ಮಡಿಕೇರಿ: ಬಂಟ್ವಾಳ-ಮೈಸೂರು ರಾಷ್ಟ್ರೀಯ ಹೆದ್ದಾರಿ 275ರ ಎರಡು ಕಾಮಗಾರಿಗಳನ್ನು ಆದಷ್ಟು ಶೀಘ್ರ ಪೂರ್ಣಗೊಳಿಸದಿದ್ದರೆ, ಪ್ರಸಕ್ತ ಮಳೆಗಾಲದಲ್ಲಿ ಹೆದ್ದಾರಿ ಸಂಚಾರ ಬಹಳ ಕಷ್ಟವಾಗಲಿದೆ. ಅಲ್ಲದೆ, ರಸ್ತೆಗಳ ನಿರ್ವಹಣೆಯೂ ಅಸಾಧ್ಯವಾಗಲಿದೆ ಎಂದು ಕೊಡಗು-ಮೈಸೂರು ಕ್ಷೇತ್ರದ ಸಂಸದ ಪ್ರತಾಪ್ಸಿಂಹ ಅವರು ಕೇಂದ್ರ ಸರ್ಕಾರದ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಗಮನಸೆಳೆದಿದ್ದಾರೆ.
ನವದೆಹಲಿಯಲ್ಲಿ ಬುಧವಾರ ಹೆದ್ದಾರಿ ಸಚಿವಾಲಯದ ಮಹಾನಿರ್ದೇಶಕ ಐ.ಕೆ.ಪಾಂಡೆ ಅವರೊಂದಿಗೆ ಚರ್ಚೆ ನಡೆಸಿದ ಅವರು, ಬಂಟ್ವಾಳ-ಮೈಸೂರು ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಬಹಳ ತುರ್ತಾಗಿ ಕೈಗೊಳ್ಳಬೇಕಾದ ಎರಡು ಕಾಮಗಾರಿಗಳನ್ನು ಮಳೆಗಾಲ ಆರಂಭವಾಗುವ ಆತಂಕ ಹಾಗೂ ಅನಿವಾರ್ಯತೆ ಹಿನ್ನೆಲೆಯಲ್ಲಿ ಟೆಂಡರ್ ಅನುಮೋದನೆಗೆ ಕಾಯದೇ ಆರಂಭಿಸಲಾಗಿದೆ. ಈ ಕಾಮಗಾರಿಗಳನ್ನು ಮುಂದುವರಿಸಲು ಅವಕಾಶ ಮಾಡಿ ಕೊಡಬೇಕು ಎಂದು ಮನವಿ ಮಾಡಿದರು.
ರಾಷ್ಟ್ರೀಯ ಹೆದ್ದಾರಿ 275ರ 93.20 ಕಿಮೀ.ನಿಂದ 132.34 ಕಿ.ಮೀ.ವರೆಗಿನ ಮಡಿಕೇರಿ -ಕುಶಾಲನಗರ ಹೆದ್ದಾರಿಯ ಅಭಿವೃದ್ಧಿ ಕಾಮಗಾರಿ (ಅಂದಾಜು 24.73 ಕೋಟಿ ರೂ.), ಮತ್ತು ಸಂಪಾಜೆ ವಿಭಾಗದ ಸಂಪಾಜೆ ಘಾಟಿ ಬಳಿ ಕಾಂಕ್ರಿಟ್ ಚರಂಡಿ ಮತ್ತು ತಡೆಗೋಡೆ (ಅಂದಾಜು 47.27 ಕೋಟಿ ರೂ.) ನಿರ್ಮಾಣ ಕಾಮಗಾರಿಗಳು ಬಹುತೇಕ ಅಂತಿಮ ಹಂತಕ್ಕೆ ಬಂದಿವೆ.
ಕಳೆದೆರಡು ವರ್ಷ ಅತಿವೃಷ್ಟಿ ಮತ್ತು ಪ್ರವಾಹದ ಪರಿಣಾಮಗಳನ್ನು ಕಂಡಿದ್ದರಿಂದ ಈ ಕಾಮಗಾರಿಗಳನ್ನು ಮಳೆಗಾಲ ಆರಂಭಕ್ಕೂ ಮುನ್ನವೇ ಪೂರ್ಣಗೊಳಿಸುವ ಉದ್ದೇಶದಿಂದ ಟೆಂಡರ್ ಅನುಮೋದನೆಗೆ ಮುನ್ನವೇ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಈ ಕಾಮಗಾರಿಗಳನ್ನು ಜಿಎಸ್ಟಿ ಹೊರತುಪಡಿಸಿ ಕನಿಷ್ಟ ದರ ನಮೂದಿಸಿದ ಟೆಂಡರ್ದಾರರಿಗೆ ವಹಿಸಲಾಗಿದೆ. ಒಂದೊಮ್ಮೆ ಜಿಎಸ್ಟಿ ಕಾರಣದಿಂದ ಈ ಕಾಮಗಾರಿಗಳನ್ನು ತಡೆಹಿಸಿದರೆ, ಪ್ರಸಕ್ತ ಮಳೆಗಾಲದಲ್ಲಿ ಹೆದ್ದಾರಿ ಸಂಚಾರ ದುಸ್ತರವಾಗಲಿದೆ. ಅಲ್ಲದೆ, ರಸ್ತೆಗಳ ನಿರ್ವಹಣೆಯೂ ಅಸಾಧ್ಯವಾಗಲಿದೆ ಎಂದು ಅವರು ವಿವರಿಸಿದರು.
ಹೊಸದಾಗಿ ಟೆಂಡರ್ ಕರೆದರೆ ಅದರಿಂದ ಕಾಮಗಾರಿ 120 ದಿನಗಳಷ್ಟು ವಿಳಂಬವಾಗಲಿದೆ. ಮುಂಗಾರು ಮಳೆ ಆರ್ಭಟಿಸಲಾರಂಭಿಸಿದರೆ ವರ್ಷಾಂತ್ಯ ವೇಳೆಗೂ ಈ ಕಾಮಗಾರಿಯಲ್ಲಿ ಪ್ರಗತಿ ಕಾಣಲಾಗದು ಎಂದು ಪ್ರತಾಪ್ಸಿಂಹ ಮಾಹಿತಿ ನೀಡಿದರು.
ಕೇಂದ್ರ ಸರಕಾರ ಮಡಿಕೇರಿ-ಕುಶಾಲನಗರ ರಸ್ತೆ ಡಾಮರೀಕರಣಕ್ಕೆ ಸುಮಾರು 30 ಕೋಟಿ ರೂ. ಹಾಗೂ ಮಡಿಕೇರಿ -ಸಂಪಾಜೆ ರಸ್ತೆಯಲ್ಲಿ ತಡೆಗೋಡೆ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಸುಮಾರು 58 ಕೋಟಿ ರೂ. ಈಗಾಗಲೆ ಬಿಡುಗಡೆ ಮಾಡಿರುವುದನ್ನು ಇಲ್ಲಿ ಸ್ಮರಿಸಬಹುದು.