ಬಜಪೆ: ಏನೂ ಅರಿಯದ 11 ತಿಂಗಳ ಎಳೆಯ ಕಂದಮ್ಮನ ಎದುರೇ ತಾಯಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಬಜಪೆಯ ವಿಜಯ ವಿಠಲ ಭಜನಾ ಮಂದಿರ ಬಳಿಯ ಮನೆಯೊಂದರಲ್ಲಿ ಶುಕ್ರವಾರ ಮಧ್ಯಾಹ್ನ ನಡೆದಿದೆ.
ಬಜಪೆಯ ಶಿಲ್ಪಾ ಜುವೆಲ್ಲರ್ಸ್ನ ಮಾಲಕ ಅಶೋಕ ಆಚಾರ್ಯ ಅವರ ಮಗಳು ಶಿಲ್ಪಾ ಆಚಾರ್ಯ (28) ಅವರು ತನ್ನ ತವರು ಮನೆಯಲ್ಲಿ ಯಾರೂ ಇಲ್ಲದ ವೇಳೆ ಪುಟ್ಟ ಮಗುವಿನ ಎದುರೇ ಡೆತ್ನೋಟ್ ಬರೆದಿಟ್ಟು ಕೃತ್ಯ ಎಸಗಿರುವುದಾಗಿ ತಿಳಿದು ಬಂದಿದೆ.
ಪತಿ ಪಡುಬಿದ್ರಿಯ ಶ್ರೀರಾಮ್ ಆಚಾರ್ಯ ಹಾಗೂ ಶಿಲ್ಪಾ ಅವರುಗಳು ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದಾಗ ಗರ್ಭಿಣಿಯಾಗಿದ್ದು ಹೆರಿಗೆಗೆ ಬಂದವರು ಊರಲ್ಲಿಯೇ ಇದ್ದು ಆನ್ಲೈನ್ನಲ್ಲಿ ಕೆಲಸ ನಿರ್ವಹಿಸುತ್ತಿದ್ದಳೆನ್ನಲಾಗಿದೆ.
ಮಹಾಲಯ ಕಾರ್ಯದ (ಶ್ರಾದ್ಧ) ಸಲುವಾಗಿ ಶಿಲ್ಪಾ ತಂದೆ-ತಾಯಿ ಅವರದೇ ಬೇರೊಂದು ಮನೆಯಲ್ಲಿರುವ ಸಮಯ ಮಧ್ಯಾಹ್ನ ಸುಮಾರು 11 ಗಂಟೆಯ ವೇಳೆಗೆ ಕೃತ್ಯ ಎಸಗಿರಬಹುದೆಂದು ಹೇಳಲಾಗಿದ್ದು ಆಕೆಯ ತಮ್ಮ ಸುಹಾಸ್ ಆಚಾರ್ಯ ಉದ್ಯೋಗದ ಸಂದರ್ಶನಕ್ಕೆಂದು ಮಂಗಳೂರಿಗೆ ಹೋಗಿದ್ಧಾತ ವಾಪಾಸ್ಸು ಬಂದು ನೋಡಿದಾಗ ಘಟನೆ ನಡೆದು ಬಹಳ ಹೊತ್ತಾಗಿದ್ದು ಮಗು ಅಳುತ್ತಾ ಓಡಿ ಬಂದ ಎಂದು ಪೊಲೀಸರಿಗೆ ನೀಡಿದ ಮಾಹಿತಿಯಲ್ಲಿ ಸುಹಾಸ್ ತಿಳಿಸಿದ್ದಾರೆ.