ಹೊಸದಿಗಂತ ಆನ್ಲೈನ್ ಡೆಸ್ಕ್ :
ಫ್ಯಾಷನ್ ಗೋಲ್ಡ್ ಜುವೆಲ್ಲರಿ ವಂಚನೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಶನಿವಾರ ಸಂಜೆ ಬಂಧಿತನಾಗಿರುವ ಮಂಜೇಶ್ವರ ಶಾಸಕ ಎಂ.ಸಿ. ಕಮರುದ್ದೀನ್ ಗೆ ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.
ಬೆಳಿಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ವಿಚಾರಣೆ ನಡೆಸಿದ್ದ ಕ್ರೈಂ ಬ್ರಾಂಚ್ ಪೊಲೀಸರು ಬಳಿಕ ಕಮರುದ್ದೀನ್ ಅವರನ್ನು ಬಂಧಿಸಿ ಕಾಞ೦ಗಾಡ್ ಮೆಜಿಸ್ಟ್ರೇಟ್ ಮುಂದೆ ಹಾಜರು ಪಡಿಸಿದ್ದರು.
ನ್ಯಾಯಾಧೀಶರ ಆದೇಶ ಹೊರಬೀಳುತ್ತಿದ್ದಂತೆಯೇ ಶಾಸಕರನ್ನು ಕಾಞಂಗಾಡಿನ ಜಿಲ್ಲಾ ಕಾರಾಗೃಹದ ಕೋವಿಡ್ ಕೇಂದ್ರಕ್ಕೆ ಸ್ಥಳಾಂತರಿಸಲಾಯಿತು. ಈ ಪ್ರಕರಣದಲ್ಲಿ ಆರೋಪ ಸಾಬೀತಾದರೆ ಕಮರುದ್ದೀನ್ ಏಳು ವರ್ಷಗಳ ಜೈಲು ಶಿಕ್ಷೆ ಅನುಭವಿಸುವ ಸಾಧ್ಯತೆ ಇದೆ. ಈ ನಡುವೆ ಜಾಮೀನು ಕೋರಿ ಕಮರುದ್ದೀನ್ ಸಲ್ಲಿಸಿರುವ ಅರ್ಜಿಯ ವಿಚಾರಣೆ ಸೋಮವಾರ ವಿಚಾರಣೆಗೆ ಕೈಗೆತ್ತಿಕೊಳ್ಳಲಿದೆ. ಪ್ರಕರಣಕ್ಕೆ ಸಂಬಂಧಿಸಿ ವ್ಯವಸ್ಥಾಪಕ ನಿರ್ದೇಶಕ ಟಿ.ಕೆ ಪೂಕೋಯ ತಂಘಳ್ ತಲೆ ಮರೆಸಿಕೊಂಡಿದ್ದು, ವಿಚಾರಣೆಗೆ ಹಾಜರಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ .
ಏನಿದು ಪ್ರಕರಣ?
