಿ ಬಾಂದ ಕೆರೆ, ಭೀಮ ಕೆರೆ, ಕತ್ತರಿ ಕೆರೆ ಪ್ರಮುಖವಾದವು. ಸಾಮಂತ ಅರಸರ ಕಾಲದಲ್ಲಿ ಮೂರು ಬೆಳೆಗಳಿಗೆ ನೀರು ಹರಿಸುತ್ತಿದ್ದ ಕೆರೆಗಳು ಹಾಗೂ ರಾಜ ಕಾಲುವೆಗಳು ಬಳಿಕ ಸಾರ್ವಜನಿಕರ ಅವಗಣನೆಗೆ ಪಾತ್ರವಾಗಿದ್ದು, ಇಂದಿಗೂ ತನ್ನ ಒರತೆ ಉಳಿಸಿಕೊಂಡಿರುವ ಈ ಕೆರೆಗಳನ್ನು ಅಭಿವೃದ್ಧಿಪಡಿಸಿದಲ್ಲಿ ಪಡುಪಣಂಬೂರು ಮಾತ್ರವಲ್ಲದೆ ಹತ್ತಿರದ ಅನೇಕ ಗ್ರಾಮಗಳ ಜಲ ಕ್ಷಾಮ ನಿವಾರಿಸಲು ಸಹಕಾರಿಯಾಗಲಿದೆ.

ಶ್ಲಾಘನೀಯ: ನೀರಿನ ಬಗ್ಗೆ ನಿರಂತರವಾಗಿ ಜಾಗೃತಿ ಮೂಡಿಸಿದ್ದರಿಂದ ಯುವಸೇವಾ ಸಂಸ್ಥೆಗಳೇ ನಮ್ಮನ್ನು ಸಂಪರ್ಕಿಸಿ ಕಿಂಡಿ ಅಣೆಕಟ್ಟುಗಳನ್ನು ನಿರ್ವಹಿಸಲು ಮುಂದೆ ಬಂದಿವೆ. ಗ್ರಾಮದಲ್ಲಿರುವ ಕಿಂಡಿ ಅಣೆಕಟ್ಟನ್ನು ಸೇವಾ ಸಂಸ್ಥೆಗಳೇ ರಚನೆ ನಿರ್ವಹಣೆ ನಡೆಸಲು ಮುಂದೆ ಬಂದಿರುವುದು ಶ್ಲಾಘನೀಯ.
-ಮೋಹನ್ದಾಸ್ ಅಧ್ಯಕ್ಷ ಪಡುಪಣಂಬೂರು ಗ್ರಾಮ ಪಂಚಾಯತ್

ಒಳ ಅರಿವು ಹೆಚ್ಚಳ: ಸುತ್ತಮುತ್ತಲಿನ 20 ಎಕರೆ ವ್ಯಾಪ್ತಿಯ ಭೂಮಿಯಲ್ಲಿ ನೀರಿನ ಒಳ ಅರಿವು ಹೆಚ್ಚಾಗಿ ಬಾವಿ, ಕೊಳವೆ ಬಾವಿಗಳಲ್ಲಿಯೂ ಜಲ ಸಂಗ್ರಹಣೆ ಪ್ರಗತಿ ಸಾಧಿಸಿದೆ. ಏಪ್ರಿಲ್, ಮೇ ತಿಂಗಳಿನಲ್ಲಿಯೇ ಮಂಗಳೂರು ಸಹಿತ ಮೂಲ್ಕಿ ಹೋಬಳಿಯ ಅನೇಕ ಕಡೆ ಗಳಲ್ಲಿ ಕುಡಿಯುವ ನೀರಿನ ಹಾಹಾಕಾರ ಕೇಳಿಬಂದರೂ, ಇಲ್ಲಿ ಆ ಸಮಸ್ಯೆ ಇಲ್ಲ. ಸುಮಾರು 200 ಮೀ. ಉದ್ದಕ್ಕೆ ತೋಡಿನಲ್ಲಿ ನೀರಿನ ಭರಪೂರ ಶೇಖರಣೆಯಾಗಿದೆ. ಸುಮಾರು 5 ಅಡಿ ಎತ್ತರದಷ್ಟು ನೀರು ತುಂಬಿಕೊಂಡಿದೆ. ಇಷ್ಟರಲ್ಲೇ ಬತ್ತಿ ಹೋಗ ಬೇಕಾಗಿದ್ದ ಈ ಪರಿಸರದ 40 ಕ್ಕೂ ಹೆಚ್ಚು ಬಾವಿಗಳು ಮತ್ತು ಕೆರೆಗಳಿಗೆ ಅಂತರ್ಜಲದ ಮೂಲಕ ನೀರಿನ ಮರು ಪೂರಣವಾಗಿದ್ದು ಇಲ್ಲಿನ ಬಾವಿಗಳು ತುಂಬಿವೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss