Monday, August 15, 2022

Latest Posts

ಬಂಟ್ವಾಳದಲ್ಲಿ ಉಚಿತ ಪಡಿತರ ವಿತರಣೆ ಅಗತ್ಯ: ಮಾಜಿ ಸಚಿವ ಬಿ.ರಮಾನಾಥ ರೈ

ಬಂಟ್ವಾಳ: ಕರೋನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಲಾಕ್ ಡೌನ್ ಪಾಲನೆ ಸಂದರ್ಭ ಬಡವರು ಹಸಿವಿನಿಂದ ಸಾಯುವ ಪರಿಸ್ಥಿತಿ ನಿರ್ಮಾಣವಾಗಬಾರದು. ಕೇರಳ ಮಾದರಿಯಂತೆ ಅಂಗನವಾಡಿ ಮೂಲಕ ಬಡವರಿಗೆ ಉಚಿತವಾಗಿ ನಿತ್ಯ ಪಡಿತರ ವಿತರಿಸುವಂತೆ ದ.ಕ.ಜಿಲ್ಲೆಯಲ್ಲೂ  ಕ್ರಮ ಕೈಗೊಳ್ಳುವ ತುರ್ತು ಅಗತ್ಯವಿದೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.

ಬಿ.ಸಿ.ರೋಡಿನಲ್ಲಿ ಅವರು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ,  ಕೊರೊನಾ ಜಾಗತಿಕವಾಗಿ ವ್ಯಾಪಿಸಿದ್ದು, ಇದರ ನಿಗ್ರಹಕ್ಕೆ ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರ ಕೈಗೊಂಡ ಕ್ರಮಗಳಿಗೆ ನಮ್ಮ ಸಹಕಾರ ಇದೆ ಎಂದ‌ ಅವರು,  ಅಕ್ಕಿಯ ಜೊತೆಗೆ ಸಕ್ಕರೆ, ಚಾಹುಡಿ, ಧವಸಧಾನ್ಯದಂತ ಎಲ್ಲಾ ದಿನಬಳಕೆಯ ವಸ್ತುಗಳನ್ನು ಕೂಡ ಉಚಿತವಾಗಿ ಸರ್ಕಾರ ಬಡವರ ಪ್ರತಿ  ಮನೆಗೂ ತಲುಪಿಸುವ ವ್ಯವಸ್ಥೆ  ಶೀಘ್ರ ನಡೆಯಬೇಕು ಎಂದರು.

ಗ್ರಾಮ ಪಂಚಾಯಿತ್ ಗಳನ್ನು ಕೇಂದ್ರೀಕರಿಸಿಕೊಂಡು ಕಾರ್ಯಪಡೆಯ ಮೂಲಕ ಜನರಿಗೆ ನೆರವಾಗಬೇಕು ಎಂದು ಸಲಹೆ ನೀಡಿದ ಅವರು, ಅತಿಥಿ ಕಾರ್ಮಿಕರಿಗೆ ಪಂಚಾಯಿತಿಯಲ್ಲಿ ಗಂಜಿಕೇಂದ್ರ ತೆರೆದು ಅಲ್ಲಿ ಅವರಿಗೆ ಎಲ್ಲಾ ಸೌಕರ್ಯ ವನ್ನು ಒದಗಿಸುವಂತೆ ಒತ್ತಾಯಿಸಿದರು. ಮಂಗಳವಾರ ಲಾಕ್ ಡೌನ್ ಸಡಿಲಿಸಿ ದಿನಸಿ ಸಾಮಾಗ್ರಿ ಖರೀದಿಗೆ ಅವಕಾಶ ‌ನೀಡಲಾದ ಸಂದರ್ಭ, ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಕಾರ್ಯ‌ ನಿರೀಕ್ಷೆಯಂತೆ ನಡೆದಿಲ್ಲ, ಈ ಹಿನ್ನೆಲೆಯಲ್ಲಿ ಜನರ ಮನೆಗೇ ನೀಡುವ ವ್ಯವಸ್ಥೆ ಕಲ್ಪಿಸಬೇಕು ಎಂದವರು ತಿಳಿಸಿದರು.

ಪುರಸಭಾ ವ್ಯಾಪ್ತಿಯಲ್ಲೂ ಈವರೆಗೂ ಕಾರ್ಯಪಡೆ ರಚನೆ ಆಗಿಲ್ಲ ಎಂಬ ಮಾಹಿತಿ ಇದ್ದು, ಸರ್ಕಾರದ ಸುತ್ತೋಲೆಗೆ ಅವರು ಕಾಯಬೇಕಾಗಿಲ್ಲ, ಪುರಸಭೆಯ ಮುಖ್ಯಸ್ಥರ ನೇತೃತ್ವದಲ್ಲಿ  ತಕ್ಷಣ ಕಾರ್ಯಪಡೆಯನ್ನು ರಚಿಸಬೇಕು ಎಂದರಲ್ಲದೆ ನಗರ ಮಾತ್ರವಲ್ಲ ಗ್ರಾಮೀಣ ಭಾಗದಲ್ಲು ಕೊರೋನಾ ತಡೆಗಟ್ಟುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು, ಜಿಲ್ಲಾಡಳಿತ ಮತ್ತು ತಾಲೂಕಾಡಳಿತದೊಂದಿಗೆ ತಾನು  ನಿರಂತರ ಸಂಪರ್ಕದಲ್ಲಿದ್ದು, ಕೆಲ ಸಲಹೆಗಳನ್ನು ನೀಡಲಾಗುತ್ತಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್, ಬುಡಾ ಮಾಜಿ ಅಧ್ಯಕ್ಷ ಸದಾಶಿವ ಬಂಗೇರ, ಪುರಸಭಾ ಸದಸ್ಯ ಲುಕ್ಮಾನ್,ವೆಂಕಪ್ಪ ಪೂಜಾರಿ ಮೊದಲಾದವರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss