Wednesday, August 10, 2022

Latest Posts

ಫುಡ್ ಸೇಫ್ಟಿ ಲೈಸನ್ಸ್ ಆನ್‌ಲೈನ್ ಮೂಲಕ ಪಡೆಯಲು ಅವಕಾಶ

ಹೊಸದಿಗಂತ ವರದಿ ಮಂಗಳೂರು:

ಮಂಗಳೂರಿನ ಅತ್ತಾವರ ಬಳಿಯ ಐಎಂಎ ಕಟ್ಟಡದಲ್ಲಿ ಕಚೇರಿ ಹೊಂದಿರುವ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರವು ಜಿಲ್ಲೆಯಾದ್ಯಂತ ಭ್ರಷ್ಟಾಚಾರ ವಿರೋಧಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದೆ. ಇದರೊಂದಿಗೆ ಆಹಾರ ಉದ್ಯಮಿಗಳು ಫುಡ್ ಸೇಫ್ಟಿ ಲೈಸನ್ಸ್‌ಗಳನ್ನು ಆನ್‌ಲೈನ್ ವ್ಯವಸ್ಥೆಯ ಮೂಲಕವೇ ಪಡೆದುಕೊಳ್ಳುವ ವ್ಯವಸ್ಥೆ ಮಾಡಿದೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ವಿಭಾಗದ ಅಂಕಿತ ಅಧಿಕಾರಿ ಡಾ.ಪ್ರವೀಣ್ ಕುಮಾರ್ ಪಿ.ಎಚ್., ಫುಡ್ ಸೇಫ್ಟಿ ಲೈಸನ್ಸ್‌ಗಳನ್ನು ಆನ್‌ಲೈನ್ ವ್ಯವಸ್ಥೆಯ ಮೂಲಕವೇ ಪಡೆದುಕೊಳ್ಳುವುದರಿಂದ ದಲ್ಲಾಳಿಗಳಿಗೆ ಕಡಿವಾಣ ಬೀಳುವುದರೊಂದಿಗೆ ಭ್ರಷ್ಟಾಚಾರಕ್ಕೂ ಕಡಿವಾಣ ಹಾಕಿದಂತಾಗುತ್ತದೆ ಎಂದರು.
ಆಹಾರ ಉದ್ಯಮಗಳಿಗೆ ಸಂಬಂಧಿಸಿ ಟ್ರೇಡ್ ಲೈಸನ್ಸ್ ಪಡೆದವರು ಕೇವಲ www.foscos.fssai.gov.in ಮೂಲಕವೇ ಅರ್ಜಿ ಸಲ್ಲಿಸಬೇಕು. ಇತರೆ ನಕಲಿ ವೆಬ್‌ಸೈಟ್‌ಗಳ ಮೊರೆ ಹೋಗಬಾರದು. ಅರ್ಜಿ ಸಲ್ಲಿಸುವಾಗ ಅಗತ್ಯ ದಾಖಲೆಗಳಾದ ಆಧಾರ್ ಕಾರ್ಡ್ ಸಂಖ್ಯೆ, ಉದ್ಯಮ ಸ್ಥಳದ ವಿಳಾಸದ ದಾಖಲೆ, ಟ್ರೇಡ್ ಲೈಸೆನ್ಸ್, ಜಿಎಸ್‌ಟಿ ಇತ್ಯಾದಿಗಳನ್ನು ಅಪ್‌ಲೋಡ್ ಮಾಡಬೇಕು. ಹಣಪಾವತಿಗೆ ಕೂಡ ಆನ್‌ಲೈನ್‌ನಲ್ಲಿಯೇ ಅವಕಾಶ ಕಲ್ಪಿಸಲಾಗಿದೆ. ಸರಿಯಾಗಿ ಭರ್ತಿ ಮಾಡಿದ ಅರ್ಜಿಗಳನ್ನು ಪರಿಶೀಲಿಸಿ ಲೈಸೆನ್ಸ್‌ನ್ನು ಮೈಲ್ ಮಾಡಲಾಗುತ್ತದೆ. ಆಹಾರ ಉದ್ಯಮಿಗಳು ಮೈಲ್‌ನಿಂದ ಲೈಸೆನ್ಸ್ ಮುದ್ರಿಸಿಕೊಳ್ಳಬೇಕು. ಕಚೇರಿಗೆ ಬರುವ ಅಗತ್ಯವೇ ಇರುವುದಿಲ್ಲ. ಅಲ್ಲದೆ ದಲ್ಲಾಳಿಗಳ ಹಾವಳಿಯಿಂದಲೂ ಬಚಾವಾಗಬಹುದು. ಯಾವುದೇ ಖರ್ಚಿಲ್ಲದೆ ಲೈಸೆನ್ಸ್ ದೊರೆಯಲಿದೆ ಎಂದು ಡಾ.ಪ್ರವೀಣ್ ವಿವರಿಸಿದರು.
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವಾಗ ಯಾವುದೇ ಸಮಸ್ಯೆಯಾದರೆ ತಕ್ಷಣ ೮೨೧೭೭೪೯೪೮೧(ಡಾ.ಪ್ರವೀಣ್ ಕುಮಾರ್) ಕರೆ ಮಾಡಿ ಸಲಹೆ ಪಡೆಯಬಹುದು. ಕೆಲವು ಸೈಬರ್‌ಗಳ ಮೂಲಕ ಅರ್ಜಿ ಹಾಕಿ ಸೈಬರ್‌ನ ನಂಬರ್ ಅಥವಾ ಮೈಲ್ ಐಡಿ ನೀಡಿದವರು ತಮ್ಮದೇ ಮೈಲ್ ಮತ್ತು ನಂಬರ್‌ನ್ನು ದಾಖಲಿಸಲು ಅರ್ಜಿ ಸಲ್ಲಿಸಿದರೆ ತಕ್ಷಣ ಬದಲಾಯಿಸಿಕೊಡಲಾಗುವುದು. ಕುಳಿತಲ್ಲಿಂದಲೇ ಲೈಸನ್ಸ್ ಪಡೆಯುವ ಈ ವ್ಯವಸ್ಥೆಯನ್ನು ಆಹಾರ ಉದ್ಯಮಿಗಳು ಸದುಪಯೋಗಪಡಿಸಿಕೊಳ್ಳಬೇಕು ಎಂದವರು ಹೇಳಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss