ಸ್ವೀಡನ್: ಹವಾಮಾನ ವೈಪರೀತ್ಯದ ವಿರುದ್ಧ ನಡೆಸಿದ ಹೋರಾಟದ ಮೂಲಕ ವಿಶ್ವದ ಗಮನ ಸೆಳೆದ ಪರಿಸರವಾದಿ ಗ್ರೇಟಾ ಥನ್ ಬರ್ಗ್ ವಿಶಿಷ್ಟ ರೀತಿಯಲ್ಲಿ ಶುಕ್ರವಾರ ತಮ್ಮ ಹುಟ್ಟು ಹಬ್ಬ ಆಚರಿಸಿಕೊಂಡರು.
17ನೇ ವರ್ಷಕ್ಕೆ ಕಾಲಿಟ್ಟ ಗ್ರೇಟಾ ಥನ್ ಬರ್ಗ್ ಪ್ರತಿ ಶುಕ್ರವಾರದಂತೆ ಈ ಶುಕ್ರವಾರವೂ ಪರಿಸರ ಹೋರಾಟ ಮುಂದುವರೆಸಿದ್ದು, ಸ್ವೀಡನ್ ಸಂಸತ್ ಎದುರು ಸತತ 7 ಗಂಟೆಗಳ ಕಾಲ ಪ್ರತಿಭಟನೆ ನಡೆಸಿದರು.
“ಟೈಮ್ ಮ್ಯಾಗಸೈನ್-2019” ವರ್ಷದ ವ್ಯಕ್ತಿಯೂ ಆಗಿರುವ ಗ್ರೇಟಾ ಥನ್ ಬರ್ಗ್, ಪರಿಸರ ಸಂರಕ್ಷಣೆಗೆ ಸರ್ಕಾರಗಳು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಕಳೆದ ಎರಡು ವರ್ಷಗಳಿಂದ ಫ್ರೈಡೆ ಫಾರ್ ಫ್ಯೂಚರ್ ಹೆಸರಿನಲ್ಲಿ ಸ್ವೀಡನ್ ಸಂಸತ್ ಎದುರು ಸ್ಕೂಲ್ ಸ್ಟ್ರೈಕ್ ಫಾರ್ ಕ್ಲೈಮೆಟ್ ಎಂಬ ಪ್ರತಿಭಟನೆ ನಡೆಸುತ್ತ ಬಂದಿದ್ದಾರೆ. ಪ್ರತಿ ಶುಕ್ರವಾರದಂತೆ ಈ ಶುಕ್ರವಾರವೂ ಗ್ರೇಟಾ ಥನ್ ಬರ್ಗ್ ಪ್ರತಿಭಟನೆ ಮುಂದುವರೆಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಗ್ರೇಟಾ, ಪ್ರತಿ ಶುಕ್ರವಾರದಂತೆ ಈ ಶುಕ್ರವಾರ ಕೂಡ ನಾನು ಪ್ರತಿಭಟನೆ ನಡೆಸಿದ್ದೇನೆ. ಬೆಳಗ್ಗೆ 8 ರಿಂದ ಮಧ್ಯಾಹ್ನ 3ವರೆಗೂ ಪ್ರತಿಭಟನೆ ನಡೆಸಿದ್ದೇನೆ ಎಂದ ಅವರು, ಪರಿಸರಕ್ಕಾಗಿ ನಾನು ಏನಾದರೂ ಮಾಡುತ್ತೇನೆ. ಆದರೆ ಅದು ಪರಿಣಾಮ ಬೀರುವಂತಿರಬೇಕು ಎಂದಿದ್ದಾರೆ.
ಹವಾಮಾನ ಬದಲಾವಣೆಗೆ ಸಂಬಂಧ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಒತ್ತಾಯಿಸಿ ಗ್ರೇಟಾ ಈಗಾಗಲೇ ಜಗತ್ತಿನ ಹಲವು ದೇಶಗಳನ್ನು ಸುತ್ತಿದ್ದಾರೆ. ಕಾರು, ರೈಲು, ದೋಣಿಗಳಲ್ಲಿ ಮಾತ್ರ ಪ್ರಯಾಣಿಸುವ ಈಕೆ ಇಂದಿಗೂ ಪ್ರವಾಸಕ್ಕಾಗಿ ವಿಮಾನ ಬಳಸಿಲ್ಲ.