ಮಂಗಳೂರು: ಲಾಕ್ ಡೌನ್ ಸಡಿಲಿಕೆ ದ.ಕ. ಜಿಲ್ಲೆಗೆ ಮಾರಕವಾಗುತ್ತಿದೆ? ಈಗಿನ ಪರಿಸ್ಥಿತಿ ನೋಡಿದರೆ ಹೌದು ಅನಿಸುತ್ತಿದೆ. ಕೊರೋನಾದಿಂದ ಜಿಲ್ಲೆ ಮುಕ್ತವಾಗುವ ಲಕ್ಷಣ ಸದ್ಯಕ್ಕಂತೂ ಕಾಣಿಸುತ್ತಿಲ್ಲ.
ಮಂಗಳೂರಿನಲ್ಲಿ ಬುಧವಾರ ಮೂರು ಕೊರೋನಾ ಪಾಸಿಟಿವ್ ಕಂಡುಬಂದರೆ ಎರಡೇ ದಿನಗಳ ಅಂತರದಲ್ಲಿ ಮತ್ತೆ 3 ಪಾಸಿಟಿವ್ ಕಂಡು ಬಂದಿರುವುದು ಅಚ್ಚರಿ ತಂದಿದೆ. ಜಿಲ್ಲೆಯಲ್ಲಿ ಶನಿವಾರ ಬಂಟ್ವಾಳದ ಒಂದೇ ಕುಟುಂಬದ ಮೂವರಿಗೆ ಕೊರೋನಾ ಸೋಂಕು ದೃಢಪಟ್ಟಿದೆ.
ಬಂಟ್ವಾಳದ ಏ.19ರಂದು ಮೃತಪಟ್ಟ ಮಹಿಳೆಯಿಂದ ಸೋಂಕು ಅಂಟಿಸಿಕೊಂಡಿದ್ದ ನೆರೆಮನೆಯ ಹಾಗೂ ಸಂಬಂಧಿಕರಾಗಿರುವ 69 ವರ್ಷದ ವೃದ್ದನಿಂದ ಈಗ ಸೋಂಕು ಹರಡಿದೆ. ವೃದ್ಧನಿಗೆ ಪಾಸಿಟಿವ್ ಆಗಿದ್ದ ಹಿನ್ನೆಲೆಯಲ್ಲಿ ಆ ಮನೆಯ 8 ಜನರನ್ನು ಕ್ವಾರಂಟೈನ್ ಮಾಡಲಾಗಿತ್ತು. ಈ ಪೈಕಿ 30 ವರ್ಷದ ಪುರುಷ, 60 ವರ್ಷ ಹಾಗೂ 70 ವರ್ಷದ ಮಹಿಳೆಯರಿಗೆ ಸೋಂಕು ದೃಢಪಟ್ಟಿದೆ.
ಜಿಲ್ಲೆಯಲ್ಲಿ ಈಗ ಸಕ್ರಿಯ ಪ್ರಕರಣಗಳ ಸಂಖ್ಯೆ 15ಕ್ಕೆ, ಒಟ್ಟು ಪಾಸಿಟಿವ್ ಪ್ರಕರಣಗಳ ಸಂಖ್ಯೆ 31ಕ್ಕೆ ಏರಿಕೆಯಾಗಿದೆ. ಈ ಪೈಕಿ 13 ಮಂದಿ ಗುಣಮುಖರಾಗಿದ್ದು, ಮೂವರು ಮೃತಪಟ್ಟಿದ್ದಾರೆ.