Monday, August 8, 2022

Latest Posts

ಬಂಧಗಳ ಬೆಸುಗೆಯ ಹಬ್ಬ ರಕ್ಷಾ ಬಂಧನ| ಶುಭ ಕೋರಿದ ರಾಷ್ಟ್ರಪತಿ ಕೋವಿಂದ್, ಪ್ರಧಾನಿ ಮೋದಿ

ಹೊಸದಿಲ್ಲಿ: ಶ್ರಾವಣಮಾಸದ ಪೂರ್ಣಿಮೆಯಂದು ರಕ್ಷಾಬಂಧನ ಆಚರಿಸಲಾಗುತ್ತಿದ್ದು, ಈ ದಿನವು ರಾಷ್ಟ್ರಾದ್ಯಂತ ಭ್ರಾತೃತ್ವವನ್ನು ಪಸರಿಸುವ ಅಪೂರ್ವ ಹಬ್ಬವಾಗಿ ಭಾರತದಲ್ಲಿ ಆಚರಿಸಲಾಗುತ್ತದೆ.

ರಕ್ಷಾ ಬಂಧನ ದಿನದಂದು ಇತಿಹಾಸವನ್ನೊಮ್ಮೆ ತಿರುಗಿ ನೋಡುವುದಾದರೆ ಹಿಂದೆ ಇಂದ್ರನ ಹೆಂಡತಿ ಶಚಿದೇವಿಯು ತನ್ನ ಪತಿ ಯುದ್ಧಕ್ಕೆ ಹೊರಡುವಾಗ ತನ್ನ ಸೀರೆಯ ಒಂದು ತುಂಡನ್ನು ಹರಿದು ‘ಜಯಶಾಲಿಯಾಗಿ ಬಾ’ ಎಂದು ಹಾರೈಸುತ್ತ ಇಂದ್ರನ ಕೈಗೆ ಕಟ್ಟಿ ಕಳುಹಿಸುತ್ತಾಳೆ, ಹೀಗೆ ಯುದ್ದಕ್ಕೆ ಹೊರಡುವಾಗ ತನ್ನ ಮನೆಯಲ್ಲಿರುವ ಮಡದಿ ಅಥವಾ ಸೋದರಿ ಸೈನಿಕರಿಗೆ ಬಲ ತುಂಬಲು ದೇವರ ಮುಂದಿಟ್ಟ ರಕ್ಷೆಯನ್ನು ಕಟ್ಟಿ ಕಳುಹಿಸುತಿದ್ದದ್ದು ವಾಡಿಕೆ.

ಹಾಗೆಯೇ ಈ ರಕ್ಷೆಯ ಇನ್ನೊಂದು ಪುರಾಣವೆಂದರೆ ಒಮ್ಮೆ ಕೃಷ್ಣ ಶಿಶುಪಾಲನ ಸಂಹಾರ ಮಾಡಲು ಸುದರ್ಶನ ಚಕ್ರ ಬಳಸುವ ಸಂದರ್ಭದಲ್ಲಿ ಕೃಷ್ಣನ ಬೆರಳಿಗೆ ತಗುಲಿ ಗಾಯವಾಗುತ್ತದೆ, ಆ ಸಮಯದಲ್ಲಿ ದ್ರೌಪದಿಯು ತನ್ನ ಸೀರೆಯ ತುಂಡನ್ನು ಗಾಯಕ್ಕೆ ಕಟ್ಟೀ ಉಪಚರಿಸುತ್ತಾಳೆ. ಈ ವೇಳೆ ಸಂತುಷ್ಟನಾದ ಕೃಷ್ಣನು ಸೋದರಿಯಾದ ದ್ರೌಪದಿಗೆ ನಿನಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುತ್ತೇನೆ ಎಂದು ತಿಳಿಸಿದ. ಹೀಗಾಗಿಯೇ ದ್ರೌಪದಿಯ ಮಾನ ಹಾನಿಯಾಗದಂತೆ ಕೃಷ್ಣನು ಕೌರವರಾದಿಗಳಿಂದ ಕಾಪಾಡಿದ್ದನ್ನು ನಾವು ನೆನಪಿಸಿಕೊಳ್ಳಬಹುದು.

ಕೊರೋನಾ ಸಾಂಕ್ರಾಮಿಕ ನಡುವೆ ದೇಶದಲ್ಲಿ ರಕ್ಷಾ ಬಂಧನವನ್ನು ಆಚರಿಸುತ್ತಿರುವ ಜನತೆಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಶುಭಹಾರೈಸಿದ್ದಾರೆ.

ರಕ್ಷಾ ಬಂಧನದ ಶುಭಾಶಯಗಳು! ರಾಖಿ ಎಂಬುದು ಪ್ರೀತಿ ಮತ್ತು ನಂಬಿಕೆಯ ಪವಿತ್ರ ದಾರವಾಗಿದ್ದು, ಸಹೋದರಿಯರನ್ನು ಸಹೋದರರೊಂದಿಗೆ ವಿಶೇಷ ಬಂಧವನ್ನು ಬಲಬಡಿಸುತ್ತದೆ. ಈ ದಿನ, ಮಹಿಳೆಯರ ಗೌರವ ಮತ್ತು ಘನತೆಯನ್ನು ಭದ್ರಪಡಿಸುವ ನಮ್ಮ ಬದ್ಧತೆಯನ್ನು ಪುನರುಚ್ಚರಿಸೋಣ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಟ್ವೀಟ್ ಮಾಡಿದ್ದಾರೆ.

ಪವಿತ್ರವಾದ ರಕ್ಷಾ ಬಂಧನ ಹಬ್ಬದಂದು ದೇಶದ ಜನತೆಗೆ ರಕ್ಷಾ ಬಂಧನದ ಶುಭಾಶಯಗಳು ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿ ಶುಭಾಶಯ ತಿಳಿಸಿದ್ದಾರೆ.

ಕೊರೋನಾ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿರುವ ಗೃಹ ಸಚಿವ ಅಮಿತ್ ಶಾ ದೇಶದ ಜನತೆಗೆ ರಕ್ಷಾ ಬಂಧನದ ಶುಭಾಶಯಗಳು ಎಂದು ಟ್ವೀಟ್ ಮಾಡಿದ್ದಾರೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss