ಹೊಸ ದಿಗಂತ ವರದಿ, ಚಿಕ್ಕಬಳ್ಳಾಪುರ:
ಪ್ರಸಕ್ತ ಸಾಲಿನ ಆರ್ಥಿಕ ವರ್ಷ ಮುಕ್ತಾಯಕ್ಕೆ ಇನ್ನೊಂದು ತಿಂಗಳು ಮಾತ್ರವೇ ಬಾಕಿ ಇದ್ದು, ಹಾಗಾಗಿ ಫೆಬ್ರುವರಿ 15 ರೊಳಗೆ ಎಲ್ಲಾ ಇಲಾಖೆಗಳ ಅನುದಾನ ಸಂಪೂರ್ಣವಾಗಿ ಬಳಕೆಯಾಗಬೇಕು ಹಾಗೂ ಬಾಕಿ ಇರುವ ಎಲ್ಲಾ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಂ.ಬಿ.ಚಿಕ್ಕನರಸಿಂಹಯ್ಯ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯಿತಿ ಸಭಾಂಗಣಲ್ಲಿ ಗುರುವಾರ ನಡೆದ ಜಿಪಂ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
2020-21ನೇ ಸಾಲಿನ ಆರ್ಥಿಕ ವರ್ಷ ಮುಕ್ತಾಯಕ್ಕೆ ಒಂದು ತಿಂಗಳು ಮಾತ್ರವೇ ಬಾಕಿ ಇದೆ. ಕೆಲವೊಮ್ಮೆ ಫೆಬ್ರವರಿ 15ಕ್ಕೆ ಆರ್ಥಿಕ ವರ್ಷ ಕೊನೆಗೊಳ್ಳುವ ಸಾಧ್ಯತೆಯಿದ್ದು, ಅಷ್ಟರೊಳಗೆ ಬಿಡುಗಡೆಯಾಗಿರುವ ಎಲ್ಲಾ ಅನುದಾನವನ್ನು ಖರ್ಚು ಮಾಡಬೇಕು. ಯಾವುದೇ ರೀತಿಯಲ್ಲೂ ಇಲಾಖೆ ಅನುದಾನ ವಾಪಸ್ ಹೋಗದಂತೆ ನೋಡಿಕೊಳ್ಳಬೇಕು. ಒಂದು ವೇಳೆ ಅನುದಾನ ವಾಪಸ್ ಹೋದರೆ ಆಯಾ ಇಲಾಖೆ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ಹೊಣೆಯನ್ನಾಗಿ ಮಾಡಲಾಗುವುದು ಎಂದು ಹೇಳಿದರು.
ಹಲವು ಇಲಾಖೆಗಳಲ್ಲಿ ಕೆಲವೊಂದು ಕಾಮಗಾರಿಗಳು ಇನ್ನೂ ಪ್ರಾರಂಭಿಸಿಲ್ಲ ಎಂದು ತಿಳಿದು ಬಂದಿದೆ. ಅವು ಸೇರಿದಂತೆ ಬಾಕಿ ಇರುವ ಎಲ್ಲಾ ಕಾಮಗಾರಿಗಳನ್ನು ಮುಂದಿನ ಒಂದು ತಿಂಗಳೊಳಗೆ ಪೂರ್ಣಗೊಳಿಸಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ ಕಾರ್ಯಪಾಲಕ ಅಭಿಯಂತರ ಶಿವಕುಮಾರ್ ಲೋಕೂರ್ ಮಾತನಾಡಿ, ಜಿಲ್ಲೆಯಲ್ಲಿ ಪ್ರಸ್ತುತ 42 ಗ್ರಾಮಗಳನ್ನು ನೀರಿನ ಸಮಸ್ಯಾತ್ಮಕ ಗ್ರಾಮಗಳು ಎಂದು ಗುರ್ತಿಸಲಾಗಿದೆ. ಚಿಂತಾಮಣಿಯಲ್ಲಿ ಅತಿ ಹೆಚ್ಚು ಸಮಸ್ಯಾತ್ಮಕ ಗ್ರಾಮಗಳು ಇದ್ದು, ಒಟ್ಟು 17 ಗ್ರಾಮಗಳಲ್ಲಿ ನೀರಿಗೆ ಸಮಸ್ಯೆ ಇದೆ. ಅದೇ ರೀತಿ ಬಾಗೇಪಲ್ಲಿಯಲ್ಲಿ 3 ಗ್ರಾಮ ಶಿಡ್ಲಘಟ್ಟದಲ್ಲಿ 11 ಗ್ರಾಮದಲ್ಲಿ, ಚಿಕ್ಕಬಳ್ಳಾಪುರ 3 ಗ್ರಾಮಗಳಲ್ಲಿ ನೀರಿಗೆ ಸಮಸ್ಯೆ ಇದೆ ಈ ಪೈಕಿ ಮೂರು ಗ್ರಾಮಗಳಿಗೆ ಟ್ಯಾಂಕರ್ ಮೂಲಕ ಹಾಗೂ 39 ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ ಎಂದು ತಿಳಿಸಿದರು.
2020-21ನೇ ಸಾಲಿನ ಜಿಲ್ಲಾ ಪಂಚಾಯತ್ನ ಲಿಂಕ್ ಡಾಕ್ಯೂಮೆಂಟ್ನಲ್ಲಿ ನಿಗಧಿ ಪಡಿಸಿರುವ ಅನುದಾನದ ಕ್ರಿಯಾ ಯೋಜನೆ, ಜಿಲ್ಲಾ ಪಂಚಾಯತ್ಗೆ ನಿಗಧಿಪಡಿಸಿರುವ ಅಭಿವೃದ್ಧಿ ಅನುದಾನದ ಕ್ರಿಯಾ ಯೋಜನೆ ಹಾಗೂ ಜಿಲ್ಲಾ ಪಂಚಾಯತ್ನ 2019-20ರ ವಾರ್ಷಿಕ ಲೆಕ್ಕ ಪತ್ರಕ್ಕೆ ಸಭೆಯಲ್ಲಿ ಅನುಮೋದನೆ ನೀಡಲಾಯಿತು.
ಇದೇ ವೇಳೆ ಜಿಲ್ಲಾ ಪಂಚಾಯಿತಿಯ ವಾರ್ಷಿಕ ಆಡಳಿತ ವರದಿ-2019-2020 ಕೈಪಿಡಿ ಹಾಗೂ ಜಿಲ್ಲಾ ಪಂಚಾಯಿತಿಯ 2021ನೇ ವರ್ಷದ ಕ್ಯಾಲೆಂಡರ್ ಮತ್ತು ದಿನಚರಿ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಸರಸ್ವತಮ್ಮ ಅಶ್ವತ್ಥನಾರಾಯಣಗೌಡ, ಸಿಇಒ ಪಿ.ಶಿವಶಂಕರ್ ಹಾಗೂ ಜಿಲ್ಲಾ ಪಂಚಾಯಿತಿ ವಿವಿಧ ಸ್ಥಾಯಿ ಸಮಿತಿಗಳ ಅಧ್ಯಕ್ಷರು, ಸದಸ್ಯರು ಹಾಗೂ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.