2006 ರಲ್ಲಿ ಚಂದೇರ ಪ್ರಧಾನ ಕೇಂದ್ರವಾಗಿಸಿಕೊಂಡು ಫ್ಯಾಶನ್ ಗೋಲ್ಡ್ ಇಂಟರ್ ನ್ಯಾಷನಲ್ ಆರಂಭಗೊಂಡಿತ್ತು. ಈ ಕಂಪೆನಿಯಲ್ಲಿ 800 ರಷ್ಟು ಮಂದಿ 150 ಕೋಟಿ ರೂ.ಗಳಷ್ಟು ಠೇವಣಿ ಹೂಡಿದ್ದು, ಹಲವಾರು ಮಂದಿ ನಗದು ಹಾಗೂ ಇನ್ನೂ ಹಲವಾರು ಮಂದಿ ಚಿನ್ನಾಭರಣ ವಾಗಿ ಠೇವಣಿ ಹೂಡಿದ್ದರು. ಆರಂಭದ ದಿನಗಳಲ್ಲಿ ಠೇವಣಿ ದಾರರಿಗೆ ಲಾಭದ ಮೊತ್ತವು ನೀಡಲಾಗಿತ್ತು. ಆದರೆ ಕಳೆದ ಒಂದು ವರ್ಷದಿಂದ ಲಾಭದ ಮೊತ್ತ ಸ್ಥಗಿತಗೊಂಡಿತ್ತು. ಕೆಲವೇ ತಿಂಗಳಲ್ಲಿ ಜ್ಯುವೆಲ್ಲರಿಯ ಒಂದೊಂದು ಶಾಖೆಗಳನ್ನೂ ಮುಚ್ಚಲಾಗಿದ್ದು, ಆತಂಕಗೊಂಡ ಹೂಡಿಕೆದಾರರು ಪೊಲೀಸ್ ಠಾಣೆ ಮೆಟ್ಟಲೇರಿದ್ದರು. ಕಾಸರಗೋಡು , ಚಂದೇರ, ಪಯ್ಯನ್ನೂರು ಪೊಲೀಸ್ ಠಾಣೆಗಳಲ್ಲಿ ವಂಚನೆ ಪ್ರಕರಣ ದಾಖಲಾಗಿತ್ತು. ಮಂಜೇಶ್ವರ ಶಾಸಕರ ವಿರುದ್ಧ ಮೊದಲ ಪ್ರಕರಣ ಆ. 27 ರಂದು ದಾಖಲಾಗಿದ್ದು, ಬಳಿಕ ಕಣ್ಣೂರು ಮತ್ತು ಕಾಸರಗೋಡು ಜಿಲ್ಲೆಗಳಲ್ಲಾಗಿ ಒಟ್ಟು 109 ಪ್ರಕರಣಗಳು ದಾಖಲಾಗಿವೆ. ಸುಮಾರು 800 ಮಂದಿ ಹೂಡಿಕೆದಾರರಿಂದ 150 ಕೋಟಿ ರೂ. ಗಳಿಗಿಂತ ಹೆಚ್ಚು ವಂಚಿಸಲಾಗಿದೆ ಎಂದು ಆರೋಪಿಸಲಾಗಿದೆ. ದೂರಿನ ಹಿನ್ನೆಲೆಯಲ್ಲಿ ವಿಶೇಷ ತಂಡವು ತನಿಖೆ ಆರಂಭಿಸಿತ್ತು.
ವಂಚನೆ ಆರೋಪ ನಿಲ್ಲುವುದಿಲ್ಲ!
ಆರೋಪಿ ಎಂ.ಸಿ.ಖಮರುದ್ದೀನ್ ಪರ ವಕೀಲ ಕೆ.ವಿನೋದ್ ಕುಮಾರ್ ಪ್ರತಿಕ್ರಿಯಿಸಿ, ದೂರುಗಳನ್ನು ಪರಿಶೀಲಿಸುವ ಆಧಾರದ ಮೇಲೆ ವಂಚನೆ ಆರೋಪ ನಿಲ್ಲುವುದಿಲ್ಲ. ಇದು ಸಿವಿಲ್ ಪ್ರಕರಣವಾಗಿದೆ. ಮಾರಾಟಕ್ಕಾಗಿ ಹೂಡಿಕೆಯನ್ನು ಒಪ್ಪಿ ಬಳಿಕ ಮಾರಾಟ ಕುಸಿದಾಗ ಹಣವನ್ನು ಹಿಂದಿರುಗಿಸಲಿಲ್ಲ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಜ್ಯುವೆಲ್ಲರಿ ನಷ್ಟದ ಕಾರಣ ನೀಡಿ ಮುಚ್ಚುಗಡೆಗೊಳಿಸುವ ಮೊದಲು ಹೂಡಿಕೆದಾರರು ಲಾಭಾಂಶವನ್ನು ಪಡೆದಿದ್ದಾರೆ ಎಂದು ತಿಳಿಸಿದ್ದಾರೆ.