ಬಂಗಾರದ ಅಂಗಡಿ ಮಾಲೀಕನಿಗೆ ಕಂಟ್ರಿ ಪಿಸ್ತೂಲ್ ತೋರಿಸಿ ಚಿನ್ನಾಭರಣ ಸುಲಿಗೆ: ಆರೋಪಿ ಅಂದರ್!

0
75

ಬೆಳಗಾವಿ: ಬಂಗಾರದ ಅಂಗಡಿ ಮಾಲೀಕನಿಗೆ ಕಂಟ್ರಿ ಪಿಸ್ತೂಲ್ ತೋರಿಸಿ ಚಿನ್ನಾಭರಣ ಸುಲಿಗೆ ಮಾಡಿದ್ದ ಆರೋಪಿಯನ್ನು ಬಂಧಿಸಿ ಆತನಿಂದ ಮೂರು ಲಕ್ಷ ರೂ. ಬಂಗಾರ ಹಾಗೂ ಕಂಟ್ರಿ ಪಿಸ್ತೂಲ್, ಮೂರು ಜೀವಂತ ಗುಂಡು ಮತ್ತು ಒಂದು ಬೈಕ್ ವಶಪಡಿಸಿಕೊಳ್ಳಲಾಗಿದೆ ಎಂದು ಅಪರಾಧ ವಿಭಾಗದ ಡಿಸಿಪಿ ಯಶೋಧಾ ವಂಟಗೂಡಿ ತಿಳಿಸಿದರು.
ಅವರು ಸೋಮವಾರ ಬೆಳಗಾವಿ ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ ಜೂ. 27ರಂದು ಹಿಂಡಲಗಾ ಬಳಿ ಇರುವ ವಿಜಯನಗರದಲ್ಲಿನ ಸಮೃದ್ದಿ ಜ್ಯುವೆಲರ್ಸ್ ಅಂಗಡಿಯಲ್ಲಿ ಬಂಗಾರದ ಖರೀದಿ ಮಾಡುವ ನೆಪದಲ್ಲಿ ಬಂಗಾರದ ನೆಕ್ಲೆಸ್‍ಗಳನ್ನು ತೋರಿಸಿ ಎಂದು ಹೇಳಿ ಸುಮಾರು ಮೂರು ಲಕ್ಷ ರೂ. ಚಿನ್ನಾಭರಣವನ್ನು ಅಂಗಡಿ ಮಾಲಿಕನಿಗೆ ಕಂಟ್ರಿ ಪಿಸ್ತೂಲ್ ತೋರಿಸಿ ದೋಚಿಕೊಂಡು ಪರಾರಿಯಾಗಿದ್ದ ಮಜಗಾವಿಯ ವೈಭವ ರಾಜೇಂದ್ರ ಪಾಟೀಲ (29) ಎಂಬ ಆರೋಪಿಯನ್ನು ಕ್ಯಾಂಪ್ ಪೊಲೀಸರು ಬಂಧಿಸಿದ್ದಾರೆ ಎಂದರು.
ಕಂಟ್ರಿ ಪಿಸ್ತೂಲ್ ತೋರಿಸಿ ಚಿನ್ನಾಭರಣ ದೋಚಿದ್ದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಕ್ಯಾಂಪ್ ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚಿ ಆತನಿಂದ ಮೂರು ಲಕ್ಷ ರು. ಬಂಗಾರ ಹಾಗೂ ಕಂಟ್ರಿ ಪಿಸ್ತೂಲ್ ಹಾಗೂ ಬೈಕ್‍ನು ವಶಪಡಿಸಿಕೊಳ್ಳಲಾಗಿದೆ. ಈತನಿಗೆ ಕಂಟ್ರಿ ಪಿಸ್ತೂಲ್ ಹಾಗೂ ಜೀವಂತ ಮೂರು ಗುಂಡುಗಳು ಎಲ್ಲಿಂದ ಬಂದವು ಎನ್ನುವುದು ತನಿಖೆ ನಡೆಸಲಾಗುತ್ತಿದೆ. ಬಂಧಿತ ಆರೋಪಿ ವೈಭವ ರಾಜೇಂದ್ರ ಪಾಟೀಲ ಮಾಡಿದ ಸಾಲ, ವೇಗವಾಗಿ ಅಡ್ಡದಾರಿಯಲ್ಲಿ ಹಣ ಗಳಿಸುವ ದುರುದ್ದೇಶದಿಂದ ಕಳ್ಳತನ ಮಾಡಿರುವುದಾಗಿ ಪ್ರಾಥಮಿಕ ತನಿಖೆಯಲ್ಲಿ ಬಾಯಿ ಬಿಟ್ಟಿದ್ದಾನೆ. ಈತನ ಬಳಿ ದೊರೆತ ಕಂಟ್ರಿ ಪಿಸ್ತೂಲ್ ಗೌರಿಲಂಕೇಶ ಹತ್ಯೆಗೆ ಸಂಬಂಧವಿದೆಯಾ ಎಂಬುದು ತನಿಖೆಯ ವೇಳೆ ತಿಳಿದು ಬರಲಿದೆ ಎಂದು ಹೇಳಿದರು.
ಕಳೆದ ಜೂ 27ರಂದು ಬಂಗಾರದ ಅಂಗಡಿಯನ್ನು ದೋಚಿಕೊಂಡು ಪರಾರಿಯಾಗಿದ್ದ ಆರೋಪಿಗಾಗಿ ಕ್ಯಾಂಪ್ ಪೊಲೀಸರು ನಗರ ಪೊಲೀಸ್ ಆಯುಕ್ತ ಡಾ. ಕೆ. ತ್ಯಾಗರಾಜನ್, ಡಿಸಿಪಿ ಸೀಮಾ ಲಾಟ್ಕರ್ ಮಾರ್ಗದರ್ಶನದಂತೆ ತಂಡ ರಚನೆ ಮಾಡಿಕೊಂಡು ಆರೋಪಿಯನ್ನು ಪತ್ತೆ ಹಚ್ಚಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಖಡೇಬಜಾರ್ ಎಸಿಪಿ ಎ.ಚಂದ್ರಪ್ಪ, ಕ್ಯಾಂಪ್ ಸಿಪಿಐ ಡಿ.ಸಂತೋಷ ಕುಮಾರ ಸೇರಿದಂತೆ ಇನ್ನಿತರರು ಭಾಗಿಯಾಗಿದ್ದರು. ಇವರಿಗೆ ನಗರ ಪೊಲೀಸ್ ಇಲಾಖೆಯಿಂದ ಸೂಕ್ತ ಬಹುಮಾನ ನೀಡಲಾಗುವುದು ಎಂದರು.
ಖಡೇಬಜಾರ್ ಎಸಿಪಿ ಎ.ಚಂದ್ರಪ್ಪ, ಸಿಪಿಐ ಡಿ.ಸಂತೋಷ ಕುಮಾರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here